ಚಿತ್ರದುರ್ಗ: ಭಕ್ತಿ, ಸಂಭ್ರಮದ ಜತೆಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ಮೆರೆಯುವ ಮೂಲಕ 20ನೇ ವರ್ಷದ ಹಿಂದೂ ಮಹಾಗಣಪತಿ ಉತ್ಸವದ ಆವರಣದಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನಡೆಸಿದರು.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ಉತ್ಸವದ ಅಂಗವಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಸ್ಟೂಡೆಂಟ್ಸ್ ಫಾರ್ ಸೇವಾ ವತಿಯಿಂದ ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಸ್ವಚ್ಛತಾ ಕಾರ್ಯ ನಡೆಯಿತು.
ಉತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಕಾರ್ಯಕರ್ತರು ಕೈಜೋಡಿಸಿ ಕಸ, ತ್ಯಾಜ್ಯವನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು.
ದೇವರ ಆರಾಧನೆಯಷ್ಟೇ ಪರಿಸರದ ಆರಾಧನೆಯೂ ಮುಖ್ಯ ಎಂಬ ಸಂದೇಶ ಸಾರಿದ ವಿದ್ಯಾರ್ಥಿಗಳ ಕಾರ್ಯ ಸಾರ್ವಜನಿಕರ ಗಮನ ಸೆಳೆಯಿತು. ಉತ್ಸವ ಮುಗಿದ ಬಳಿಕವೂ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂಬ ಅರಿವು ಮೂಡಿಸುವ ಪ್ರಯತ್ನ ನಡೆಯಿತು.
ಕೇವಲ ಕಾರ್ಯಕ್ರಮದ ದಿನ ಮಾತ್ರವಲ್ಲದೆ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಿರುವುದು ಹಾಗೂ ಇತರರಲ್ಲಿಯೂ ಸ್ವಚ್ಛತೆಯ ಅರಿವು ಮೂಡಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬ ಸಂದೇಶವನ್ನು ಅಭಿಯಾನದ ಮೂಲಕ ಸಾರಲಾಯಿತು.
ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಲೇಪಾಕ್ಷ, ಎಬಿವಿಪಿ ರಾಜ್ಯ ಕಾರ್ಯದರ್ಶಿ ಗೋಪಿ ರಂಗಸ್ವಾಮಿ, ಸಾಮಾಜಿಕ ಕಾರ್ಯಕರ್ತ ಕಲ್ಲೇಶ್, ಜಿಲ್ಲಾ ಸಂಚಾಲಕ ಕನಕರಾಜ್ ಕೋಡಿಹಳ್ಳಿ, ಕಿರಣ್, ಸಿದ್ದೇಶ್ ಎಚ್.ಆರ್., ಪ್ರಶಾಂತ್, ಕುಬೇರ ಸೇರಿದಂತೆ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.