ಪತ್ರಕರ್ತ ವೃತ್ತಿಗೆ ಗುಡ್ಬೈ, ಚಳವಳಿಗೆ ಜೈ | ಬೆಳಗಾವಿಯಲ್ಲೂ ಮುಷ್ಕರ | ಜಿಲ್ಲೆಯಾದ್ಯಂತ ಓಡಾಟ
ಚಿತ್ರದುರ್ಗ: ಟಿವಿ9 ಸುದ್ದಿವಾಹಿನಿಯಲ್ಲಿ ರಾಜಕೀಯ ವರದಿಗಾರರಾಗಿ, ‘ಚಕ್ರವ್ಯೂಹ’ ಕಾರ್ಯಕ್ರಮದಲ್ಲಿ ದಿಗ್ಗಜ ರಾಜಕಾರಣಿಗಳ ಮುಖಾಮುಖಿ ಮೂಲಕ ರಾಜ್ಯದಲ್ಲಿ ಮನೆಮಾತಾಗಿದ್ದ ಲಕ್ಷ್ಮಣ್ ಹೂಗಾರ್, ಬಯಲುಸೀಮೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಹೋರಾಟ ನಡೆಸಿದ ದಿನಗಳು ಸದಾ ಸ್ಮರಣೀಯ.
ಪತ್ರಿಕೋದ್ಯಮದಿಂದ ಕೃಷಿಯತ್ತ: ನೀರಿನ ಸಮಸ್ಯೆಯ ಅರಿವು
ಪತ್ರಕರ್ತ ವೃತ್ತಿಗೆ ರಾಜೀನಾಮೆ ನೀಡಿ, ಹಿರಿಯೂರಿನ ಸಮೀಪದ ಜಮೀನಿನಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ ವೇಳೆ ಅವರಿಗೆ ನೀರಿನ ವಾಸ್ತವ ಸಮಸ್ಯೆಯ ಅರಿವಾಯಿತು. ಅದೇ ಸಂದರ್ಭದಲ್ಲಿ ಕಮರೇಶ್, ಕಸವನಹಳ್ಳಿ ರಮೇಶ್, ಸಿದ್ದರಾಮಣ್ಣ, ಹೊರಕೇರಪ್ಪ ಸೇರಿದಂತೆ ಹಿರಿಯೂರು ತಾಲ್ಲೂಕಿನ ಅನೇಕ ರೈತ ಮುಖಂಡರು ಭೇಟಿಯಾಗಿ, “ನಿಮ್ಮಂತಹವರು ಹೋರಾಟಕ್ಕೆ ಬಂದರೆ ಸರ್ಕಾರ ಗಮನಹರಿಸುತ್ತದೆ” ಎಂದು ಮನದಟ್ಟು ಮಾಡಿಕೊಟ್ಟರು. ಇದರ ಪರಿಣಾಮವಾಗಿ ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಗಳನ್ನೊಳಗೊಂಡ ಬಯಲುಸೀಮೆ ಪ್ರದೇಶ ಹಸಿರಾಗಬೇಕೆಂಬ ಸಂಕಲ್ಪದೊಂದಿಗೆ ಅವರು ನೇರವಾಗಿ ಹೋರಾಟಕ್ಕೆ ಧುಮುಕಿದರು.
ಬೆಳಗಾವಿ ಅಧಿವೇಶನದಲ್ಲಿ ಧರಣಿ ಮತ್ತು ಜನಜಾಗೃತಿ
ಬಯಲುಸೀಮೆ ನೀರಾವರಿ ಹೋರಾಟ ಸಮಿತಿ ಸ್ಥಾಪಿಸಿದ ಹೂಗಾರ್, ಜಿಲ್ಲೆಯಾದ್ಯಂತ ಸರಣಿ ಚಳವಳಿ ನಡೆಸಿದ್ದಷ್ಟೇ ಅಲ್ಲದೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಸೆಳೆದರು. ಆ ಸಂದರ್ಭದಲ್ಲಿ ಹಲವು ಸಚಿವರು, ಶಾಸಕರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ್ದಲ್ಲದೆ, ಪತ್ರಕರ್ತರಾಗಿದ್ದ ಹೂಗಾರ್ ಅವರಲ್ಲಿದ್ದ ಸುಪ್ತ ಚಳವಳಿಯ ಕಿಚ್ಚನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು.
ಭದ್ರಾ ಮೇಲ್ದಂಡೆ ಯೋಜನೆಗಾಗಿ ಒಗ್ಗೂಡಿದ ಧ್ವನಿ
ಮುರುಘಾ ಮಠದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ ರೈತ ಮುಖಂಡರು ಹಾಗೂ ಹೋರಾಟಗಾರರನ್ನು ಮುಖಾಮುಖಿಯಾಗಿಸುವ ಮೂಲಕ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಜಿಲ್ಲೆಯ ಚಳವಳಿಗಾರರನ್ನು ಒಂದೇ ವೇದಿಕೆಗೆ ತರುವ ಐತಿಹಾಸಿಕ ಪ್ರಯತ್ನ ಮಾಡಿದರು. ಸಮಾರಂಭದಲ್ಲಿ ಮುರುಘಾ ಶರಣರು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಹಾಗೂ ರೈತ ನಾಯಕ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಭಾಗವಹಿಸಿದ್ದರು. ಈ ಸಮಾವೇಶದ ಬೆನ್ನಲ್ಲೇ ವಿಧಾನಸಭೆ ಅಧಿವೇಶನದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಕೆ.ಎಸ್. ಪುಟ್ಟಣ್ಣಯ್ಯ ಗಟ್ಟಿಯಾಗಿ ಧ್ವನಿ ಎತ್ತಿದರು.
ಈ ಹೋರಾಟಕ್ಕೆ ಕಾಮ್ರೆಡ್ ಜಿ. ಚಂದ್ರಪ್ಪ, ಅಖಿಲ ಭಾರತ ಕಿಸಾನ್ ಮಹಾಸಭಾದ ಗೋಪಾಲ್, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ ಮುರುಘರಾಜೇಂದ್ರ ಒಡೆಯರ್, ರೆಡ್ಡಿಹಳ್ಳಿ ವೀರಣ್ಣ, ಬಸ್ತಿಹಳ್ಳಿ ಸುರೇಶಬಾಬು, ನರೇನಹಳ್ಳಿ ಅರುಣ್ಕುಮಾರ್, ದಗ್ಗೆ ಶಿವಪ್ರಕಾಶ್, ಚಳ್ಳಕೆರೆ ಬಸವರಾಜ್ ಮುಂತಾದ ಅನೇಕ ಮುಖಂಡರು ಸಾಥ್ ನೀಡಿ ಚಳವಳಿಗೆ ಶಕ್ತಿ ತುಂಬಿದ್ದನ್ನು ಹೂಗಾರ್ ಇಂದಿಗೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಬೆಂಗಳೂರಿನ ಸೆನೆಟ್ ಹಾಲ್ ಸಮಾವೇಶ ಮತ್ತು ಅನುದಾನ ಹೆಚ್ಚಳ
ಭದ್ರಾ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಮೊದಲ ಬಾರಿಗೆ ರಾಜ್ಯ ಮಟ್ಟದ ಬೃಹತ್ ಸಮಾವೇಶ ಸಂಘಟಿಸಿದ್ದು ಹೋರಾಟದ ಪ್ರಮುಖ ಮೈಲಿಗಲ್ಲು. ಈ ಸಮಾವೇಶದಲ್ಲಿ ಎಚ್. ಆಂಜನೇಯ, ಟಿ.ಬಿ. ಜಯಚಂದ್ರ, ಪ್ರೊ. ರವಿವರ್ಮಕುಮಾರ್ ಮುಂತಾದ ಗಣ್ಯರು ಪಾಲ್ಗೊಂಡು ಹೋರಾಟಕ್ಕೆ ಬಲ ತುಂಬಿದರು.
ಜಿಲ್ಲೆಯಾದ್ಯಂತ ಹಾಗೂ ರಾಜಧಾನಿಯಲ್ಲಿ ನಡೆದ ನಿರಂತರ ಚಳವಳಿ, ಸಮಾವೇಶಗಳ ಫಲವಾಗಿ ಅಂದಿನ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯ ಅನುದಾನ ವೆಚ್ಚವನ್ನು 6 ಸಾವಿರ ಕೋಟಿ ರೂಪಾಯಿಗಳಿಂದ 12 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿತು. ಇದೇ ಸಂದರ್ಭದಲ್ಲಿ ಪ್ರಥಮ ಬಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರವನ್ನು ಭದ್ರಾ ಮೇಲ್ದಂಡೆ ಹೋರಾಟದ ಸಂಕೇತವಾಗಿ ಬಳಸಿ ಗಮನ ಸೆಳೆಯಲಾಯಿತು. ತದನಂತರ ಹಿರಿಯೂರು ಶಾಸಕರ ಪರಿಶ್ರಮದಿಂದ ವಾಣಿ ವಿಲಾಸ ಸಾಗರ ಜಲಾಶಯದ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಅವರ ತಾಯಿ ಮಹಾರಾಣಿ ಕೆಂಪನಂಜಮ್ಮಣಿ ವಾಣಿ ವಿಲಾಸ ಸನ್ನಿಧಾನ ಅವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಯಿತು.
45 ದಿನಗಳ ಬಳ್ಳಾರಿ ಜೈಲುವಾಸ
ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆಯ ಲಕ್ಷ್ಮಣ್ ಹೂಗಾರ್, ಐಟಿಐ ಕಲಿಯುತ್ತಿದ್ದ ದಿನಗಳಲ್ಲೇ ಎಸ್ಎಫ್ಐ (SFI) ವಿದ್ಯಾರ್ಥಿ ಸಂಘಟನೆಯ ಮೂಲಕ ಚಳವಳಿ ಕ್ಷೇತ್ರಕ್ಕೆ ಬಂದವರು. ಐಟಿಐ ಶಿಕ್ಷಣದ ನಂತರ ಕಾಮ್ರೆಡ್ ಅನಂತಸುಬ್ಬರಾವ್ ಅವರ ಮಾರ್ಗದರ್ಶನದಲ್ಲಿ ಪೂರ್ಣಾವಧಿ ಹೋರಾಟಗಾರರಾಗಿ ಹೊರಹೊಮ್ಮಿದರು.
ಆ ಅವಧಿಯಲ್ಲಿ ಬಾಗೂರು-ನವಿಲೆ ಚಳವಳಿಯಲ್ಲಿ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯವಾಗಿ ತೊಡಗಿಸಿಕೊಂಡು ರಾಜ್ಯಮಟ್ಟದ ಹೋರಾಟಗಾರರಾಗಿ ಗುರುತಿಸಿಕೊಂಡರು. 1997ರಲ್ಲಿ ಕೆಎಸ್ಆರ್ಟಿಸಿ ಖಾಸಗೀಕರಣ ವಿರೋಧಿಸಿ ನಡೆದ ತೀವ್ರ ಸ್ವರೂಪದ ಪ್ರತಿಭಟನೆಯಲ್ಲಿ ಭಾಗವಹಿಸಿ ಬರೋಬ್ಬರಿ 45 ದಿನಗಳ ಕಾಲ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸಿದರು. ಜೈಲಿನಲ್ಲಿದ್ದರೂ ಕಾರ್ಮಿಕರ ಒಗ್ಗಟ್ಟು ಮತ್ತು ನೈತಿಕತೆಯನ್ನು ಕುಗ್ಗದಂತೆ ಮುನ್ನಡೆಸಿದ ಹೆಗ್ಗಳಿಕೆ ಇವರದ್ದು.
ರೈತ-ಕಾರ್ಮಿಕರ ಚಳವಳಿಗಳಿಗಾಗಿ ರಾಜ್ಯದ ಹಳ್ಳಿ ಹಳ್ಳಿಗಳನ್ನು ಕಾಲ್ನಡಿಗೆಯಲ್ಲಿ ಸುತ್ತಿದ ಹೂಗಾರ್, ನಂತರ ಜೀವನೋಪಾಯಕ್ಕಾಗಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ಸತತ 21 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ಮತ್ತೆ ಕೃಷಿ ಕ್ಷೇತ್ರದತ್ತ ಮರಳಿ, ತಮ್ಮ ಹೋರಾಟದ ದಿನಗಳಲ್ಲಿ ಪರಿಚಿತರಾಗಿದ್ದ ಬೀರೇನಹಳ್ಳಿ ರಾಮಣ್ಣ ಅವರ ಸಹಕಾರದಿಂದ ಪಡೆದ ಜಮೀನಿನಲ್ಲಿ ಕೃಷಿ ಬದುಕು ಕಟ್ಟಿಕೊಂಡಿದ್ದಾರೆ. ಇಂದಿಗೂ ಹೋರಾಟದ ಹಾದಿಯಿಂದ ವಿಮುಖರಾಗದೆ ಜನಪರ, ಕಾರ್ಮಿಕ ಹಾಗೂ ನೀರಾವರಿ ಚಳವಳಿಗಳಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ.