Home ಚಿತ್ರದುರ್ಗ ಚಿತ್ರದುರ್ಗಕ್ಕೆ ಭದ್ರಾ ನೀರು: ಹೋರಾಟಗಾರರನ್ನು ಸ್ಮರಿಸಿ 1 ಲಕ್ಷ ಜನರಿಗೆ ಸಿಹಿ ಹಂಚಿದ ಭೋವಿ ಶ್ರೀಗಳು!
ಚಿತ್ರದುರ್ಗ

ಚಿತ್ರದುರ್ಗಕ್ಕೆ ಭದ್ರಾ ನೀರು: ಹೋರಾಟಗಾರರನ್ನು ಸ್ಮರಿಸಿ 1 ಲಕ್ಷ ಜನರಿಗೆ ಸಿಹಿ ಹಂಚಿದ ಭೋವಿ ಶ್ರೀಗಳು!

Share
bhadra-water-chitradurga-bhovimatha-sweet-distribution
Share

ಚಿತ್ರದುರ್ಗ: ಜಿಲ್ಲೆಯಲ್ಲಿ ಭದ್ರೆ ಸಂಭ್ರಮ ಮನೆ ಮಾಡಿದ್ದು, ಈ ಸಡಗರ, ಸಂತಸಕ್ಕೆ ಸಾವಿರಾರು ಜನರು ಅನೇಕ ದಶಕಗಳ ವೈಯಕ್ತಿಕ ಬದುಕು ನಿರ್ಲಕ್ಷಿಸಿ ನಿರಂತರ ಹೋರಾಟ ನಡೆಸಿದ ಫಲ ಆಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.

ಭೋವಿ ಗುರುಪೀಠದ ವತಿಯಿಂದ ಗೋನೂರು ಬಳಿ ಭಾನುವಾರ ಆಯೋಜಿಸಿದ್ದ ಲಕ್ಷ ಮಂದಿಗೆ ಸಿಹಿ ಹಂಚಿಕೆಗೆ ಚಾಲನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಲಕ್ರಾಂತಿಗೆ ಮುನ್ನುಡಿ; ಹೋರಾಟಗಾರರ ತ್ಯಾಗದ ಸ್ಮರಣೆ

ಭದ್ರೆ ನೀರು ಹರಿಯುವ ಮೂಲಕ ಜಲಕ್ರಾಂತಿಗೆ ಮುನ್ನುಡಿ ಬರೆಯಲಾಗಿದ್ದು, ಈ ಮೂಲಕ ಆರ್ಥಿಕ, ಸಾಮಾಜಿಕ ಸ್ಥಾನಮಾನ ಲಭಿಸುವ ಜೊತೆಗೆ ಜಿಲ್ಲೆಯಲ್ಲಿ ಸರ್ವಾಂಗೀಣ ಅಭಿವೃದ್ಧಿಯ ಹೊಳೆ ಹರಿಯಲಿದೆ ಎಂದರು.

ನೀರು ಹರಿಯುವ ದೃಶ್ಯ ಜಿಲ್ಲೆಯ ಜನರಲ್ಲಿ ಸಿಹಿ ವಾತಾವರಣಕ್ಕೆ ಕಾರಣವಾಗಿದೆ. ಈ ಸಿಹಿಯ ಹಿಂದೆ ಅನೇಕ ಕಹಿ ಘಟನೆಗಳು ನಡೆದಿವೆ. ಹೋರಾಟದ ಹಾದಿಯಲ್ಲಿ ಅನೇಕ ಮಹನೀಯರು ನಮ್ಮನ್ನು ಅಗಲಿದ್ದು, ಭದ್ರೆ ನೀರು ಹರಿಯುವ ದೃಶ್ಯ ಕಣ್ತುಂಬಿಕೊಳ್ಳುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಇನ್ನಷ್ಟು ಮಂದಿ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅವರೆಲ್ಲರನ್ನೂ ನಮ್ಮ ಉಸಿರು-ಹಸಿರಿನಲ್ಲಿ ಸ್ಮರಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಭದ್ರೆ ಜಾರಿಗಾಗಿ ಬದುಕು, ಪ್ರಾಣ, ವಯಸ್ಸು ಸಮರ್ಪಿಸಿದ ಹೋರಾಟಗಾರರು, ಪತ್ರಕರ್ತರನ್ನು ಸ್ಮರಿಸುವ ಹಿನ್ನೆಲೆಯಲ್ಲಿ ಸಿಹಿ ಹಂಚಿಕೆ ಮೂಲಕ ಭೋವಿ ಮಠ ಸಣ್ಣ ಪ್ರಯತ್ನ ಮಾಡುತ್ತಿದೆ. ಸಿಹಿ ಸವಿದ ಪ್ರತಿ ವ್ಯಕ್ತಿ ಭದ್ರೆ ನೀರಿನ ಹಿಂದೆ ಅಡಗಿರುವ ಚಳವಳಿಗಾರರ ತ್ಯಾಗ ಅರಿಯಬೇಕು. ಆಗ ಮಾತ್ರ ನಮ್ಮಗಳ ಬದುಕು ಸಾರ್ಥಕವಾಗಲಿದೆ ಎಂದರು.

ಕಣ್ಣೀರ ಕೃಷಿ ಬದುಕಿಗೆ ವಿದಾಯ: ನೀರಿನ ಮಿತ ಬಳಕೆಗೆ ಸಲಹೆ

ಒಂದೂವರೆ ಸಾವಿರ ಅಡಿ ಕೊಳವೆಬಾವಿ ಕೊರೆಯಿಸಿ ಕೃಷಿ ಚಟುವಟಿಕೆ ಕೈಗೊಳ್ಳುವ, ಫ್ಲೋರೈಡ್ ನೀರು ಸೇವಿಸಿ ಚಿಕ್ಕ ವಯಸ್ಸಿನಲ್ಲಿಯೇ ಮೂಳೆ ರೋಗಕ್ಕೆ ತುತ್ತಾಗಿದ್ದು, ನೂರಾರು ವರ್ಷಗಳ ಕಾಲ ಬರಗಾಲ ಉಂಡು, ಮಳೆ ನಂಬಿ ಬೆಳೆ ಇಟ್ಟು ಕೈಸುಟ್ಟುಗೊಂಡು ಕಣ್ಣೀರಧಾರೆಯಲ್ಲಿಯೇ ಕೃಷಿ ಬದುಕು ನಡೆಸಿದ ಅನ್ನದಾತರ ಕಹಿ ಘಟನೆಗಳ ಕಥಾನಕದ ನೆನಪು ಇರಬೇಕು. ಆಗ ಮಾತ್ರ ನೀರನ್ನು ಸದ್ಬಳಕೆ ಮಾಡಿಕೊಂಡು ಬದುಕು ಹಸನುಗೊಳಿಸಿಕೊಳ್ಳಲು ಸಾಧ್ಯ ಎಂದರು.

ಬಯಲುಸೀಮೆ ಪ್ರದೇಶದ ಜನರ ಪಾಲಿಗೆ ಮುಂಗಾರು ಮುಗಿಲಲ್ಲಿ ಉಳಿಯುತ್ತಿತ್ತು. ಹಿಂಗಾರು ಕೈಹಿಡಿದರೆ ಬದುಕೆಂಬ ಸ್ಥಿತಿ ಸಾಮಾನ್ಯವಾಗಿತ್ತು. ಈ ಕಾರಣಕ್ಕೆ ಇಲ್ಲಿನ ಕೃಷಿಕರು ಇಬ್ಬನಿ ನಂಬಿ ಕಡ್ಲೆ, ಈರುಳ್ಳಿ ಅಂತಹ ಬೆಳೆ ಬೆಳೆಯುವ ಬುದ್ಧಿವಂತಿಕೆ ಹೊಂದಿದ್ದರು. ಈಗ ನೀರು ಯಥೇಚ್ಛವಾಗಿ ಹರಿಯುತ್ತಿದೆ. ಈ ಸಂದರ್ಭದಲ್ಲಿ ಅನ್ನದಾತರು ನೀರನ್ನು ಮಿತ ಬಳಕೆ ಮಾಡಬೇಕು ಎಂದು ತಿಳಿಸಿದರು.

ಭದ್ರೆ ಜಿಲ್ಲೆ ಪ್ರವೇಶಿಸಿದ್ದು, ಮುಂದಿನ ದಿನಗಳಲ್ಲಿ ಬಂಗಾರದ ಬೆಳೆ ಬೆಳೆಯಲು ಅವಕಾಶದ ಬಾಗಿಲು ತೆರೆಯಲಿದೆ. ಇತಿಹಾಸ ಸೃಷ್ಟಿಸುವ ಕಾಲಘಟ್ಟ, ವೈಭವ ಮರುಕಳಿಸಲಿದೆ. ಕೆರೆಗಳ ತವರೂರು ಆಗಿರುವ ಚಿತ್ರದುರ್ಗ ಜಿಲ್ಲೆ ಹಸಿರಿನಿಂದ ಕಂಗೊಳಿಸಲಿದೆ ಎಂದರು.

ಸೆ.24ಕ್ಕೆ ಸಿಎಂ ಅವರಿಂದ ಪೂಜೆ: ಶಾಸಕ ಎಂ.ಚಂದ್ರಪ್ಪ

ಸಿಹಿ ಹಂಚಿಕೆಗೆ ಚಾಲನೆ ನೀಡಿದ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಜಿಲ್ಲೆಯ ಜನರ ಬಹುವರ್ಷಗಳ ಕಾಲದ ಕನಸು ಈಡೇರಿದೆ. ಅನೇಕ ಅಡ್ಡಿ ಆತಂಕಗಳನ್ನು ದಾಟಿಕೊಂಡು ಭದ್ರೆ ನೀರು ಜಿಲ್ಲೆ ಪ್ರವೇಶಿಸಿದೆ ಎಂದು ತಿಳಿಸಿದರು.

ಅಬ್ಬಿನಹೊಳಲು ಬಳಿ ಭೂಮಿ ನೀಡಲು ವಿರೋಧಿಸಿದ್ದ ರೈತರ ಮನವೊಲಿಸುವಲ್ಲಿ ನಾನು ಸೇರಿ ಅನೇಕರು ಶ್ರಮಪಟ್ಟಿದ್ದೆವು. ಹೆಗ್ಗಡೆಹಳ್ಳಿ ಸಮೀಪ ಬೃಹತ್ ಬಂಡೆ ನೀರು ಹರಿಯಲು ಅಡ್ಡಿಯಾಗಿತ್ತು. ಅದನ್ನು ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆ ಆಗದ ರೀತಿ ಸ್ಫೋಟಗೊಳಿಸುವ ಸವಾಲು ಯಶಸ್ವಿಗೊಳಿಸಿದ್ದು, ಈ ವಿಷಯದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ವೇಳೆ ಡಿ.ಕೆ.ಶಿವಕುಮಾರ್ ಬದ್ಧತೆ ನಿಜಕ್ಕೂ ಸ್ಮರಣೀಯ. ಅವರು ಈಗ ಮುಖ್ಯಮಂತ್ರಿಯಾಗಿ ಗೋನೂರಿಗೆ ಪೂಜೆ ಸಲ್ಲಿಸಲು ಸೆ.24ಕ್ಕೆ ಆಗಮಿಸುತ್ತಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಗಣ್ಯರ ಹಾಗೂ ದಾಸೋಹಿಗಳ ಉಪಸ್ಥಿತಿ

ಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಸಿದ್ಧಬಸವ ಕಬೀರಾ ಸ್ವಾಮೀಜಿ, ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀ ಬಸವ ಭೃಂಗೇಶ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಸಿಹಿ ವಿತರಣೆ ದಾಸೋಹಿಗಳಾದ ಗೋಡೆಮನೆ ಹನುಮಂತಪ್ಪ, ತಾಪಂ ಇಒ ವೈ.ರವಿಕುಮಾರ್, ಮಾಜಿ ಸದಸ್ಯ ಎಚ್.ಆಂಜನೇಯ, ನಗರಸಭೆ ಮಾಜಿ ಸದಸ್ಯ ಈ.ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ನಿರಂಜನ್, ಎಚ್.ಲಕ್ಷ್ಮಣ್, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಜೋಗಿಮಟ್ಟಿ ಈ.ಮಹೇಶಬಾಬು, ಪ್ರಹ್ಲಾದ್, ಪತ್ರಕರ್ತ ಸಂಘದ ರಾಜ್ಯ ಸಮಿತಿ ಸದಸ್ಯ ಸಿದ್ದರಾಜು, ನಿರ್ದೇಶಕ ಕೋಗುಂಡೆ ಮಠ, ಟಿ.ಎಂ.ಪ್ರದೀಪ್‌ಕುಮಾರ್, ಫಣಿಯಪ್ಪ, ಕೆಪಿಎಂ ಗಣೇಶಯ್ಯ, ಆನಂದ್, ಇಂಜಿನಿಯರ್ ಗಂಗೇಶ್, ಆರ್‌ಎನ್ ಶೆಟ್ಟಿ ಕಂಪನಿಯ ಇಂಜಿನಿಯರ್‌ಗಳು, ಭೋವಿಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Author

  • Prashanth Kumar N

    ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

    ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ.

    ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Share
Written by
Prashanth Kumar N - Editor

ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ. ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Loading News...

More News

Related Articles

ಮದಕರಿ ಜಯಂತಿಗೆ ಬಂದ ಕಿಚ್ಚ: ಹೆಲಿಪ್ಯಾಡ್‌ನಿಂದ ವೇದಿಕೆವರೆಗೆ ಬರಿಗಾಲ ನಡಿಗೆ

ಚಿತ್ರದುರ್ಗ: ಮದಕರಿ ನಾಯಕ ಜಯಂತೋತ್ಸವದಲ್ಲಿ ಭಾಗವಹಿಸಲು ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಕಿಚ್ಚ ಸುದೀಪ್ ಅವರ ಭಕ್ತಿ...

ಚಿತ್ರದುರ್ಗದ ಜನರಿಗೆ ಕಿಚ್ಚನ ಭರವಸೆ: ಆಗಾಗ ಬಂದು ಭೇಟಿ ಮಾಡ್ತೇನೆ

ಚಿತ್ರದುರ್ಗ: ಒಂದು ವರ್ಷದ ನಂತರ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿರುವ ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳೊಂದಿಗೆ...

ಮೀಸಲಾತಿ ರದ್ದು, ಸ್ಟಿಂಗ್ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು...

ಚಿತ್ರದುರ್ಗದಲ್ಲಿ ಸಂಸದ ಕಾರಜೋಳ ಗುಡುಗು: ಮೀಸಲಾತಿ ರದ್ದಿಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ

ಚಿತ್ರದುರ್ಗ: ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ರದ್ದಾಗಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ...