ಚಿತ್ರದುರ್ಗ: ಭದ್ರಾ ನೀರು ಪ್ರಾಯೋಗಿಕ ಪರೀಕ್ಷೆ ಮೂಲಕ ಚಿತ್ರದುರ್ಗ ಶಾಖಾ ಕಾಲುವೆಗೆ ಹರಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದ್ದು, ಈ ಕ್ಷಣವನ್ನು ಸಂಭ್ರಮಿಸಲು ಐಮಂಗಲ ಸಮೀಪದ ಭರಂಪುರದ ಬಳಿ ಸೆ.10ರಂದು ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ತಿಳಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಮುಖಂಡರು, ರೈತರು, ಕಾರ್ಮಿಕ ಸಂಘಟನೆ ಪದಾಧಿಕಾರಿಗಳು, ವಿವಿ ಸಾಗರದ ಜಲಾಶಯದ ಫೋಟೋ ಸ್ವೀಕರಿಸಿದ ಬಳಿಕ ಮಾತನಾಡಿದರು.
ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, “ಭದ್ರಾ ಯೋಜನೆ ಸಾಧ್ಯವೇ ಇಲ್ಲವೆಂಬ ಸ್ಥಿತಿಯಲ್ಲಿ ನೀರು ಹರಿದುಬರುತ್ತಿರುವುದು ನಮ್ಮಲ್ಲಿ ಸಂಭ್ರಮವನ್ನುಂಟು ಮಾಡಿದೆ. ಸಂಭ್ರಮೋತ್ಸವದ ಜೊತೆಗೆ ನಾವೆಲ್ಲರೂ ಮತ್ತೊಂದು ಹೋರಾಟಕ್ಕೆ ಸಜ್ಜಾಗಬೇಕಾಗಿದೆ. ರಾಷ್ಟ್ರೀಯ ಯೋಜನೆ ಘೋಷಣೆ, 6,200 ಕೋಟಿ ರೂ. ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ತರಬೇಕಿದೆ. ಜೊತೆಗೆ ಜಿಲ್ಲೆಯ ಯಾವುದೇ ಕೆರೆ-ಕಟ್ಟೆಗಳು ಯೋಜನೆ ವ್ಯಾಪ್ತಿಯಿಂದ ಕೈಬಿಟ್ಟು ಹೋಗದಂತೆ ರಾಜ್ಯ ಸರ್ಕಾರ ಮುಂದಾಗಬೇಕಿದೆ” ಎಂದು ತಿಳಿಸಿದರು. ಚಳವಳಿ ಹಾದಿಯಲ್ಲಿ ನಿಸ್ವಾರ್ಥವಾಗಿ ಹೆಜ್ಜೆ ಹಾಕಿದ ಪಿ.ಕೋದಂಡರಾಮಯ್ಯ, ಎಂ.ಜಯಣ್ಣ, ಮುರುಘಾ ರಾಜೇಂದ್ರ ಒಡೆಯರ್, ಎಚ್.ಹನುಮಂತಪ್ಪ, ಸೋಮುಗುದ್ದು ರಂಗಸ್ವಾಮಿ, ಬಂಜಗೆರೆ ಜಯಪ್ರಕಾಶ್ ಹೀಗೆ ಸಾವಿರಾರು ಮಂದಿಯ ಸ್ಮರಣೆ ಅಗತ್ಯ ಎಂದರು.
ರೈತಸಂಘ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, “ನೀರು ಬರುತ್ತಿರುವ ದೃಶ್ಯ ಕಣ್ತುಂಬಿಕೊಳ್ಳುವ ಭಾಗ್ಯ ದೊರೆಯುತ್ತಿರುವುದು ಸಂತಸ ತಂದಿದೆ. ಭದ್ರೆಯನ್ನು ಸ್ವಾಗತಿಸುವ ಜೊತೆಗೆ ನೀರಾವರಿ ವಿಷಯದಲ್ಲಿ ಸರ್ಕಾರದ ತಾರತಮ್ಯ ನೀತಿ ಖಂಡಿಸಬೇಕಿದೆ. ಎತ್ತರದ ಪ್ರದೇಶದ ಜಮೀನುಗಳಿಗೂ ಡ್ರಿಪ್ ಮೂಲಕ ನೀರಾವರಿ ಸೌಲಭ್ಯ ಕೊಡಬಹುದು. ಸಮಗ್ರ ನೀರಾವರಿ ಯೋಜನೆಗೆ ಆದ್ಯತೆ ನೀಡಬೇಕು” ಎಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡ ಜಿ.ಸಿ.ಸುರೇಶಬಾಬು ಮಾತನಾಡಿ, “ಯಾವುದೇ ಸಣ್ಣ ಕೆರೆಯೂ ಯೋಜನೆಯಿಂದ ಕೈಬಿಟ್ಟು ಹೋಗಬಾರದು. ಜೊತೆಗೆ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಎಥೆನಾಲ್ ಬಳಕೆ ಹೆಚ್ಚಾಗಲಿದ್ದು, ಬಂಗಾರದ ನಾಡು ಆಗಲಿದೆ. ಆದ್ದರಿಂದ ಯಾರೊಬ್ಬರೂ ಭೂಮಿ ಮಾರಾಟ ಮಾಡಬಾರದು” ಎಂದು ತಿಳಿಸಿದರು.
ಡಿ.ಸಿ.ನಾಗರಾಜ್, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ದಸಂಸ ರಾಜ್ಯ ನಾಯಕ ಡಿ.ದುರುಗೇಶಪ್ಪ ಮಾತನಾಡಿ, ಹೊಳಲ್ಕೆರೆ-ಮೊಳಕಾಲ್ಮೂರು ತಾಲ್ಲೂಕುಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ಕೆಲಸ ಆಗಬೇಕೆಂದು ಒತ್ತಾಯಿಸಿದರು. ಸಂಚಾಲಕ ಜೋಗಿಮಟ್ಟಿ ಈ.ಮಹೇಶಬಾಬು, ಮುಖಂಡರಾದ ರ್ಲಹಳ್ಳಿ ರವಿಕುಮಾರ್, ಪುರುಷೋತ್ತಮ್ ತೋರಣಗಟ್ಟೆ, ರಾಜು ಕೆಳಗೋಟೆ, ಕುಂಚಿಗನಾಳ್ ಮಹಾಲಿಂಗಪ್ಪ, ಟಿ.ಮಂಜಣ್ಣ, ಪಿ.ಆರ್.ತಿಪ್ಪೇಸ್ವಾಮಿ, ಕೆ.ರುದ್ರಮುನಿ, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಮಾಲತೇಶ್ ಅರಸ್, ಲಕ್ಷ್ಮೀಕಾಂತ್, ಬಸವರೆಡ್ಡಿ ಇತರರಿದ್ದರು.
ಭೂಮಿ ಮಾರಾಟ ಮಾಡದಿರಿ
ಜಿಲ್ಲೆಯ ರೈತರು ನೀರಿನ ಸಂಕಷ್ಟಕ್ಕೆ ಸಿಲುಕಿ ಸೋಲಾರ್ ಇತರೆ ಚಟುವಟಿಕೆಗಳಿಗೆ ಭೂಮಿ ಮಾರಾಟ ಮಾಡಲು ಮುಂದಾಗಬಾರದೆಂದು ಹೋರಾಟ ಸಮಿತಿಯ ಮುಖಂಡ ಬೇಡರರೆಡ್ಡಿಹಳ್ಳಿ ಬಸವರೆಡ್ಡಿ ತಿಳಿಸಿದರು. ಈಗಾಗಲೇ ಭದ್ರಾ ನೀರು ಜಿಲ್ಲೆಗೆ ಪ್ರವೇಶಿಸಿದ್ದು, ಅನೇಕ ಹಳ್ಳಿಗಳಿಗೆ ನೀರು ಬರಲಿದೆ. ಬಳಿಕ ಕೃಷಿ ಚಟುವಟಿಕೆಗೆ ಜೀವ ಬರಲಿದೆ ಎಂದರು.
ಕಾಮಗಾರಿಗೆ ಬೇಕು ವೇಗ
“ವಾಸ್ತವವಾಗಿ ನಮಗೆ 53 ಟಿಎಂಸಿ ಅಡಿ ನೀರು ದೊರೆಯಬೇಕಾಗಿತ್ತು. ಅದರೆ, ಎ ಮತ್ತು ಬಿ ಸ್ಕೀಂ ಒಗ್ಗೂಡಿಸಿ 29.5 ನೀಡಿದ್ದು, ಚಿತ್ರದುರ್ಗ ಜಿಲ್ಲೆಗೆ 21.5 ಟಿಎಂಸಿ ಅಡಿ ನೀರು ನಿಗದಿ ಆಗಿದೆ. ಈಗ 3 ಟಿಎಂಸಿ ಅಡಿ ನೀರು ಪ್ರಾಯೋಗಿಕವಾಗಿ ಹರಿಸಲಾಗುತ್ತಿದೆ” ಎಂದು ಸಂಚಾಲಕ ಚಳ್ಳಕೆರೆ ಬಸವರಾಜ್ ಹೇಳಿದರು. ಪ್ರತಿವರ್ಷ ಪೂರ್ಣ ಪ್ರಮಾಣದ ನೀರು ಹರಿಸಲು ಕಾಮಗಾರಿ ವೇಗ ಪಡೆದುಕೊಳ್ಳಬೇಕು, ಹೇರಳವಾಗಿ ಅನುದಾನ ನೀಡಬೇಕು ಎಂದರು.
ಸೆ. 10ರಂದು ಸಂಭ್ರಮೋತ್ಸವ
ಭದ್ರಾ ನೀರು ಐಮಂಗಲ ಸಮೀಪದ ಭರಮಪುರ ಕೆರೆಗೆ ಸೆ.10 ಗುರುವಾರ ಬರಲಿದ್ದು, ಅಂದು ಹೋರಾಟ ಸಮಿತಿ ಮುಖಂಡರು, ರೈತರು, ಸ್ಥಳೀಯರು ಪಿ.ಕೋದಂಡರಾಮಯ್ಯ ಅಧ್ಯಕ್ಷತೆಯಲ್ಲಿ ಸಂಭ್ರಮೋತ್ಸವ ಹಮ್ಮಿಕೊಂಡಿದ್ದಾರೆ ಎಂದು ಸಂಚಾಲಕ ನರೇನಹಳ್ಳಿ ಅರುಣ್ಕುಮಾರ್ ತಿಳಿಸಿದರು.
“ಭದ್ರಾ ಯೋಜನೆ ಸಾಧ್ಯವೇ ಇಲ್ಲವೆಂಬ ಸ್ಥಿತಿಯಲ್ಲಿ ನೀರು ಹರಿದುಬರುತ್ತಿರುವುದು ನಮ್ಮಲ್ಲಿ ಸಂಭ್ರಮವನ್ನುಂಟು ಮಾಡಿದೆ. ಸಂಭ್ರಮೋತ್ಸವದ ಜೊತೆಗೆ ನಾವೆಲ್ಲರೂ ಮತ್ತೊಂದು ಹೋರಾಟಕ್ಕೆ ಸಜ್ಜಾಗಬೇಕಾಗಿದೆ.” – ಜೆ. ಯಾದವರೆಡ್ಡಿ
“ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಎಥೆನಾಲ್ ಬಳಕೆ ಹೆಚ್ಚಾಗಲಿದ್ದು, ಬಂಗಾರದ ನಾಡು ಆಗಲಿದೆ. ಆದ್ದರಿಂದ ಯಾರೊಬ್ಬರೂ ಭೂಮಿ ಮಾರಾಟ ಮಾಡಬಾರದು.” – ಜಿ.ಸಿ. ಸುರೇಶಬಾಬು