ಚಿತ್ರದುರ್ಗ (Chitradurga Live): ಮದುವೆಯಾಗಿ ನೂರು ಕಾಲ ಸುಖವಾಗಿ ಬಾಳಬೇಕಾಗಿದ್ದ ನವವಿವಾಹಿತೆಯೊಬ್ಬಳು ಮದುವೆಯಾದ ಮೂರೇ ದಿನಕ್ಕೆ ಶವವಾಗಿ ಪತ್ತೆಯಾಗಿರುವ ಘೋರ ದುರಂತ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಹದೇವಪುರದಲ್ಲಿ ನಡೆದಿದೆ.
ಶುಕ್ರವಾರವಷ್ಟೇ ಆಗಿದ್ದ ಮದುವೆ
ಮೃತ ದುರ್ದೈವಿಯನ್ನು ಸುಮಿತ್ರಾ ಎಂದು ಗುರುತಿಸಲಾಗಿದೆ. ಕಳೆದ ಶುಕ್ರವಾರವಷ್ಟೇ (ಆಗಸ್ಟ್ 15 ರಂದು) ಚಿಕ್ಕ ಉಳ್ಳಾರ್ತಿ ಗ್ರಾಮದ ಗಜೇಂದ್ರ ಎಂಬುವವರ ಜೊತೆ ಸುಮಿತ್ರಾ ಅವರ ವಿವಾಹ ನೆರವೇರಿತ್ತು. ಮದುವೆಯಾಗಿ ಹೊಸ ಜೀವನದ ಕನಸು ಕಂಡಿದ್ದ ಕುಟುಂಬಕ್ಕೆ ಇದೀಗ ಆಘಾತ ಎದುರಾಗಿದೆ.
ಊಟ ಬಡಿಸಿ ಹೋದವಳು ಮರಳಿ ಬರಲಿಲ್ಲ!
ಮದುವೆಯಾದ ದಿನವೇ ರಾತ್ರಿ ಗಂಡನಿಗೆ ಊಟ ಬಡಿಸಿದ್ದ ಸುಮಿತ್ರಾ, ಬಹಿರ್ದೆಸೆಗೆ (ಶೌಚಾಲಯಕ್ಕೆ) ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗಡೆ ಹೋಗಿದ್ದರು. ಆದರೆ, ಎಷ್ಟು ಹೊತ್ತಾದರೂ ಆಕೆ ವಾಪಸ್ ಮನೆಗೆ ಬಂದಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಅಕ್ಕಪಕ್ಕ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದರು.
ಮೂರು ದಿನಗಳ ಕಾಲ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಇದೀಗ ಮಹದೇವಪುರದಲ್ಲಿರುವ ಪಾಳುಬಿದ್ದ ಬಾವಿಯೊಂದರಲ್ಲಿ ಸುಮಿತ್ರಾ ಶವವಾಗಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾವಿಯಿಂದ ಶವವನ್ನು ಹೊರತೆಗೆದಿದ್ದಾರೆ.
ಆತ್ಮಹತ್ಯೆಯೋ? ಕೊಲೆಯೋ?
ನವವಿವಾಹಿತೆಯ ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಆತ್ಮಹತ್ಯೆಯೋ, ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೋ ಅಥವಾ ಇದೊಂದು ಅನುಮಾನಾಸ್ಪದ ಸಾವೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಮದುವೆ ಇಷ್ಟವಿರಲಿಲ್ಲವೇ? ಅಥವಾ ಬೇರೆ ಏನಾದರೂ ಕೌಟುಂಬಿಕ ಸಮಸ್ಯೆ ಇತ್ತೇ ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Leave a comment