ಚಿತ್ರದುರ್ಗ ಬ್ರಾಂಚ್ ಚಾನೆಲ್‌ನಲ್ಲಿ ಭದ್ರಾ ಪ್ರಾಯೋಗಿಕ ನೀರು ರಭಸವಾಗಿ ಹರಿಯುತ್ತಿದ್ದು, ಕಾಲುವೆ ವೀಕ್ಷಣೆಗೆ ಹೋಗುವ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕಿದೆ. ಹೊಸದುರ್ಗ ತಾಲೂಕಿನ ದೊಡ್ಡಘಟ್ಟ ಗ್ರಾಮದ ಯುವಕನೊಬ್ಬ ನಿನ್ನೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಕಾಲುವೆಗೆ ಬಿದ್ದು ಅನ್ಯಾಯವಾಗಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಹೊಸದುರ್ಗ ತಾಲೂಕು ರೈತ ಸಂಘದ ಅಧ್ಯಕ್ಷರಾದ ಮಾಯಣ್ಣ ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. ಕಾಲುವೆಯಲ್ಲಿ ನೀರಿನ ಸೆಳೆತ ಹೆಚ್ಚಿರುವುದರಿಂದ ಹಾಗೂ ಒಮ್ಮೆ ಬಿದ್ದರೆ ಹಿಡಿದುಕೊಳ್ಳಲು ಅಥವಾ ಮೇಲೆ ಬರಲು ಯಾವುದೇ ಆಧಾರವಿಲ್ಲದ ಕಾರಣ, ಜೀವದ ಹಂಗು ತೊರೆದು ಸೆಲ್ಫಿ ಕ್ಲಿಕ್ಕಿಸುವ ಸಾಹಸಕ್ಕೆ ಕೈಹಾಕಬಾರದು ಎಂದು ಎಚ್ಚರಿಸಿದ್ದಾರೆ. ಈ ಎಚ್ಚರಿಕೆಯು ಕೇವಲ ಹೊಸದುರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ; ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಹಾಗೂ ತರೀಕೆರೆ ತಾಲೂಕಿನಾದ್ಯಂತ ಕಾಲುವೆ ಹಾದುಹೋಗುವ ಎಲ್ಲಾ ಭಾಗದ ಜನರಿಗೂ ಅನ್ವಯಿಸುತ್ತದೆ.
ಹೊಸದುರ್ಗ ತಾಲೂಕಿನ ದೊಡ್ಡಘಟ್ಟ ಗ್ರಾಮದ ಯುಕನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲುವೆಯಲ್ಲಿ ಕಾಲು ಜಾರಿ ಸಾವನ್ನಪ್ಪಿದ್ದಾನೆ.
https://www.instagram.com/reel/DdLWdBnv8DI/?stkn=Y2Q2bDA2Z254YnQ2
ಸಾರ್ವಜನಿಕರು ವಹಿಸಬೇಕಾದ ಪ್ರಮುಖ ಮುನ್ನೆಚ್ಚರಿಕಾ ಕ್ರಮಗಳು
-
ಸೆಲ್ಫಿ ಗೀಳು ಬಿಡಿ: ಕಾಲುವೆಯ ಅಂಚಿನಲ್ಲಿ ನಿಂತು ಮೊಬೈಲ್‌ನಲ್ಲಿ ಫೋಟೋ, ವಿಡಿಯೋ ಅಥವಾ ಸೆಲ್ಫಿ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ಕೈಬಿಡಿ.
-
ಮಕ್ಕಳ ಬಗ್ಗೆ ನಿಗಾ ಇರಲಿ: ಯಾವುದೇ ಕಾರಣಕ್ಕೂ ಶಾಲಾ ಮಕ್ಕಳನ್ನು ಕಾಲುವೆ ಬಳಿ ಹೋಗಲು ಬಿಡಬೇಡಿ. ಪೋಷಕರು ಈ ಬಗ್ಗೆ ತೀವ್ರ ನಿಗಾ ವಹಿಸಬೇಕು.
-
ದೂರದಿಂದಲೇ ಆನಂದಿಸಿ: ನೀರು ಹರಿಯುವುದನ್ನು ಸುರಕ್ಷಿತ ಅಂತರದಿಂದ ನೋಡಿ ಸಂತಸ ಪಡಿ. ನೀರಿಗಿಳಿಯುವ ಅಥವಾ ಕಾಲುವೆ ದಂಡೆಯ ಮೇಲೆ ಓಡಾಡುವ ಪ್ರಯತ್ನ ಬೇಡ.
-
ಪೂಜೆ ವೇಳೆ ಎಚ್ಚರ: ಕಾಲುವೆಗೆ ಗಂಗಮ್ಮನ ಪೂಜೆ ಮಾಡುವಾಗ ಮತ್ತು ಬಾಗಿನ ಅರ್ಪಿಸುವಾಗ ಕಾಲು ಜಾರದಂತೆ ಅತ್ಯಂತ ಎಚ್ಚರಿಕೆ ವಹಿಸಿ.