ದಾವಣಗೆರೆ: ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ದಾವಣಗೆರೆಯ ಪ್ರತಿಷ್ಠಿತ ಟೀಮ್ ಅಕಾಡೆಮಿ ಹಾಸ್ಟೆಲ್‌ನಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಕುರವತ್ತಿ ಗ್ರಾಮದ ನಿಂಗಪ್ಪ ಅವರ ಪುತ್ರಿ ರಂಜಿತಾ ಮೃತ ವಿದ್ಯಾರ್ಥಿನಿ.
ರಂಜಿತಾ ಓದಿನಲ್ಲಿ ಪ್ರತಿಭಾವಂತೆಯಾಗಿದ್ದು, ದಾವಣಗೆರೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ನಾಲ್ಕೈದು ದಿನಗಳ ಹಿಂದಷ್ಟೇ ಸ್ವಗ್ರಾಮಕ್ಕೆ ತೆರಳಿ ನೂತನ ಮನೆಯ ಗೃಹಪ್ರವೇಶದಲ್ಲಿ ಪಾಲ್ಗೊಂಡು, ಬಳಿಕ ಕಾಲೇಜಿಗೆ ವಾಪಸಾಗಿದ್ದರು.
ಘಟನೆ ನಡೆದ ದಿನ ಬೆಳಿಗ್ಗೆಯೂ ರಂಜಿತಾ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸಂಜೆ ಸುಮಾರು 5.30ರ ವೇಳೆಗೆ ಕಾಲೇಜಿನಿಂದ ಹಾಸ್ಟೆಲ್ ಕೊಠಡಿಗೆ ತೆರಳಿದ್ದರು. ರಾತ್ರಿ ಸುಮಾರು 8.30ರ ವೇಳೆಗೆ ಸ್ನೇಹಿತೆಯರು ಕೊಠಡಿಗೆ ಬಂದಾಗ ಬಾಗಿಲು ತೆರೆಯಲಿಲ್ಲ. ಈ ಕುರಿತು ಹಾಸ್ಟೆಲ್ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಬಳಿಕ ಬಾಗಿಲು ತೆರೆದು ನೋಡಿದಾಗ ರಂಜಿತಾ ಮೃತಪಟ್ಟಿರುವುದು ಪತ್ತೆಯಾಗಿದೆ.
ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ
ರಂಜಿತಾ ಸಾವಿನ ಕುರಿತು ಕುಟುಂಬಸ್ಥರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಕೊಠಡಿಯಲ್ಲಿ ಯಾವುದೇ ಮರಣ ಪತ್ರ ಪತ್ತೆಯಾಗಿಲ್ಲ. ಅಲ್ಲದೆ, ಘಟನೆ ನಡೆದ ಸ್ಥಳದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಮ್ಮ ಮಗಳ ಸಾವಿನ ಹಿಂದೆ ಯಾವುದಾದರೂ ಕಾರಣವಿದೆಯೇ ಎಂಬುದು ತನಿಖೆಯಿಂದ ಹೊರಬರಬೇಕು. ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು ಎಂದು ತಂದೆ ನಿಂಗಪ್ಪ ಹಾಗೂ ಸಂಬಂಧಿಕರು ಆಗ್ರಹಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಟೀಮ್ ಅಕಾಡೆಮಿಯ ಅಧ್ಯಕ್ಷ ಮಂಜಪ್ಪ ಮಾತನಾಡಿ, ಊರಿನಿಂದ ವಾಪಸಾದ ಬಳಿಕ ರಂಜಿತಾ ಕೊಂಚ ಖಿನ್ನತೆಯಲ್ಲಿದ್ದಳು ಎಂಬ ಮಾಹಿತಿ ನಮಗೆ ದೊರೆತಿದೆ. ಮಗಳನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರು ಹಲವು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ತಿಳಿಸಿದ್ದಾರೆ.
ರಂಜಿತಾ ಸಾವಿಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.