ಚಿತ್ರದುರ್ಗ: ಸರ್ಕಾರದ ಯೋಜನೆಗಳು ಕೇವಲ ಕಾರ್ಯಕ್ರಮಗಳ ಆಯೋಜನೆಗೆ ಸೀಮಿತವಾಗಬಾರದು. ಅಧಿಕಾರಿಗಳು ಕಚೇರಿ ಬಿಟ್ಟು ಜನರ ಬಳಿ ಹೋಗಿ, ಅವರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜೊತೆಗೆ, ಭದ್ರಾ ನಾಲೆ ಒಡೆದು ನೀರು ಪಡೆಯುವ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸುವ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಹೊಳಲ್ಕೆರೆ ಪಟ್ಟಣದ ಸಂವಿಧಾನ ಸೌಧದ ಶ್ರೀಮಹರ್ಷಿ ವಾಲ್ಮೀಕಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಪ್ರಜಾಸೇವಾ ಆಂದೋಲನ’ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭದ್ರಾ ನಾಲೆ ಒಡೆದರೆ ಕೇಸ್ ಗ್ಯಾರಂಟಿ!
ಚಿತ್ರದುರ್ಗ ಬ್ರಾಂಚ್ ಕೆನಾಲ್ಗೆ ಪ್ರಾಯೋಗಿಕವಾಗಿ ಭದ್ರಾ ನೀರು ಹರಿಸಲಾಗುತ್ತಿದೆ. ಆದರೆ, ಕೆಲವೆಡೆ ಜನರು ಆತಂಕಗೊಂಡು ತಮ್ಮ ಭಾಗದ ಕೆರೆಗಳಿಗೆ ನೀರು ಹರಿಸಿಕೊಳ್ಳುವ ಭರದಲ್ಲಿ ನಾಲೆ ಒಡೆದು ನೀರು ಪೋಲು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸಾರ್ವಜನಿಕ ಆಸ್ತಿ ನಾಶಪಡಿಸಿ ನೀರು ಕದಿಯುವುದು ಕಾನೂನುಬಾಹಿರ ಕೃತ್ಯ. ಇಂಥವರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.
“ಸದ್ಯಕ್ಕೆ 0.60 ಟಿಎಂಸಿ ನೀರು ಮಾತ್ರ ಬಂದಿದೆ. ಇನ್ನು 2.40 ಟಿಎಂಸಿ ನೀರು ಹರಿಯಲಿದ್ದು, ಸುಮಾರು ಒಂದು ತಿಂಗಳ ಕಾಲ ನೀರು ಬರಲಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಒಟ್ಟು 29.90 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅಚ್ಚುಕಟ್ಟು ಭಾಗದ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುವುದು. ರೈತರು ಯಾವುದೇ ಕಾರಣಕ್ಕೂ ಆತಂಕಪಟ್ಟು ಕಾನೂನು ಕೈಗೆತ್ತಿಕೊಳ್ಳಬಾರದು” ಎಂದು ಸಚಿವರು ಮನವಿ ಮಾಡಿದರು.
Read This: ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಬಿಡುಗಡೆ: ನದಿ ಪಾತ್ರದ ಜನರಿಗೆ ಹೈ ಅಲರ್ಟ್!
ಶೀಘ್ರದಲ್ಲೇ ಚಿತ್ರದುರ್ಗದ 3 ತಾಲೂಕುಗಳು ಬರಪೀಡಿತ ಎಂದು ಘೋಷಣೆ
ರಾಜ್ಯ ಮಟ್ಟದಲ್ಲಿ ಪ್ರಜಾಸೇವಾ ಆಂದೋಲನಕ್ಕಾಗಿ ಪ್ರತ್ಯೇಕ ಇಲಾಖೆ ತೆರೆಯಲಾಗಿದ್ದು, ಸ್ವತಃ ಮುಖ್ಯಮಂತ್ರಿಗಳೇ ಇದರ ಉಸ್ತುವಾರಿ ವಹಿಸಿದ್ದಾರೆ ಎಂದ ಸಚಿವರು, ತಾಲೂಕು ಮಟ್ಟದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲಿ ಪರಿಹರಿಸಲಾಗುವುದು ಎಂದರು.
ಈಗಾಗಲೇ ಕೇಂದ್ರದ ಎನ್ಡಿಆರ್ಎಫ್ ನಿಯಮಾವಳಿಯಂತೆ ಚಳ್ಳಕೆರೆ, ಹಿರಿಯೂರು ಮತ್ತು ಹೊಸದುರ್ಗ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇದೀಗ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳು ಕೂಡ ಬರಪೀಡಿತ ಪ್ರದೇಶಗಳ ಸಾಲಿಗೆ ಸೇರಲು ಅರ್ಹತೆ ಪಡೆದುಕೊಂಡಿವೆ. ಶೀಘ್ರದಲ್ಲೇ ಈ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಮಾಹಿತಿ ನೀಡಿದರು.
76 ವರ್ಷಗಳಿಂದ ಜಿಲ್ಲೆಗೆ ಬರದ ಬರೆ: ಶಾಸಕ ಚಂದ್ರಪ್ಪ ಆಕ್ರೋಶ
ಸಭೆಯಲ್ಲಿ ಮಾತನಾಡಿದ ಶಾಸಕ ಡಾ. ಎಂ. ಚಂದ್ರಪ್ಪ, “ಕಳೆದ 100 ವರ್ಷಗಳ ಇತಿಹಾಸದಲ್ಲಿ ಚಿತ್ರದುರ್ಗ ಜಿಲ್ಲೆ ಸುಮಾರು 76 ವರ್ಷಗಳ ಕಾಲ ಕೇವಲ ಬರ ಪರಿಸ್ಥಿತಿಯನ್ನೇ ಎದುರಿಸಿದೆ. ಸದ್ಯ ಹೊಳಲ್ಕೆರೆ ತಾಲೂಕಿನಲ್ಲಿ ಭೀಕರ ಅಭಾವವಿದ್ದು, ರೈತರು ಕಂಗಾಲಾಗಿದ್ದಾರೆ. ಕೂಡಲೇ ಹೊಳಲ್ಕೆರೆಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು” ಎಂದು ಆಗ್ರಹಿಸಿದರು.
“ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಗೆ ಹಂಚಿಕೆಯಾಗಿರುವ 12.5 ಟಿಎಂಸಿ ನೀರಿನಲ್ಲಿ, ಕೇವಲ 3 ಟಿಎಂಸಿ ಮಾತ್ರ ಹರಿಸಲಾಗುತ್ತಿದೆ. ನಾಲ್ಕು ತಾಲೂಕುಗಳಿಗೆ ಕೇವಲ 3 ಟಿಎಂಸಿ ನೀರು ಕೊಟ್ಟರೆ ಯಾವ ಮೂಲೆಗೆ ಸಾಲುತ್ತದೆ? ಲಭ್ಯವಿರುವ ಉಳಿದ ನೀರನ್ನು ತಕ್ಷಣ ಹರಿಸಬೇಕು. ಚಿಕ್ಕಂದವಾಡಿ, ಸಾಸುಲುಹಳ್ಳಿ ಸೇರಿದಂತೆ ತಾಲೂಕಿನ 11 ಕೆರೆಗಳನ್ನು ಭದ್ರಾ ಯೋಜನೆಯ ವ್ಯಾಪ್ತಿಗೆ ಸೇರಿಸಬೇಕು” ಎಂದು ಶಾಸಕರು ಒತ್ತಾಯಿಸಿದರು.
ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಿ:
ತಲೆತಲಾಂತರದಿಂದ ಉಳಿಸಿಕೊಂಡು ಬಂದಿರುವ ಖಾತೆ ಬದಲಾವಣೆ ಹಾಗೂ ನಿವೇಶನಗಳ ಹಕ್ಕುಪತ್ರ ಸಿಗದೆ ಜನ ಪರದಾಡುತ್ತಿದ್ದಾರೆ. ಸಭೆಗಳು ಕೇವಲ ನಾಮಕಾವಸ್ಥೆಯಾಗಬಾರದು. ಜನರು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಕೇವಲ ಒಂದು ವಾರದೊಳಗೆ ಅಧಿಕಾರಿಗಳು ನ್ಯಾಯ ಒದಗಿಸಬೇಕು ಎಂದು ಶಾಸಕ ಚಂದ್ರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು, ಜಿಲ್ಲಾಧಿಕಾರಿ ಎಸ್. ರಮ್ಯ, ಜಿ.ಪಂ. ಸಿಇಒ ಡಾ. ಎಸ್. ಆಕಾಶ್, ಎಸ್ಪಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ವತಿಯಿಂದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.