ಚಿತ್ರದುರ್ಗ: ಇಂದಿನ ತಾಂತ್ರಿಕ ಯುಗದಲ್ಲಿ ಮನುಷ್ಯ ತನ್ನ ತವರುಮನೆಯ ಬಾಂಧವ್ಯ, ಸಂಬಂಧಗಳು ಹಾಗೂ ಭಾವನಾತ್ಮಕ ಮೌಲ್ಯಗಳನ್ನು ಬದಿಗಿಟ್ಟು ಕೇವಲ ಆಸ್ತಿ, ಅಂತಸ್ತು ಮತ್ತು ಹಣದ ಹಿಂದೆ ಓಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಕಲಾಕೃತಿಗಳು ಹಾಗೂ ಚಿತ್ರಕಲೆಗಳು ಮನುಷ್ಯನ ಅಂತರಂಗದ ಸಂವೇದನೆಗಳನ್ನು ಉದ್ದೀಪಿಸಿ, ಕಳೆದುಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ನೆನಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಬಿ.ಎಂ.ಗುರುನಾಥ್ ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಧನ ಸಹಾಯದಡಿಯಲ್ಲಿ ನಗರದ ಪತ್ರಿಕಾ ಭವನದ ಬಿ.ವಿ.ವೃಕುಂಠರಾಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನದ ಶ್ರೀಮತಿ ಶೃತಿ ಎಸ್ ಹೆಗಡೆಯವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಚಿತ್ರ ಕಲರವವನ್ನು ಶನಿವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು ಕಾವ್ಯ, ಕಥೆ ಅಥವಾ ಕಾದಂಬರಿಗಳು ಓದುಗನ ಮೇಲೆ ಬೀರುವಷ್ಟೇ ಪ್ರಬಲ ಹಾಗೂ ಅಷ್ಟೇ ಗಟ್ಟಿಯಾದ ಪರಿಣಾಮವನ್ನು ಈ ಚಿತ್ರಕಲೆಗಳು ಉಂಟುಮಾಡುತ್ತವೆ ಮಾತುಗಳಲ್ಲಿ ವ್ಯಕ್ತಪಡಿಸಲಾಗದ ಭಾವನೆಗಳನ್ನು ರೇಖೆಗಳು ಹಾಗೂ ಬಣ್ಣಗಳ ಮೂಲಕ ವ್ಯಕ್ತಪಡಿಸುವ ಕಷ್ಟದ ಕೆಲಸವನ್ನು ಕಲಾವಿದರು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಇಂದಿನ ಆಧುನಿಕ ಜೀವನಶೈಲಿ ಹಾಗೂ ಮಕ್ಕಳ ಮೇಲಾಗಿರುವ ತಂತ್ರಜ್ಞಾನದ ಪ್ರಭಾವ ಹೆಚ್ಚಾಗಿದೆ. ಇಂದಿನ ಮಕ್ಕಳು ಮೊಬೈಲ್ ಹಾಗೂ ‘ರೀಲ್ಸ್’ಗಳಲ್ಲೇ ಕಾಲ ಕಳೆಯುತ್ತಿದ್ದು, ಅವರಿಗೆ ರಾಮಾಯಣ, ಮಹಾಭಾರತ ಅಥವಾ ತಮ್ಮ ಪರಂಪರೆಯ ಜ್ಞಾನದ ಅರಿವಿಲ್ಲದಂತಾಗಿದೆ. ಹಿಂದೆ ಅಜ್ಜಿ-ಅಮ್ಮಂದಿರು ಜಾನಪದ ಹಾಡುಗಳು ಹಾಗೂ ಗಾದೆಗಳ ಮೂಲಕ ಮಕ್ಕಳಿಗೆ ಜೀವನದ ವಿವೇಕವನ್ನು ಉಣಿಸುತ್ತಿದ್ದರು. ಆದರೆ ಇಂದು ಅಜ್ಜ-ಅಜ್ಜಿಯಂದಿರ ಸಾಮೀಪ್ಯ ಹಾಗೂ ಅವರ ಸಾಂಪ್ರದಾಯಿಕ ಹಾಡು-ಕಥೆಗಳು ಇಲ್ಲವಾಗಿವೆ ಎಂದು ಬಿ.ಎಂ.ಗುರುನಾಥ್ ಕಳವಳ ವ್ಯಕ್ತಪಡಿಸಿದರು.
ನಗರ ಜೀವನವು ಮಾನವರಲ್ಲಿ ಅನಾಥಪ್ರಜ್ಞೆ ಹಾಗೂ ಒಂಟಿತನವನ್ನು ಸೃಷ್ಟಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಕಲಾ ಮಾಧ್ಯಮಗಳು ಮನಸ್ಸಿಗೆ ಶಾಂತಿ ಹಾಗೂ ಧೈರ್ಯವನ್ನು ನೀಡುವ ಶಕ್ತಿಯನ್ನು ಹೊಂದಿವೆ. ಆದ್ದರಿಂದ ಪ್ರತಿಯೊಬ್ಬರೂ ಕಲಾವಿದರು ಹಾಗೂ ಕವಿಗಳೊಂದಿಗೆ ಒಂದಷ್ಟು ಸಮಯವನ್ನು ಕಳೆಯಬೇಕು ಮತ್ತು ಮಕ್ಕಳಿಗೆ ಹಿರಿಯರೊಂದಿಗೆ ಬಾಳುವ ಸಂಸ್ಕೃತಿಯನ್ನು ಕಲಿಸಬೇಕು ಎಂದು ಅವರು ಕರೆ ನೀಡಿ ಯಾಂತ್ರಿಕ ಮತ್ತು ನಗರೀಕರಣದ ಓಟದಲ್ಲಿ ಮನುಷ್ಯನು ತನ್ನ ಬೇರುಗಳನ್ನು ಹಾಗೂ ಸಂವೇದನೆಗಳನ್ನು ಕಳೆದು ಕೊಳ್ಳುತ್ತಿದ್ದು, ಕಲೆ ಮತ್ತು ಸಾಹಿತ್ಯದ ಮೂಲಕ ಮನುಷ್ಯತ್ವ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಕೊಂಡು ಹೋಗುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಗುರುನಾಥ್ ತಿಳಿಸಿದರು.
ಚಿತ್ರ ಕಲರವದ ಅಧ್ಯಕ್ಷತೆಯನ್ನು ವಹಿಸಿದ್ದ ಲಲಿತಕಲಾ ಆಕಾಡೆಮಿಯ ಸದಸ್ಯರಾದ ಸಿ ಕಣ್ಮೇಶ್ ಮಾತನಾಡಿ, ಶೃತಿ ಹೆಗಡೆ ಅವರು ಮೂಲತಃ ಚಿತ್ರಕಲಾವಿದರಲ್ಲದಿದ್ದರೂ ಕಳೆದ ಎರಡು-ಮೂರು ವರ್ಷಗಳಿಂದ ಚಿತ್ರಕಲೆ ಯನ್ನು ಅಭ್ಯಾಸ ಮಾಡಿ ಅತ್ಯುತ್ತಮ ಕಲಾಕೃತಿಗಳನ್ನು ರಚಿಸಿದ್ದಾರೆ ಕಲೆಗೆ ವಯಸ್ಸಿನ ಹಂಗಿಲ್ಲ ಡಾಕ್ಟರ್, ಇಂಜಿನಿಯರ್ಗಳೂ ಸೇರಿದಂತೆ ವಿವಿಧ ವೃತ್ತಿಯವರು ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದನ್ನು ಉಲ್ಲೇಖಿಸಿ ಉದಯೋನ್ಮುಖ ಕಲಾವಿದರಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಮಾಡಿದರು.
ರವೀಂದ್ರನಾಥ ಟ್ಯಾಗೋರ್ ಅವರ ಉದಾಹರಣೆ ನೀಡಿದ ವಕ್ತಾರರು, ಟ್ಯಾಗೋರ್ ಅವರು ಕೇವಲ ಸಾಹಿತಿ ಅಥವಾ ಕವಿಯಷ್ಟೇ ಅಲ್ಲದೆ, ತಮ್ಮ 63ನೇ ವಯಸ್ಸಿನಲ್ಲಿ ಚಿತ್ರಕಲೆಗೆ ಕಾಲಿಟ್ಟು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾದರು ಕಲಾಕೃತಿಯನ್ನು ಸರಿಯಾಗಿ ಪ್ರಸ್ತುತಪಡಿಸುವುದು ಹಾಗೂ ಅದಕ್ಕೆ ತಕ್ಕ ಮೌಲ್ಯ ದೊರೆಯುವುದು ಮುಖ್ಯ ಪಿಕಾಸೋ, ವ್ಯಾನ್ ಗೋಹ್ ಅವರಂತಹ ವಿಶ್ವಪ್ರಸಿದ್ಧ ಕಲಾವಿದರ ಸಾಲಿನಲ್ಲಿ ಟ್ಯಾಗೋರ್ ಅವರ ಕಲಾಕೃತಿಗಳೂ ಗುರುತಿಸಿಕೊಂಡಿದ್ದನ್ನು ಪ್ರಸ್ತಾಪಿಸಿ ಸಂಘ-ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿ ಅನುದಾನ ನೀಡುವ ಬದಲು, ಶ್ರಮಿಸಿ ಕಲಾಪ್ರದರ್ಶನ ಆಯೋ ಜಿಸುವ ನೈಜ ಚಿತ್ರಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಧನಸಹಾಯ ಹಾಗೂ ಪ್ರೋತ್ಸಾಹ ನೀಡಬೇಕು. ಅಲ್ಲದೆ, ಪತ್ರಕರ್ತರ ಭವನದಲ್ಲಿ ಇಂತಹ ಪ್ರದರ್ಶನಗಳನ್ನು ಆಯೋಜಿಸುವುದರಿಂದ ಉತ್ತಮ ಪ್ರಚಾರ ಸಿಗಲಿದ್ದು, ಬಾಡಿಗೆಯಲ್ಲಿ ಕಲಾವಿದರಿಗೆ ಮತ್ತಷ್ಟು ರಿಯಾಯಿತಿ ನೀಡಬೇಕು ಹಾಗೂ ಹೆಚ್ಚಿನ ಪ್ರಚಾರ ಬೆಂಬಲ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿನಾಯಕ ಮಾತನಾಡಿ, ಚಿತ್ರಕಲೆಯು ಅತ್ಯಂತ ತಾಳ್ಮೆ ಮತ್ತು ಸಮಯವನ್ನು ಬೇಡುವ ಒಂದು ತಪಸ್ಸಾಗಿದ್ದು, ಎಲೆಮರೆ ಮರೆಯಂ ತಿರುವ ಪ್ರತಿಭಾನ್ವಿತ ಚಿತ್ರಕಲಾವಿದರನ್ನು ಗುರುತಿಸಿ, ಅವರಿಗೆ ಸರ್ಕಾರದ ಹಂತದಲ್ಲಿ ಹೆಚ್ಚಿನ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಬೇಕೆಂಬುದು ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ ಎಂದರು.
ಚಿನ್ಮೂಲಾದ್ರಿ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದಯಾ ಪುತ್ತೂರ್ ಕರ್, ಚಿತ್ರಕಲಾವಿದರಾದ ನಾಗರಾಜ್ ಬೇದ್ರೇ, ಹಾಗೂ ನವೀನ್ ಬೇದ್ರೇ ಭಾಗವಹಿಸಿದ್ದರು ಎರಡು ದಿನಧ ಈ ಚಿತ್ರ ಕಲರವದಲ್ಲಿ ಶ್ರೀಮತಿ ಶೃತಿ ಎಸ್ ಹೆಗಡೆಯವರ ರಚನೆ ಮಾಡಿದ ಯಕ್ಷಗಾನ,ಸಂಸ್ಕೃತಿ,ಪರಂಪರೆ , ಪ್ರಕೃತಿ ಸಂಬಂಧಿತ ಚಿತ್ರಗಳು ಪ್ರದರ್ಶನವಾಗಿವೆ.
ಅಂಜನ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳಾದ ಪ್ರಾರ್ಥನ ಮತ್ತು ಸಿಂಧು ರವರು ಪ್ರಾರ್ಥನ ನೃತ್ಯ ಮಾಡಿ ದರೆ, ಬಾಲಚಂದ್ರ ದೀಕ್ಷಿತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ವಿದ್ಯಾ ಬಿ.ದಿಕ್ಷೀತ್ ವಂದಿಸಿದರು.