ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಂಗಳವಾರ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರ ಮೀಸಲಾತಿ ಹೆಚ್ಚಿಸಿತ್ತು. ಆದರೆ ಈ ಸರ್ಕಾರ ಕೋರ್ಟ್ನಲ್ಲಿ ಸರಿಯಾಗಿ ವಾದ ಮಾಡಲಿಲ್ಲ. ಏನು ದಾಡಿ ಆಗಿದೆ ಈ ಸರ್ಕಾರಕ್ಕೆ? ಎಂದು ಪ್ರಶ್ನಿಸಿದರು.
ದೆಹಲಿ ಪ್ರತಿಭಟನೆ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ತಳ್ಳಾಡಿದ ವಿಚಾರದ ಬಗ್ಗೆ ಮಾತನಾಡಿ, ಸಿಎಂ ವಯಸ್ಸಿಗೆ ಗೌರವ ಕೊಡಬೇಕಿತ್ತು. ಅಂಗರಕ್ಷಕರು ಅವರನ್ನು ಎಳೆದು ಹಿಂದಕ್ಕೆ ಹಾಕಿದರು. ಇದು ಡಿಕೆಶಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾಡಿದ ಅವಮಾನ ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇಂದು ಅದೇ ಸಿದ್ದರಾಮಯ್ಯ ಕೋರ್ಟಿಗೆ ಹೋಗಿ ಸ್ಟೇ ತರುವ ಪರಿಸ್ಥಿತಿ ಬಂದಿದೆ. ಇದೆಲ್ಲ ಸ್ಟಿಂಗ್ ಆಪರೇಷನ್ ನಾಟಕ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ, ಕಾಂಗ್ರೆಸ್ ಕಚೇರಿ ಸಿಡಿ ಫ್ಯಾಕ್ಟರಿಯಾಗಿದೆ. ದೊಡ್ಡ ಕುರ್ಚಿ ಸಿಗಬೇಕು ಎಂದು ಸ್ಟಿಂಗ್ ಮಾಡುತ್ತಿದ್ದೀರಿ. ಇದರ ಪ್ರೊಡ್ಯೂಸರ್ ಯಾರು, ಡೈರೆಕ್ಟರ್ ಯಾರು ಎಂದು ಡಿಕೆಶಿ ಅವರೇ ಹೇಳಬೇಕು.
ಸ್ಟಿಂಗ್ ಮಾಡಿ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿದರೆ ನಿಮ್ಮ ಹೊಟ್ಟೆ ತುಂಬುವುದಿಲ್ಲ. ಡಿಕೆಶಿ ಒಳ್ಳೆಯ ಸಿಎಂ ಅಲ್ಲ, ವ್ಯಾಪಾರಸ್ಥ ಸಿಎಂ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು.