ಚಿತ್ರದುರ್ಗ : ಗಂಡ ಹಾಗೂ ಆತನ ಕುಟುಂಬದವರಿಗೆ ತೊಂದರೆಯಾಗಲಿ ಎಂದು ಬಯಸಿ ಸ್ಮಶಾನದಲ್ಲಿ ವಾಮಾಚಾರ ಮಾಡುತ್ತಿದ್ದ ಪತ್ನಿ ಹಾಗೂ ಆಕೆಯ ಸಂಬಂಧಿಯನ್ನು ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಭರಮಸಾಗರ ಲಂಬಾಣಿಹಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭರಮಸಾಗರ ಲಂಬಾಣಿಹಟ್ಟಿಯ ಮಂಜುನಾಥ್ ನಾಯ್ಕ ಎಂಬುವರ ಪತ್ನಿ ಮಮತಾ ವಾಮಾಚಾರ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಮಹಿಳೆ. ಭಾನುವಾರ ಬೆಂಗಳೂರಿನಿಂದ ತನ್ನ ಸಂಬಂಧಿ ಸಂತೋಷ್ ಎಂಬಾತನ ಜೊತೆ ಊರಿಗೆ ಬಂದಿದ್ದ ಮಮತಾ, ಗ್ರಾಮದ ಬಳಿಯಿರುವ ಗಂಡನ ಜಮೀನಿನ ಪಕ್ಕದ ಸ್ಮಶಾನದಲ್ಲಿ ಈ ಕೃತ್ಯ ಎಸಗುತ್ತಿದ್ದಳು.
ಪತಿ ಮಂಜುನಾಥ್ ನಾಯ್ಕನ ಫೋಟೋ ಮತ್ತು ಆತನ ಬಟ್ಟೆಯನ್ನಿಟ್ಟು, ಅದರ ಸುತ್ತಲೂ ಅರಿಶಿನ, ಕುಂಕುಮ ಹಾಕಿ, ತೆಂಗಿನಕಾಯಿ ಒಡೆದು ವಾಮಾಚಾರ ಮಾಡಲಾಗುತ್ತಿತ್ತು. ಹಿತ್ತಾಳೆಯ ತಗಡು, ನಿಂಬೆಹಣ್ಣು ಸೇರಿದಂತೆ ಇತರ ವಸ್ತುಗಳೊಂದಿಗೆ ಮಾಡಿಸಿಕೊಂಡು ತಂದಿದ್ದ ವಾಮಾಚಾರದ ಗಂಟನ್ನು, ಇತ್ತೀಚೆಗಷ್ಟೇ ಶವಸಂಸ್ಕಾರ ನಡೆದಿದ್ದ ಜಾಗದಲ್ಲಿ ಮಣ್ಣಿನಲ್ಲಿ ಹೂಳುತ್ತಿದ್ದಾಗ ಇವರಿಬ್ಬರೂ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ತಕ್ಷಣವೇ ಗ್ರಾಮಸ್ಥರು ಇಬ್ಬರನ್ನೂ ಹಿಡಿದು ಚಳ್ಳಕೆರೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ದಾಂಪತ್ಯ ಕಲಹ
ಭರಮಸಾಗರ ಲಂಬಾಣಿಹಟ್ಟಿಯ ಮಂಜುನಾಥ್ ನಾಯ್ಕ ಹಾಗೂ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದ ಮಮತಾ ನಡುವೆ 2022ರಲ್ಲಿ ವಿವಾಹವಾಗಿತ್ತು. ಮದುವೆಯಾದ ಕೇವಲ ಮೂರೇ ತಿಂಗಳಲ್ಲಿ ಮಮತಾ ಮನೆ ಬಿಟ್ಟು ಹೋಗಿದ್ದಳು ಎನ್ನಲಾಗಿದೆ. ಆ ಬಳಿಕ ಪತಿ ಹಾಗೂ ಆತನ ಕುಟುಂಬಕ್ಕೆ ಕಿರುಕುಳ ನೀಡುವ ಉದ್ದೇಶದಿಂದ ಆಕೆ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ದೂರು ನೀಡಿದ್ದಳು.
ಈ ದೂರಿನ ಸಂಬಂಧ ಮಮತಾ ತಮ್ಮನ್ನು ಕೋರ್ಟ್ ಮತ್ತು ಪೊಲೀಸ್ ಠಾಣೆಗಳಿಗೆ ಅಲೆದಾಡಿಸುತ್ತಿದ್ದಾಳೆ ಎಂದು ಮಂಜುನಾಥ್ ನಾಯ್ಕ ಹಾಗೂ ಕುಟುಂಬದವರಾದ ಜಯಮ್ಮ, ಹನುಮನಾಯ್ಕ ಆರೋಪಿಸಿದ್ದಾರೆ.
ಕೋರ್ಟ್‌ನಲ್ಲಿ ತನಗೆ ಬೇಕಾದ ರೀತಿಯಲ್ಲಿ ಪತಿ ಹೇಳಿಕೆ ನೀಡಲಿ, ಆತನಿಂದ ತನಗೆ ಬಿಡುಗಡೆಯಾಗಲಿ ಮತ್ತು ಆತನ ಕುಟುಂಬದವರಿಗೆ ತೊಂದರೆಯಾಗಲಿ ಎಂಬ ಉದ್ದೇಶದಿಂದ ಮಾಂತ್ರಿಕನೊಬ್ಬನ ಮಾತನ್ನು ಕೇಳಿ ಈ ರೀತಿ ವಾಮಾಚಾರ ಮಾಡಿರುವುದಾಗಿ ಸಿಕ್ಕಿಬಿದ್ದವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.