ಚಿತ್ರದುರ್ಗ: ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿಲ್ಲ, ಬೇಡಿಕೆಗಳನ್ನು ಈಡೇರಿಸಿಲ್ಲ ಹಾಗೂ ಕನಿಷ್ಠ ಮಾತುಕತೆಗೂ ಕರೆದಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ಸೆಪ್ಟೆಂಬರ್ ೧೮ರಿಂದ ರಾಜ್ಯಾದ್ಯಂತ ಕ್ರಷರ್ ಉತ್ಪಾದನೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಜಿಲ್ಲಾ ಕ್ವಾರೆ ಮತ್ತು ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕಂಟ್ರಾಕ್ಟರ್ ಹಾಗೂ ಕ್ರಷರ್ ಮಾಲೀಕರಿಬ್ಬರ ಬಳಿಯೂ ರಾಯಲ್ಟಿ ಸಂಗ್ರಹಿಸುತ್ತಿದೆ. ಸರ್ಕಾರದ ಈ ದ್ವಿಮುಖ ನೀತಿಯಿಂದ ನಮಗೆ ತೀವ್ರ ಆರ್ಥಿಕ ನಷ್ಟವಾಗುತ್ತಿದೆ. 44 ಎ. ಕಾಯ್ದೆಯನ್ನು ಕೂಡಲೇ ಹಿಂದಕ್ಕೆ ಪಡೆದು ಒಂದೇ ನೀತಿ ಅನುಸರಿಸುವಂತೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ, ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಂತೆ ನಾವೂ ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ!
ನೆರೆಯ ಆಂಧ್ರ ಮತ್ತು ತಮಿಳುನಾಡಿನಿಂದ ಕರ್ನಾಟಕಕ್ಕೆ ನಿರಂತರವಾಗಿ ಜಲ್ಲಿ ಬರುತ್ತಿದೆ. ಆದರೆ, ಅವರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ತೆರಿಗೆ ಪಾವತಿಯಾಗುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಬರಬೇಕಾದ ರಾಯಲ್ಟಿ ಸಂಪೂರ್ಣವಾಗಿ ನಷ್ಟವಾಗುತ್ತಿದೆ. ಆದರೂ, ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ನಮಗೆ ಕಿರುಕುಳ ತಪ್ಪಿಲ್ಲ. ಬ್ಯಾಂಕ್ ಸಾಲ ತೀರಿಸಲಾಗದೆ ರೈತ ಹೇಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೋ, ಅದೇ ಪರಿಸ್ಥಿತಿ ಇಂದು ಕ್ರಷರ್ ಮಾಲೀಕರಿಗೂ ಬಂದೊದಗಿದ್ದು, ನಾವೂ ಆತ್ಮಹತ್ಯೆಯ ದಾರಿ ಹಿಡಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಅಳಲು ತೋಡಿಕೊಂಡರು.
ನಮ್ಮನ್ನು ಮಾತುಕತೆಗೆ ಕರೆದು ಸಮಸ್ಯೆ ಬಗೆಹರಿಸದಿದ್ದರೆ ಆಗಸ್ಟ್ ೧೦ರ ನಂತರ ಉಗ್ರ ಹೋರಾಟ ಮಾಡುವುದಾಗಿ ಈ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು. ಆದರೂ ಸರ್ಕಾರ ಯಾವುದೇ ಕಾಳಜಿ ತೋರಿಲ್ಲ. ಈ ಹಿನ್ನೆಲೆಯಲ್ಲಿ ಸೆ.೧೮ ರಿಂದ ರಾಜ್ಯಾದ್ಯಂತ ಕ್ರಷರ್ ಮಾಲೀಕರು ತಮ್ಮ ಉತ್ಪನ್ನವನ್ನು ಸಂಪೂರ್ಣವಾಗಿ ನಿಲ್ಲಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇ-ವೇ ಬಿಲ್ ಪದ್ಧತಿ ರದ್ದತಿಗೆ ಆಗ್ರಹ
ಕಲ್ಲು ಗಣಿಗೆ ಸಂಬಂಧಿಸಿದಂತೆ ಡಿ.ಎಂ.ಜಿ. ಕಡೆಯಿಂದ ಪ್ರತಿ ವರ್ಷ ಆಡಿಟ್ ಆಗುತ್ತಿರುವುದರಿಂದ ಕೆ.ಇ.ಬಿ. ಬಿಲ್ ಪಾವತಿಸಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು. ಜಿ.ಎಸ್.ಟಿ. ನಿಯಮಗಳ ಪ್ರಕಾರ ೫೦ ಸಾವಿರ ರೂ.ಗಳ ಒಳಗಿನ ಜಿ.ಎಸ್.ಟಿ. ಬಿಲ್ ಇದ್ದರೆ ‘ಈ-ವೇ ಬಿಲ್’ ಅವಶ್ಯಕತೆಯಿರುವುದಿಲ್ಲ ಎಂದು ಕಾನೂನು ಹೇಳುತ್ತದೆ. ಆದರೆ, ನಮ್ಮ ಸರಕು ಸಾಗಾಣಿಕೆ ಬಿಲ್ಲಿನ ಮೊತ್ತ ಕೇವಲ 2 ಸಾವಿರದಿಂದ 15 ಸಾವಿರ ರೂ. ಒಳಗಿದ್ದರೂ ಡಿ.ಎಂ.ಜಿ. ಇಲಾಖೆಯವರು ಈ-ವೇ ಬಿಲ್ ಕೇಳುತ್ತಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು, ತಕ್ಷಣವೇ ಈ-ವೇ ಬಿಲ್ ಪದ್ಧತಿಯನ್ನು ರದ್ದುಪಡಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.
ಮುಖಂಡ ಕಾಂ.ಜಿ.ಸಿ. ಸುರೇಶ್ ಬಾಬು ಮಾತನಾಡಿ, “ಹೊರ ರಾಜ್ಯದಿಂದ ಬರುವ ಜಲ್ಲಿಗೆ ನಮ್ಮ ರಾಜ್ಯ ಸರ್ಕಾರ ಯಾವುದೇ ತೆರಿಗೆ ವಸೂಲಿ ಮಾಡುತ್ತಿಲ್ಲ. ಆದರೆ, ನಮ್ಮ ಉದ್ದಿಮೆಯ ಮೇಲೆ ಇಲ್ಲಸಲ್ಲದ ಕಾನೂನುಗಳನ್ನು ಹೇರಿ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್‌ಗಳಿಗೆ ದಂಡ ವಿಧಿಸುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು. ನಾವೇನೂ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿಲ್ಲ. ಕಾನೂನು ಬದ್ಧವಾಗಿ ಎಂ.ಡಿ.ಪಿ, ಜಿ.ಎಸ್.ಟಿ. ಮುಖಾಂತರವೇ ಸರಕು ಪಡೆದು ಕ್ರಷಿಂಗ್ ಮಾಡಿ ಸಾಗಾಣಿಕೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರಂಜನ್, ಸಂದೀಪ್ ಗುಂಡಾರ್ಪಿ, ಜಿ.ಬಿ. ಶೇಖರ್, ಆಶ್ವತ್‌ರೆಡ್ಡಿ, ಹಾಗೂ ವೀರಭದ್ರಪ್ಪ ಉಪಸ್ಥಿತರಿದ್ದರು.