ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 24ರಂದು ಜರುಗಲಿರುವ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಹೊಸದುರ್ಗ ತಾಲೂಕಿನಿಂದ ತೆರಳಲು 100 ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಸಚಿವರು ಚಿತ್ರದುರ್ಗ ಕಾಲುವೆಗೆ ನೀರು ಹರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಉಭಯ ಜಿಲ್ಲೆಗಳ ನಾಯಕರನ್ನು ಮನವೊಲಿಸಿ ಜಿಲ್ಲೆಗೆ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆದೊಯ್ದು ಅಭಿನಂದನೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಇನ್ನೆರಡು ತಿಂಗಳಲ್ಲಿ ತುಂಗಾ ನೀರು ಭದ್ರೆಗೆ
ತುಂಗಾ ನದಿಯಿಂದ ಭದ್ರಾ ನದಿಗೆ ನೀರು ಲಿಫ್ಟ್ ಮಾಡುವ ಕಾಮಗಾರಿ ಸಂಪೂರ್ಣಗೊಂಡಿದ್ದು, ವಿದ್ಯುತ್ ಸಂಪರ್ಕವೂ ಸಿಕ್ಕಿದೆ. ಮುಂದಿನ ಎರಡು ತಿಂಗಳಲ್ಲಿ ತುಂಗಾ ನೀರು ಭದ್ರೆಗೆ ಹರಿಯಲಿದೆ. ಸದ್ಯ ಚಿತ್ರದುರ್ಗ ಶಾಖಾ ಕಾಲುವೆಗೆ 0.65 ಟಿಎಂಸಿ ನೀರು ಹರಿದಿದ್ದು, ಮುಂದಿನ ಒಂದೂವರೆ ತಿಂಗಳು ನಿರಂತರವಾಗಿ ನೀರು ಹರಿಯಲಿದೆ. ರೈತರು ಶಾಂತರೀತಿಯಿಂದ ನೀರಿನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತುಮಕೂರು ಶಾಖಾ ಕಾಲುವೆ ಕಾಮಗಾರಿ ಪೂರ್ಣಗೊಳಿಸುವ ಹೊಣೆ ನನ್ನ ಮೇಲಿದೆ. ಪ್ರಸ್ತುತ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದ್ದು, ಕೆರೆಗಳಿಗೆ ನೀರು ಬಂದಿಲ್ಲವೆಂದು ರೈತರು ಆತುರಪಡಬಾರದು. ಯಾರೂ ಜಾಕ್ವೆಲ್ ಅಥವಾ ನಾಲೆ ಒಡೆಯುವಂತಹ ಕಾನೂನುಬಾಹಿರ ಕೃತ್ಯಗಳಿಗೆ ಮುಂದಾಗಬಾರದು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮುಖಂಡರಾದ ಓ. ಶಂಕರ್, ಟಿಪಿಸಿಎಎಂಎಸ್ ಅಧ್ಯಕ್ಷ ಕಾರೆಹಳ್ಳಿ ಬಸವರಾಜ್, ಕೆಪಿಸಿಸಿ ಸದಸ್ಯರಾದ ಎಂ.ಪಿ. ಶಂಕರ್, ಅಲ್ತಾಫ್ ಪಾಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ್, ಲೋಕೇಶ್, ಮಹಿಳಾ ಘಟಕದ ಅಧ್ಯಕ್ಷೆ ದೀಪಿಕಾ, ನಗರ ಘಟಕದ ಅಧ್ಯಕ್ಷ ಅಣ್ಣೋ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.