Home ಚಿತ್ರದುರ್ಗ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ: ಶಾಂತಿ ಪರಂಪರೆ ಮುಂದುವರೆಸೋಣ | ಭದ್ರತೆಗೆ ಶೀಘ್ರವೇ ‘ರೂಟ್ ಮಾರ್ಚ್’
ಚಿತ್ರದುರ್ಗ

ಹಿಂದೂ ಮಹಾ ಗಣಪತಿ ಶೋಭಾಯಾತ್ರೆ: ಶಾಂತಿ ಪರಂಪರೆ ಮುಂದುವರೆಸೋಣ | ಭದ್ರತೆಗೆ ಶೀಘ್ರವೇ ‘ರೂಟ್ ಮಾರ್ಚ್’

Share
Share

ಚಿತ್ರದುರ್ಗ: ನಗರದಲ್ಲಿ ಅಕ್ಟೋಬರ್ 3ರಂದು ಜರುಗಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆಗೆ ಯಾವುದೇ ರೀತಿಯ ಲೋಪಬಾರದಂತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಟ್ಟುನಿಟ್ಟಿನ ಬಂದೋಬಸ್ತ್ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಸಮಿತಿ ಸದಸ್ಯರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

4 ಲಕ್ಷ ಭಕ್ತರ ನಿರೀಕ್ಷೆ: ಶಿಸ್ತಿನಿಂದ ಕಾರ್ಯಕ್ರಮ ಪೂರ್ಣಗೊಳ್ಳಲಿ

ದೊಡ್ಡ ಮಟ್ಟದಲ್ಲಿ ಜನಸಂದಣಿ ಸೇರುವ ಪ್ರಮುಖ ಉತ್ಸವಗಳಲ್ಲಿ ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯೂ ಒಂದಾಗಿದೆ. ಈ ಬಾರಿಯ ಶೋಭಾಯಾತ್ರೆ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ಸುಮಾರು 3 ರಿಂದ 4 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ಹಲವು ವರ್ಷಗಳಿಂದ ವಿವಿಧ ಇಲಾಖೆಗಳ ಉತ್ತಮ ಸಹಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಿಂದ ಶೋಭಾಯಾತ್ರೆಯು ಅತ್ಯಂತ ಶಾಂತಿಯುತವಾಗಿ ನೆರವೇರುತ್ತಾ ಬಂದಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರತಿಯೊಂದು ಇಲಾಖೆಯು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಮಾತನಾಡಿ, ಕಳೆದ 20 ವರ್ಷಗಳಿಂದ ವಿಶ್ವ ಹಿಂದೂಪರಿಷತ್ ಮತ್ತು ಭಜರಂಗದಳ ಸಹಯೋಗದಲ್ಲಿ ಹಿಂದೂ ಮಹಾಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಿ, ಶೋಭಾಯಾತ್ರೆಯೊಂದಿಗೆ ವಿಸರ್ಜನಾ ಕಾರ್ಯ ನಡೆಸುತ್ತಾ ಬರಲಾಗುತ್ತಿದೆ. 2025ನೇ ಸಾಲಿನಲ್ಲಿ ನಡೆದ ಶೋಭಾಯಾತ್ರೆ ಸಮಯದಲ್ಲಿ ಸುಮಾರು 3 ರಿಂದ 3.20 ಲಕ್ಷ ಜನರು ಭಾಗವಹಿಸಿದ್ದು, ರಾತ್ರಿ 10ಕ್ಕೆ ಶಾಂತಿಯುತವಾಗಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಅ.3ರಂದು ಪ್ರತಿಷ್ಠಾಪನಾ ಸ್ಥಳದಿಂದ ಚಂದ್ರವಳ್ಳಿವರೆಗೆ ಬೃಹತ್ ಶೋಭಾಯಾತ್ರೆ ಮುಖಾಂತರ ಗಣೇಶ ಮೂರ್ತಿ ವಿಸರ್ಜನೆ ಮಾಡಲಿದ್ದು, ಶೋಭಾಯಾತ್ರೆಯಲ್ಲಿ ಸುಮಾರು 4 ಲಕ್ಷ ಜನ ಭಾಗವಹಿಸುವ ಸಾಧ್ಯತೆ ಇದೆ ಎಂದರು.

ಶೀಘ್ರದಲ್ಲೇ ಪೊಲೀಸರಿಂದ ‘ರೂಟ್ ಮಾರ್ಚ್’ (ಪಥಸಂಚಲನ)

ಶಾಂತಿ ಸುವ್ಯವಸ್ಥೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಮೆರವಣಿಗೆ ಸಾಗುವ ಪ್ರಮುಖ ಮಾರ್ಗಗಳಲ್ಲಿ ಶೀಘ್ರದಲ್ಲೇ ಪೊಲೀಸರಿಂದ ‘ರೂಟ್ ಮಾರ್ಚ್’ (ಪಥಸಂಚಲನ) ನಡೆಸಲಾಗುವುದು. ಸಾರ್ವಜನಿಕರು ಹಾಗೂ ಸಂಘಟಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯನ್ನು ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನೆರವೇರಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.

ಭದ್ರತೆ ಹಾಗೂ ಬಂದೋಬಸ್ತ್ ಕೇವಲ ಪೊಲೀಸ್ ಇಲಾಖೆಗೆ ಮಾತ್ರ ಸೀಮಿತವಾಗಿರದೆ, ಪ್ರತಿಯೊಂದು ಇಲಾಖೆಯ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ. ವಿವಿಧ ಇಲಾಖೆಗಳಿಗೆ ವಹಿಸಲಾಗಿರುವ ಜವಾಬ್ದಾರಿಗಳ ಕುರಿತು ಈಗಾಗಲೇ ಪತ್ರಗಳನ್ನು ತಲುಪಿಸಲಾಗಿದೆ. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ, ವಾಚ್ ಟವರ್ ನಿರ್ಮಾಣ, ಬ್ಯಾನರ್ ಮತ್ತು ಪ್ಲೆಕ್ಸ್ ನಿಯಂತ್ರಣ ಕ್ರಮಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಸಾರ್ವಜನಿಕ ಭದ್ರತೆಯ ದೃಷ್ಠಿಯಿಂದ ಲೋಕೋಪಯೋಗಿ ಇಲಾಖೆ ಹಾಗೂ ಸಾರಿಗೆ ಇಲಾಖೆಯಿಂದ ವಾಹನಗಳು ಮತ್ತು ವೇದಿಕೆಗಳ ಫಿಟ್‍ನೆಸ್ ಪ್ರಮಾಣಪತ್ರಗಳನ್ನು ಸಮಯಕ್ಕೆ ಸರಿಯಾಗಿ ಪಡೆಯುವುದು ಕಡ್ಡಾಯ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಪ್ರತಿದಿನವೂ ಕೈಗೊಂಡ ಕಾರ್ಯಗಳ ಪರಿಶೀಲನೆ ನಡೆಸಬೇಕು ಎಂದರು. ಶೋಭಾಯಾತ್ರೆ ಯಶಸ್ವಿ ನಿರ್ವಹಣೆಗಾಗಿ ಈಗಾಗಲೇ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪ್ರಮುಖ ಮಾರ್ಗಗಳ ಪರಿಶೀಲನೆ ನಡೆಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಘಟಕರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ ಎಂದರು.

ಭಕ್ತರ ಸುರಕ್ಷತೆ: ಡ್ರೋನ್, ಪಟಾಕಿ ಸಂಪೂರ್ಣ ನಿಷೇಧ

ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಶೋಭಾಯಾತ್ರೆ ಸಾಗುವ ವೇಳೆಯಲ್ಲಿ ಸಾರ್ವಜನಿಕರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ವಾಹನ ಸಂಚಾರ ಸುಗಮವಾಗಿರಬೇಕು ಮತ್ತು ತುರ್ತು ಸೇವೆಗಳಿಗೆ ಯಾವುದೇ ಅಡಚಣೆಯಾಗದಂತೆ ಯೋಜಿಸಲಾಗಿದೆ.

ಜನಸಾಮಾನ್ಯರು, ಮಕ್ಕಳು ಹಾಗೂ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಈಗಾಗಲೇ ಹೊರಡಿಸಿರುವ ಆದೇಶದಂತೆ ಬಂಟಿಂಗ್ಸ್, ಪೇಪರ್ ಬ್ಲಾಸ್ಟರ್ಸ್ ಹಾಗೂ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೊಲೀಸ್ ಇಲಾಖೆಯ ಅನುಮತಿ ಇಲ್ಲದೆ ಖಾಸಗಿಯವರು ಡ್ರೋನ್ ಕ್ಯಾಮೆರಾ ಹಾರಿಸುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಡ್ರೋನ್ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು. ಭದ್ರತೆಯ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದಲೇ 5-6 ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಕಣ್ಗಾವಲು ಇರಿಸಲಾಗುವುದು ಎಂದರು.

ಶೋಭಾಯಾತ್ರೆಯಲ್ಲಿ ಭಾಗವಹಿಸುವ ಆಯೋಜಕರು ಹಾಗೂ ಸ್ವಯಂಸೇವಕರಿಗೆ ನಿರ್ದಿಷ್ಟ ಬಣ್ಣದ ಟಿ-ಷರ್ಟ್ ವ್ಯವಸ್ಥೆ ಮಾಡಬೇಕು. ಸ್ವಯಂಸೇವಕರ ಪಟ್ಟಿಯನ್ನು ಮುಂಚಿತವಾಗಿಯೇ ಪೊಲೀಸ್ ಇಲಾಖೆಗೆ ಸಲ್ಲಿಸಬೇಕು. ಶೋಭಾಯಾತ್ರೆಗೂ ಮುನ್ನ ಅವರಿಗೆ ಪೊಲೀಸ್ ಅಧಿಕಾರಿಗಳಿಂದ ಸೂಕ್ತ ಬ್ರೀಫಿಂಗ್ ನೀಡಲಾಗುವುದು ಎಂದರು.

ಪ್ರಸಾದ ವಿತರಣೆಗೆ ಕಟ್ಟುನಿಟ್ಟಿನ ನಿಯಮ

ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಂದರ್ಭದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗದಂತೆ ಮುಖ್ಯ ರಸ್ತೆಯಲ್ಲಿ ಪ್ರಸಾದ ವಿತರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಅಡ್ಡ ರಸ್ತೆಗಳಲ್ಲಿ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಸೂಚನೆ ನೀಡಿದರು.

ಈ ಬಾರಿ ಪ್ರಸಾದ ವಿತರಣಾ ಕೌಂಟರ್ ಗಳ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಆಹಾರ ಇಲಾಖೆಯ ಅಧಿಕಾರಿಗಳ ತಂಡ ಪ್ರಸಾದದ ಗುಣಮಟ್ಟ ತಪಾಸಣೆ ನಡೆಸಿದ ನಂತರವಷ್ಟೇ ವಿತರಣೆಗೆ ಅವಕಾಶ ನೀಡಲಾಗುವುದು ಎಂದರು. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಮತ್ತು ಮಕ್ಕಳು ಆಗಮಿಸುವುದರಿಂದ ಕುಡಿಯುವ ನೀರು ಹಾಗೂ ಮೊಬೈಲ್ ಟಾಯ್ಲೆಟ್ ವ್ಯವಸ್ಥೆಯನ್ನು ಸೂಕ್ತ ಸ್ಥಳಗಳಲ್ಲಿ ಗುರುತಿಸಿ ಕಲ್ಪಿಸುವಂತೆ ಆಯೋಜಕರಿಗೆ ಎಎಸ್‍ಪಿ ಸಲಹೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಚಿತ್ರದುರ್ಗ ಡಿವೈಎಸ್‍ಪಿ ಅರುಣ್ ನಾಗೇಗೌಡ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ನಗರಸಭೆ ಪೌರಾಯುಕ್ತೆ ಲಕ್ಷ್ಮೀ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಸಮಿತಿಯ ಸಂಘಟಕರು ಉಪಸ್ಥಿತರಿದ್ದರು.

Author

  • Prashanth Kumar N

    ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

    ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ.

    ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Share
Written by
Prashanth Kumar N - Editor

ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ. ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Loading News...

More News

Related Articles

ಮದಕರಿ ಜಯಂತಿಗೆ ಬಂದ ಕಿಚ್ಚ: ಹೆಲಿಪ್ಯಾಡ್‌ನಿಂದ ವೇದಿಕೆವರೆಗೆ ಬರಿಗಾಲ ನಡಿಗೆ

ಚಿತ್ರದುರ್ಗ: ಮದಕರಿ ನಾಯಕ ಜಯಂತೋತ್ಸವದಲ್ಲಿ ಭಾಗವಹಿಸಲು ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಕಿಚ್ಚ ಸುದೀಪ್ ಅವರ ಭಕ್ತಿ...

ಚಿತ್ರದುರ್ಗದ ಜನರಿಗೆ ಕಿಚ್ಚನ ಭರವಸೆ: ಆಗಾಗ ಬಂದು ಭೇಟಿ ಮಾಡ್ತೇನೆ

ಚಿತ್ರದುರ್ಗ: ಒಂದು ವರ್ಷದ ನಂತರ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿರುವ ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳೊಂದಿಗೆ...

ಮೀಸಲಾತಿ ರದ್ದು, ಸ್ಟಿಂಗ್ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು...

ಚಿತ್ರದುರ್ಗದಲ್ಲಿ ಸಂಸದ ಕಾರಜೋಳ ಗುಡುಗು: ಮೀಸಲಾತಿ ರದ್ದಿಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ

ಚಿತ್ರದುರ್ಗ: ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ರದ್ದಾಗಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ...