ಹೊಳಲ್ಕೆರೆ: ತಾಲ್ಲೂಕಿನ ಈಚ್ಗಟ್ಟ ಗ್ರಾಮದಲ್ಲಿ ಇಂದು ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿಗೆ ಹಾಡು ಹಗಲೇ ಮನೆ ಬಾಗಿಲು ಮುರಿದು ಮನೆಯಲ್ಲಿದ್ದ ಸುಮಾರು 8 ತೊಲೆ ಬಂಗಾರದ ಒಡವೆ ಮತ್ತು ಒಂದು ಸಾವಿರ ರೂ. ನಗದನ್ನು ದೋಚಿ ಕಳ್ಳರು ಪರಾರಿಯಾದ ಘಟನೆ ನಡೆದಿದೆ.
ಗ್ರಾಮದ ಹೆಗ್ಗೆರೆ ಮಹಾರುದ್ರಪ್ಪ ಅವರ ಪತ್ನಿ ಹೇಮಲತಾ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯವರು ಜಮೀನಿಗೆ ಹೋದ ಸಮಯ ನೋಡಿಕೊಂಡು ಕಳ್ಳರು ಮನೆಯ ಕದ ಮುರಿದು ಒಳನುಗ್ಗಿ ಕಳ್ಳತನ ಮಾಡಿದ್ದಾರೆ.
ಮನೆ ಪಕ್ಕದ ಪಾರ್ವತಮ್ಮ ಅವರು ಮನೆಯ ಹಿಂದಿನಿಂದ ಹೋಗಿ ನೋಡಿದಾಗ ಮನೆಯೊಳಗೆ ಯಾರೋ ಇರುವುದನ್ನು ಗುರುತಿಸಿದ್ದಾರೆ. “ಯಾರು ನೀನು?” ಎಂದು ಪ್ರಶ್ನಿಸಿದಾಗ ಕಳ್ಳ “ಅಜ್ಜಿ ಇದೆ, ಅಜ್ಜಿ ಇದೆ” ಎಂದು ಹೇಳಿ ಅಲ್ಲಿಂದ ಓಡಿ ಹೋಗಿದ್ದಾನೆ. ಅನುಮಾನಗೊಂಡ ಪಾರ್ವತಮ್ಮ ಅವರು “ಕಳ್ಳ ಕಳ್ಳ” ಎಂದು ಕೂಗಿಕೊಂಡಾಗ ಆರೋಪಿ ಕಣ್ಮರೆಯಾಗಿದ್ದಾನೆ.
ಕೃತ್ಯ ನಡೆದ ಸಮಯದಲ್ಲಿ ಊರಿನ ಪಕ್ಕದಲ್ಲಿ ಒಂದು ಮೂರು ಚಕ್ರದ ಆಟೋ ನಿಂತಿದ್ದು, ಬಹುಶಃ ಆ ಆಟೋ ಕಳ್ಳರದ್ದೇ ಇರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಆಟೋದಲ್ಲಿ ಪರಾರಿಯಾಗಿರಬಹುದು ಎಂದು ಹೇಳಲಾಗುತ್ತಿದೆ.
ವಿಶೇಷವೆಂದರೆ, ಘಟನಾ ಸ್ಥಳದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ, ಕಳ್ಳರು ನಿರ್ಭಯವಾಗಿ ಹಾಡು ಹಗಲೇ ಕಳ್ಳತನ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಷ್ಟಪಟ್ಟು ದುಡಿದು, ಮಕ್ಕಳ ಮದುವೆಗಾಗಿ ಮಾಡಿಸಿಟ್ಟಿದ್ದ ಚಿನ್ನಾಭರಣ ಕಳ್ಳರ ಪಾಲಾಗಿರುವುದರಿಂದ ಕುಟುಂಬಸ್ಥರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ.
ಈ ಭಾಗದಲ್ಲಿ ಇತ್ತೀಚೆಗೆ ನಿರಂತರವಾಗಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಈ ಕಳ್ಳರ ಜಾಲವನ್ನು ಪತ್ತೆ ಹಚ್ಚಿ, ಜಿಲ್ಲೆಯ ಜನರಿಗೆ ರಕ್ಷಣೆ ಮತ್ತು ನೆಮ್ಮದಿ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.