ಚಿತ್ರದುರ್ಗ: ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಕೈಗೊಂಡಿರುವ ಸಮಗ್ರ ಬರ ಮೌಲ್ಯಮಾಪನದ (Integrated Drought Assessment) ಹೆಚ್ಚುವರಿ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೂರು ಪ್ರಮುಖ ತಾಲೂಕುಗಳು ಗ್ರೌಂಡ್ ಟ್ರೂಥಿಂಗ್ (Ground Truthing – ನೆಲಮಟ್ಟದ ಪರಿಶೀಲನೆ) ಪ್ರಕ್ರಿಯೆಗೆ ಅರ್ಹತೆ ಪಡೆದಿವೆ.
ಕಂದಾಯ ಇಲಾಖೆಯ ಅಧಿಸೂಚನೆ ಅನ್ವಯ, ಚಿತ್ರದುರ್ಗ ಜಿಲ್ಲೆಯ ಈ ಕೆಳಗಿನ ತಾಲೂಕುಗಳು ಪರಿಶೀಲನೆಗೆ ಒಳಪಟ್ಟಿವೆ:
-
ಚಿತ್ರದುರ್ಗ ತಾಲೂಕು: ತೀವ್ರ ಬರ (Severe)
-
ಹೊಳಲ್ಕೆರೆ ತಾಲೂಕು: ತೀವ್ರ ಬರ (Severe)
-
ಮೊಳಕಾಲ್ಮೂರು ತಾಲೂಕು: ತೀವ್ರ ಬರ (Severe)
ಜಿಲ್ಲೆಯ ಈ ಮೂರೂ ತಾಲೂಕುಗಳು ಮಳೆ ಕೊರತೆ ಮತ್ತು ಬೆಳೆ ಹಾನಿಯ ಸೂಚ್ಯಂಕಗಳ ಆಧಾರದ ಮೇಲೆ ‘ತೀವ್ರ ಬರ’ (Severe) ಎಂದು ವರ್ಗೀಕರಿಸಲ್ಪಟ್ಟಿದ್ದು, ಮುಂದಿನ ಹಂತದ ಸರ್ಕಾರದ ಅಧಿಕೃತ ಬರ ಘೋಷಣೆಗಾಗಿ ತಾಲೂಕುವಾರು ಬೆಳೆ ಹಾನಿ ಪ್ರಮಾಣವನ್ನು ದೃಢಪಡಿಸಿಕೊಳ್ಳಲು ಕ್ಷೇತ್ರ ಸಮೀಕ್ಷೆ ನಡೆಸಲಾಗುತ್ತಿದೆ.
ಗ್ರೌಂಡ್ ಟ್ರೂಥಿಂಗ್ (ಕ್ಷೇತ್ರ ಪರಿಶೀಲನೆ) ವೇಳಾಪಟ್ಟಿ:
-
ಸೆಪ್ಟೆಂಬರ್ 17: ಜಿಟಿ ಪರಿಶೀಲನೆ ಕುರಿತು ಅಧಿಕಾರಿಗಳಿಗೆ ಮಾರ್ಗದರ್ಶನ (Briefing on GT).
-
ಸೆಪ್ಟೆಂಬರ್ 17 ಮತ್ತು 18: ಬೆಳೆಗಳ ಆಯ್ಕೆ, ಜಿಟಿ ತಂಡಗಳ ರಚನೆ ಹಾಗೂ ಗ್ರಾಮಗಳ ಯಾದೃಚ್ಛಿಕ ಆಯ್ಕೆ (Randomization).
-
ಸೆಪ್ಟೆಂಬರ್ 19 ರಿಂದ 20: ಅಧಿಕಾರಿಗಳ ತಂಡದಿಂದ ನೇರವಾಗಿ ಜಮೀನುಗಳಿಗೆ ಭೇಟಿ ನೀಡಿ ಕ್ಷೇತ್ರ ಪರಿಶೀಲನೆ.
-
ಸೆಪ್ಟೆಂಬರ್ 21: ಸಮೀಕ್ಷೆ ಪೂರ್ಣಗೊಳಿಸಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ‘ಫಾರ್ಮ್-11’ ವರದಿ ಸಲ್ಲಿಕೆ.
ಆ್ಯಪ್ ಮೂಲಕ ಪಾರದರ್ಶಕ ಸಮೀಕ್ಷೆ:
ಕ್ಷೇತ್ರ ಪರಿಶೀಲನೆಗಾಗಿ ಇ-ಆಡಳಿತ ಇಲಾಖೆ ರೂಪಿಸಿರುವ “Crop Loss GT” ಮೊಬೈಲ್ ತಂತ್ರಾಂಶವನ್ನು ಬಳಸಲಾಗುತ್ತಿದೆ. ಇದರಲ್ಲಿ ಜಿಪಿಎಸ್ ಲೊಕೇಷನ್, ಜಿಯೋ-ಟ್ಯಾಗ್ ಮಾಡಿದ ಛಾಯಾಚಿತ್ರಗಳು, ಬೆಳೆ ವಿವರ ಮತ್ತು ಆರ್.ಟಿ.ಸಿ ಮಾಹಿತಿಗಳನ್ನು ನೇರವಾಗಿ ಸ್ಥಳದಲ್ಲೇ ದಾಖಲಿಸಲಾಗುತ್ತದೆ.
ಬರ ಕೈಪಿಡಿ 2020ರ (Manual for Drought Management 2020) ನಿಯಮಾವಳಿಗಳ ಪ್ರಕಾರ, ಪರಿಶೀಲನೆಯಲ್ಲಿ ಶೇಕಡಾ 33 ಅಥವಾ ಅದಕ್ಕಿಂತ ಹೆಚ್ಚು ಬೆಳೆ ಹಾನಿ ಕಂಡುಬಂದರೆ ಬರಪೀಡಿತ ಎಂದು, ಹಾಗೂ ಶೇಕಡಾ 50ಕ್ಕಿಂತ ಹೆಚ್ಚು ಹಾನಿ ದೃಢಪಟ್ಟರೆ ‘ತೀವ್ರ ಬರಪೀಡಿತ’ ಎಂದು ಪರಿಗಣಿಸಿ ಮುಂದಿನ ಪರಿಹಾರ ಕ್ರಮಗಳಿಗೆ ಶಿಫಾರಸು ಮಾಡಲಾಗುತ್ತದೆ.