ಚಿತ್ರದುರ್ಗ: ಬಬ್ಬೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ದಾವಣಗೆರೆ ಟೆಕ್ನೋಸರ್ವ್ ಸಂಸ್ಥೆ ಹಾಗೂ ಸೆಲ್ಕೋ ಸಂಸ್ಥೆ ವತಿಯಿಂದ ಹೊಳಲ್ಕೆರೆ ತಾಲೂಕಿನ ರಾಮಗಿರಿ ಹೋಬಳಿಯ ರಂಗಾಪುರ ಗುರುಕುಲದಲ್ಲಿ ಇದೇ ಸೆಪ್ಟೆಂಬರ್ 11ರಂದು ಬೆಳಿಗ್ಗೆ 9.30ಕ್ಕೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಿಲ್ಲೆಯ ಆಸಕ್ತ ರೈತರಿಗೆ ಸಾವಯವ ಕೃಷಿ ಹಾಗೂ ಸೌರಶಕ್ತಿ ಆಧಾರಿತ ಜೀವನೋಪಾಯ ಚಟುವಟಿಕೆಗಳ ಕುರಿತು ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆಯ ಟೆಕ್ನೋಸರ್ವ್ ಸಂಸ್ಥೆಯ ಶ್ರೀಕಾಂತ್ ಭಟ್, ಅವಿನಾಶ್ ಹಾಗೂ ಮುರುಗೇಶ್ ರವರು ಬಯೋಡೈಜೆಸ್ಟರ್ ಆಧಾರಿತ ಜೀವಾಮೃತ ಘಟಕ ಕುರಿತು ಮಾಹಿತಿ ನೀಡುವರು. ಹೊಳಲ್ಕೆರೆ ತಾಲೂಕಿನ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಂದ ಪೌಷ್ಟಿಕ ಕೈತೋಟದ ಮಹತ್ವ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು.
ವಡೆಯರಹಳ್ಳಿಯ ಪ್ರಗತಿಪರ ರೈತರಾದ ಭೈರೇಶ್ ಅವರು ಜೇನು ಕೃಷಿಯ ಕುರಿತು, ಹಿರಿಯೂರು ತಾಲೂಕಿನ ಗೌಡನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ಕರಿಯಪ್ಪ ಅವರು ಎರೆಹುಳು ಗೊಬ್ಬರ ತಯಾರಿಕೆ ಕುರಿತು ತಮ್ಮ ಅನುಭವವನ್ನು ಹಂಚಿಕೊಳ್ಳುವರು.
ಸೆಲ್ಕೋ ಸಂಸ್ಥೆ ಚಿತ್ರದುರ್ಗದ ಅಜ್ಜಯ್ಯ ಬಿ ರವರು ಸೌರಶಕ್ತಿ ಆಧಾರಿತ ಜೀವನೋಪಾಯ ಚಟುವಟಿಕೆಗಳು, ಸೂರ್ಯಘರ್ ಯೋಜನೆ ಮತ್ತು ಸೋಲಾರ್ ಚಾಲಿತ ಪಂಪ್ಸೆಟ್ ಕುರಿತು ಮಾಹಿತಿ ನೀಡುವರು. ಆದ ಪ್ರಯುಕ್ತ ಆಸಕ್ತ 50 ಜನ ರೈತಭಾಂದವರು ಈ ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ 8277931058 ಗೆ ಕರೆಮಾಡಿ ತರಬೇತಿಯ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಬಬ್ಬೂರುಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ತಿಳಿಸಿದ್ದಾರೆ.
ಮೊದಲು ನೋಂದಾವಣಿ ಮಾಡಿಕೊಂಡ 50 ಜನ ರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಹಾಗೂ ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಲು ಮನವಿ ಮಾಡಲಾಗಿದೆ. ತರಬೇತಿಯಲ್ಲಿ ಭಾಗವಹಿಸುವ ರೈತರಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ರಂಗಾಪುರ ಗುರುಕುಲದಲ್ಲಿ ಮಾಡಲಾಗಿದೆ.