ಚಿತ್ರದುರ್ಗ (ಸೆ. 30): ಶೋಷಿತ ಸಮುದಾಯಗಳು ಹಳೆಯ ವ್ಯವಸ್ಥೆಯ ಶೋಷಣೆಯಿಂದ ಹೊರಬಂದು, ಸಮಾಜದಲ್ಲಿ ಆರ್ಸಿಸಿ (RCC) ಕಟ್ಟಡಗಳಂತೆ ಅತ್ಯಂತ ದೃಢವಾಗಿ ಹೊರಹೊಮ್ಮಬೇಕು ಎನ್ನುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಮಾದಾರ ಗುರು ಪೀಠದ ಡಾ. ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಕರೆ ನೀಡಿದರು.
ಬಿ.ಎಸ್.ವೈ, ಬೊಮ್ಮಾಯಿ ಕೊಡುಗೆ ಸ್ಮರಣೀಯ ಮಾದಿಗ ಸಮುದಾಯ ಸೇರಿದಂತೆ 101 ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡು, ಒಳಮೀಸಲಾತಿಗೆ ಹೆಚ್ಚಿನ ಶ್ರಮ ಮತ್ತು ಅನುದಾನ ನೀಡಿದ ಮೊದಲ ಕೀರ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೋಷಿತ ಸಮುದಾಯಗಳಿಗೆ ಬರೋಬ್ಬರಿ 100 ಕೋಟಿ ರೂಪಾಯಿಗಳ ಅನುದಾನದ ಆದೇಶ ಹೊರಡಿಸುವ ಮೂಲಕ ಮಠ-ಮಾನ್ಯಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸ್ವಂತ ಜಮೀನು ಹಾಗೂ ಸ್ಮಶಾನಕ್ಕೂ ಜಾಗವಿಲ್ಲದೆ ಹೋರಾಟ ಮಾಡುತ್ತಿದ್ದ ಸಮುದಾಯಕ್ಕೆ ಬೃಹತ್ ಮಠ ನಿರ್ಮಾಣ ಮಾಡಲು 83 ಎಕರೆ ಜಮೀನನ್ನು ಮಂಜೂರು ಮಾಡಿ ಭೂಮಿಪೂಜೆಗೆ ಸಂಕಲ್ಪ ತೊಟ್ಟ ಬೊಮ್ಮಾಯಿ ಅವರ ಕೊಡುಗೆಯನ್ನು ಅತ್ಯಂತ ಗೌರವದಿಂದ ಸ್ಮರಿಸುವುದಾಗಿ ಸ್ವಾಮೀಜಿ ನುಡಿದರು.
ಶೋಷಿತ ಸಮುದಾಯಗಳು ಇನ್ನೊಬ್ಬರ ಮೇಲೆ ಅವಲಂಬಿತರಾಗದೆ, ಶಿಕ್ಷಣ ಹಾಗೂ ಸಂಘಟನೆಯ ಮೂಲಕ ಗಟ್ಟಿಯಾಗಿ ನಿಲ್ಲಬೇಕು. ಅಂದಾಗ ಮಾತ್ರ ಸಮುದಾಯದ ಏಳಿಗೆ ಸಾಧ್ಯ ಎಂದು ಅವರು ಸಭಿಕರಿಗೆ ಕಿವಿಮಾತು ಹೇಳಿದರು.