Home ಧಾರ್ಮಿಕ ಕೆ.ಎಂ.ವೀರೇಶ್ ಎಂಬ ಪರ್ಯಾಯ ಕನ್ನಡ ಮತ್ತು ಕಲ್ಚರ್ ಕಚೇರಿ!
ಧಾರ್ಮಿಕ

ಕೆ.ಎಂ.ವೀರೇಶ್ ಎಂಬ ಪರ್ಯಾಯ ಕನ್ನಡ ಮತ್ತು ಕಲ್ಚರ್ ಕಚೇರಿ!

Share
Share

ಮೊನ್ನೆ ಗಂಟಲು ನೋವಿನ ಕಾರಣಕ್ಕೆ ಗುಳಿಗೆ ನುಂಗಿ ಬೇಗ ಮಲಗಿದ್ದೆನು. ರಾತ್ರಿ 10ಗಂಟೆ ಸುಮಾರಿಗೆ ಆತ್ಮೀಯರಾದ ಬಸವೇಶ್ವರ ಆಸ್ಪತ್ರೆಯ ಮ್ಯಾನೇಜರ್ ಸತ್ಯನಾರಾಯಣ್ ಕರೆ ಮಾಡಿ ಕೆ.ಎಂ.ವೀರೇಶ್ ಅವರ ಅಗಲಿಕೆಯ ಸುದ್ದಿ ಹೇಳಿದರು. ವಿರೇಶ್ ಅವರ ಅಗಲಿಕೆಯ ಕಾರಣಕ್ಕೇನೆ ಗಂಟಲುಬ್ಬಿಕೊಂಡಿತ್ತಾ ಎಂದು ಚಿಂತಾಕ್ರಾಂತನಾದೆನು. ಕಣ್ಣರಿಯದಿದ್ದರು ಕರಳರಿಯುತ್ತದೆಂಬ ಭಾವ ಬಹು ಕಾಡಿತು. ವಿರೇಶ್ ಅವರ ನಿಷ್ಕಲ್ಮಷ ಮನಸಿಗೆ ಸಾಕ್ಷಿಯಾದ ಅನೇಕ ಪ್ರಸಂಗಗಳ ಸುರುಳಿ ಬಿಚ್ಚ ತೊಡಗಿತು. ಹೇಳುತ್ತ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಸಾಗುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷರಾಗಿ 2008ರಲ್ಲಿ ಕೋಟೆನಾಡು ಚಿತ್ರದುರ್ಗಕ್ಕೆ 75ನೇ ಕನ್ನಡ ಸಾಹಿತ್ಯ ಸಮ್ಮೇಳನ ತಂದವರು ಕೆ ಎಂ ವಿರೇಶ್. ಅನೇಕ ಕಾರಣಗಳಿಂದ ಸಮ್ಮೇಳನದ ದಿನಾಂಕ ಮುಂದೂಡುವ ಪ್ರಸಂಗ ಎದುರಾದರೂ ಬೇಸರಿಸಿಕೊಳ್ಳಲಿಲ್ಲ. ಛಲ ಬಿಡದ ತ್ರಿವಿಕ್ರಮನಂತೆ ಸಮ್ಮೇಳನ ಸಂಘಟಿಸಿಯೇ ಬಿಟ್ಟರು. ಚಿತ್ರದುರ್ಗದಲ್ಲಿ ಮೂಲ ಸೌಕರ್ಯಗಳ ಕೊರತೆಯ ನೆಪವೂ ಸಮ್ಮೇಳನಕ್ಕೆ ಕಂಟಕವಾಗಿತ್ತು. ಅಂದಿನ ದಕ್ಷ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್, ವಿರೇಶ್ ಅವರ ಜತೆ ಕೈಜೋಡಿಸಿದರು. ಸಿಕ್ಕ ಸಮಯ ಬಳಸಿಕೊಂಡು ವಿವಿಧ ಯೋಜನೆಯಡಿ ನಗರದ ಮೂಲ ಸೌಕರ್ಯಗಳ ಅಭಿವೃದ್ಧಿ, ಸುಂದರೀಕರಣವೂ ನಡೆದೇ ಬಿಟ್ಟಿತು. ಕನ್ನಡದ ಹೆಸರಿನಲ್ಲಿ ಯಾವುದಾದರೂ ನಗರ ಅಭಿವೃದ್ಧಿ ಕಂಡಿದ್ದರೆ ಅದು ಕೋಟೆನಗರಿ ಎಂದರೆ ಅತಿಶಯೋಕ್ತಿ ಅಲ್ಲ.

ಸಮ್ಮೇಳನಕ್ಕೆ ದಿನಗಣನೆ ಶುರುವಾದ ವೇಳೆ ಜಿಲ್ಲೆಯ ಇತಿಹಾಸ, ಪರಂಪರೆ, ಐತಿಹಾಸಿಕ ತಾಣಗಳು, ಸಾಹಿತ್ಯ, ಕಲೆ, ಕ್ರೀಡೆ ಹೀಗೆ ಯಾವೊಂದು ಕ್ಷೇತ್ರವೂ ಬಿಡದೆ ಪ್ರತಿನಿತ್ಯ ವಿಶೇಷ ಸ್ಟೋರಿಗಳನ್ನು ಮಾಡುವ ಮೂಲಕ ಈಟೀವಿಯಲ್ಲಿ ಮಹೇಶ್ ಬಾಬು, ಕಸ್ತೂರಿ ಟೀವಿಯಲ್ಲಿ ನಾಗರಾಜ ಹೆಗಡೆ, ಟಿವಿ9ನಲ್ಲಿ ನನಗೆ ನಾಡಿನ ಗಮನ ಸೆಳೆಯುವ ಅವಕಾಶ ದಕ್ಕಿದ್ದು ಸುಕೃತವೇ ಸರಿ. ಕೆ.ಎಂ. ವೀರೇಶ್ ಪ್ರತಿದಿನ 8ಗಂಟೆಯ ನ್ಯೂಸ್ ನೋಡಿ ಕರೆ ಮಾಡಿ ಬೆನ್ನುತಟ್ಟುತ್ತಿದ್ದರು. ಕಸಾಪ ರಾಜ್ಯದ್ಯಕ್ಷರಾಗಿದ್ದ ನಲ್ಲೂರು ಪ್ರಸಾದ್, ಮದನಗೌಡರು ವಾರಗಟ್ಟಲೇ ದುರ್ಗದಲ್ಲೇ ಬಿಡಾರ ಹೂಡಿದ್ದರು. ಕೊನೆಗೂ ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಅಕ್ಷರಶ: ಜಾತ್ರೆಯಂತೆ ಸಮ್ಮೇಳನ ನಡೆಯಿತು. ರಾಜ್ಯದೆಲ್ಲೆಡೆಯಿಂದ ಜನಸಾಗರವೇ ಸಮ್ಮೇಳನಕ್ಕೆ ಹರಿದು ಬಂದಿದ್ದು, ಕೋಟೆನಾಡಿನಲ್ಲಿ ಕವಿ- ಸಾಹಿತಿಗಳ ಕಲರವ, ಮಿರ್ಚಿ-ಮಂಡಕ್ಕಿಯಂತೆ ಖರ್ಚಾದ ಪುಸ್ತಕಗಳು ಸಮ್ಮೇಳನದ ಯಶಸ್ಸಿಗೆ ಸಾಕ್ಷಿ ಆಗಿತ್ತು.

ಜಾತ್ರೆ ಅಂದ ಬಳಿಕ ಅವ್ಯವಸ್ಥೆ ಸಹಜವಾಗಿ ಕಂಡು ಬರುತ್ತದೆ. ಸಮ್ಮೇಳದಲ್ಲೂ ಧೂಳು, ಹದಗೆಟ್ಟ ಊಟದ ವ್ಯವಸ್ಥೆ, ಗದ್ದಲ ಗಲಾಟೆಗಳು ಸಂಭವಿಸಿದವು. ಟಿವಿ9ನಿಂದ ನಾನು ಮತ್ತು ಹರಿಪ್ರಸಾದ್ ಅವರು ಸೇರಿ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ಸ್ಟೋರಿಗಳನ್ನು ಮಾಡಿದ್ದೆವು. ಸಮ್ಮೇಳನದಲ್ಲಿ ಈ ಭಾಗದ ಬುಡಕಟ್ಟು ಸಂಸ್ಕೃತಿಯ ಮ್ಯಾಸ ಬೇಡರು ಮತ್ತು ಕಾಡು ಗೊಲ್ಲರಿಗೆ ಪ್ರಾತಿನಿಧ್ಯ ನೀಡದೆ ಕಡೆಗಣಿಸಲಾಗಿದೆ ಎಂಬ ಆರೋಪವೂ ಹೈಲೈಟ್ ಆಗಿತ್ತು. ‘ಕನ್ನಡ ಸಮ್ಮೇಳನ ಬಗ್ಗೆಯೂ ನೆಗೆಟಿವ್ ಸ್ಟೋರಿ ಮಾಡ್ತೀರಲ್ರೀ’ ಎಂದು ರಾಜ್ಯದ್ಯಕ್ಷ ನಲ್ಲೂರು ಪ್ರಸಾದ್ ನಮ್ಮ ಮೇಲೆ ಕೊಂಚ ಮುನಿಸಿಕೊಂಡು ಮಾತನಾಡಿದ್ದುಂಟು. ಆದರೆ ಕಸಾಪ ಜಿಲ್ಲಾದ್ಯಕ್ಷರಾಗಿದ್ದ ಕೆ ಎಂ ವಿರೇಶ್ ಅವರು ಮಾತ್ರ ಕೊಂಚವೂ ಬೇಸರಿಸಿಕೊಳ್ಳದೆ ಸಮಚಿತ್ತದಿಂದಲೇ ವ್ಯವಹರಿಸಿದ್ದು ಎಂದೂ ಮರೆಯಲಾಗದು. ಅದೇ ಪ್ರೀತಿ, ಅದೇ ಕಕ್ಕುಲಾತಿಯಿಂದಲೇ ಮಾತನಾಡಿಸುತ್ತಿದ್ದರು ಮಾತ್ರ ಅಲ್ಲದೆ ಜತೆಗೇ ಊಟಕ್ಕೆ ಬನ್ನಿ ಎಂದು ಕರೆಯುವುದು ಮರೆಯುತ್ತಿರಲಿಲ್ಲ. ಎಷ್ಟೇ ಒತ್ತಡದ ಕಾರ್ಯದಲ್ಲಿದ್ದರೂ ಕರೆ ಸ್ವೀಕರಿಸಿ ಅಗತ್ಯ ಮಾಹಿತಿ ನೀಡುತ್ತಿದ್ದ ಕರ್ತವ್ಯ ಪ್ರಜ್ಞೆ ಗ್ರೇಟ್.

ಬಾಪೂಜಿ ವಿದ್ಯಾ ಸಂಸ್ಥೆ ಕಟ್ಟುವ ಮೂಲಕ ಶಿಕ್ಷಣ ಸೇವೆ ಮಾತ್ರ ಅಲ್ಲದೆ ಕಲೆ, ಸಾಹಿತ್ಯ, ಸಂಸ್ಕೃತಿಯ ಸೇವೆ ಸಲ್ಲಿಸಿದ ಮೇರುವ್ಯಕ್ತಿ. ಚಿತ್ರದುರ್ಗದ ಯಾವುದೇ ಸಂಘ- ಸಂಸ್ಥೆಗಳಿರಲಿ; ಕಲಾವಿದರೇ ಆಗಿರಲಿ. ಯಾವುದೇ ಸಾಹಿತ್ಯ, ಸಾಂಸ್ಕೃತಿಕ, ಕಲೆ ಸಂಬಂಧಿತ ಕಾರ್ಯಕ್ರಮ ಆಯೋಜಿಸಿದ ವಿಷಯ ತಿಳಿದಾಕ್ಷಣ ನೆರವಿನ ಹಸ್ತ ಚಾಚುತ್ತಿದ್ದರು. ನನ್ನ ಪಾಲು ನಾನು ನೀಡುತ್ತೇನೆಂದು ಘೋಷಿಸುವ ಮೂಲಕ ಆಯೋಜಕರಿಗೆ ಆನೆಬಲ ತುಂಬುತ್ತಿದ್ದರು. ಅಷ್ಟೇ ಅಲ್ಲದೆ, ಪ್ರೇಕ್ಷಕರ ಸಮಸ್ಯೆ ಎದುರಾದಾಗ ತಮ್ಮದೇ ಕಾಲೇಜಿನ ಬಿಇಡಿ ವಿದ್ಯಾರ್ಥಿಗಳನ್ನು ಕಳಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ವಿಚಾರ ಗೋಷ್ಠಿ, ಸಾಹಿತ್ಯ ಕಾರ್ಯಕ್ರಮದಿಂದ ಅನುಕೂಲ ಆಗುತ್ತದೆ ಎಂದು ಬಲವಾಗಿ ನಂಬಿದ್ದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದರೆ ಆ ಕಾರ್ಯಕ್ರಮಕ್ಕೊಂದು ಕಳೆ. ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಭಾಷಣ ಮಾಡುತ್ತಿದ್ದ ಪರಿ ಎಂಥವರಲ್ಲೂ ಬೆರಗು ಮೂಡಿಸುತ್ತಿತ್ತು.

ಸಾಹಿತ್ಯ, ಕಲೆಗೆ ಸಂಬಂಧಿಸಿದವರಿಗೆ ಶಿಕ್ಷಣ, ಆರೋಗ್ಯ ವಿಚಾರದಲ್ಲಿ ಉದಾರವಾಗಿ ಸಹಾಯ ನೀಡುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಸದಾ ಮಿಡಿಯುತ್ತಿದ್ದ ಜೀವ ಕೆ ಎಂ ವಿರೇಶ್. ಪತ್ರಕರ್ತರಿಗೆ ಅಗತ್ಯ ಬಿದ್ದಾಗ ರಾಜ್ಯದ ಯಾವುದೇ ಕವಿ, ಸಾಹಿತಿ ಬಗ್ಗೆ ಕೇಳಿದರೂ ತಕ್ಷಣಕ್ಕೆ ಅವರ ವಿವರ ಹೇಳುವುದು ಮಾತ್ರವಲ್ಲ. ಅವರ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಕೊಟ್ಟು ಪರಿಚಯ ಮಾಡಿಸುತ್ತಿದ್ದುದು ಶ್ರೇಷ್ಠ ಕಾರ್ಯವೇ ಸರಿ. ಕೆ ಎಂ ವಿರೇಶ್ ಚಿತ್ರದುರ್ಗದ ಮಟ್ಟಿಗೆ ಅಂತೂ ಪರ್ಯಾಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಎಂದರೆ ತಪ್ಪಾಗದು ಎಂಬುದು ನನ್ನ ಭಾವನೆ.

ಹಿರಿಯರು-ಕಿರಿಯರೆನ್ನದೆ ಎಲ್ಲರಿಗೂ ಅಣ್ಣ, ಗುರುವೇ, ಅಪ್ಪಾಜಿ ಎಂದೇ ಮಾತನಾಡಿಸುತ್ತಿದ್ದ ಪರಿ ವಿನಯಶೀಲತೆಗೆ ಸಾಕ್ಷಿ. ಸದಾ ಏಕಚಿತ್ತದಿಂದ ಬದುಕುವ ಕಲೆ ಅವರಿಗೆ ಸಿದ್ಧಿಸಿತ್ತು. ಕೆಲ ವರ್ಷದ ಹಿಂದೆ ಬಾಪೂಜಿ ಕಾಲೇಜಿನಲ್ಲಿ ಹುದ್ದೆ ಕೊಡುವುದಾಗಿ ಹಣ ಪಡೆದು ಈವರೆಗೆ ಹುದ್ದೆ ನೀಡಿಲ್ಲ ಎಂಬುದಾಗಿ ಒಬ್ಬರು ಗಂಭೀರ ಆರೋಪ ಹೊರಿಸಿದ್ದರು. ಆ ಬಗ್ಗೆ ದೊಡ್ಡದಾಗಿ ಸುದ್ದಿ ಪ್ರಕಟಿಸಿದ್ದೆವು. ಮರುದಿನವೇ ಕೆ ಎಂ ವಿರೇಶ್ ಅವರು ಯಾವುದೋ ಕಾರ್ಯಕ್ರಮವೊಂದರಲ್ಲಿ ಎದುರಾದರು. ಆದರೆ ಯಾವುದೇ ಕೋಪ-ತಾಪ, ಮುನಿಸು ಅವರಲ್ಲಿ ಕಿಂಚಿತ್ತು ಕಾಣಲಿಲ್ಲ. ಬದಲಾಗಿ ಎಂದಿನ ಪ್ರೀತಿ, ಅಕ್ಕರೆಯಿಂದ ಮಾತನಾಡಿಸಿದರಲ್ಲದೆ ಬನ್ನಿ ಕಾಫಿ ಕುಡಿಯೋಣ ಎಂದು ಕರೆದದ್ದು ಮರೆಯದ ಅನುಭವ.

ಕೆ.ಎಂ. ವೀರೇಶ್ ಅವರ ನಡೆ ನುಡಿ ಅಧ್ಯಯನ ಮಾಡಿದರೆ ಮಾನವ ಪ್ರೀತಿಯ ಹೊರತು ಬೇರೆನನ್ನೂ ಹಂಚಿಕೊಳ್ಳಬಾರದೆಂದು ನಿರ್ಧರಿಸಿರುವ ಮಾನವತಾವಾದಿ ಎಂಬುದು ಮನದಟ್ಟಾಗುತ್ತದೆ. ಅವರಲ್ಲಿರುವ ಎಲ್ಲರೊಳಗೊಂದಾಗುವ ಗುಣವೇ ಕಸಾಪ ಜಿಲ್ಲಾದ್ಯಕ್ಷರಾಗಿ 75ನೇ ಕನ್ನಡ ಸಾಹಿತ್ಯ ಸಮ್ಮೇಳನ, ಶರಣ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾಗಿ ಶರಣ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿಸಿದ್ದರ ಹಿಂದಿರುವ ಗುಟ್ಟು ಎಂಬುದು ಮನದಟ್ಟಾಗುತ್ತದೆ.

Author

Share
Written by
ಬಸವರಾಜ ಮುದನೂರ್ - Sub Editor

ಹಿರಿಯ ಪತ್ರಕರ್ತರು, ಚಿತ್ರದುರ್ಗ

Loading News...

More News

Related Articles

ಚಿತ್ರದುರ್ಗ: ಆಗಸ್ಟ್ 13ರಿಂದ ಮುರುಘಾಮಠದಲ್ಲಿ ವೈಭವದ ಶರಣಸಂಸ್ಕೃತಿ ಉತ್ಸವ

ಚಿತ್ರದುರ್ಗ ಮುರುಘಾಮಠದಲ್ಲಿ ಅದ್ಧೂರಿ 'ಶರಣಸಂಸ್ಕೃತಿ ಉತ್ಸವ': ಬೃಹತ್ ಕೃಷಿ ಮೇಳ, 10 ಸಾವಿರ ಜನರಿಗೆ ಉಚಿತ...