Home ರಾಜ್ಯ ನಿವೃತ್ತ ಸಿದ್ದರಾಮಯ್ಯ’ ವರವೋ, ಶಾಪವೋ..!? | Karnataka Congress Politics
ರಾಜ್ಯ

ನಿವೃತ್ತ ಸಿದ್ದರಾಮಯ್ಯ’ ವರವೋ, ಶಾಪವೋ..!? | Karnataka Congress Politics

Share
Share

ಸುಭಾಷ್ ಹೂಗಾರ
ಮೂರನೇ ಮಹಡಿ | ಸಂಯುಕ್ತ ಕರ್ನಾಟಕ

ಕೈ ಕಾಲು ಗಟ್ಟಿ ಇರುವ, ರಟ್ಟೆಯಲ್ಲಿ ಕಸುವು, ದುಡಿಯುವ ಶಕ್ತಿ, ಸಾಮರ್ಥ್ಯ, ಉಮೇದು, ಮನಸು ಮತ್ತು ಆಸೆ ಇರುವ ಸ್ವಸ್ಥ ವ್ಯಕ್ತಿಯೊಬ್ಬನಿಗೆ ‘ಇನ್ಮುಂದೆ ದುಡಿಯುವ ಅಗತ್ಯವೂ ಇಲ್ಲ, ಅವಕಾಶವೂ ಇಲ್ಲ, ತಿಂದುಂಡು ಮನೆಯಲ್ಲಿ ನೆಮ್ಮದಿಯಿಂದ ಇದ್ದರೆ ಸಾಕು’ ಎನ್ನುವಂಥ ಅನಿವಾರ್ಯ ಪರಿಸ್ಥಿತಿ ಬಂದುಬಿಟ್ಟರೆ ಏನಾಗಬಹುದು? ಇದೊಂದು ರೀತಿ ಅಧಿಕೃತವಾಗಿ ನಿವೃತ್ತರಾಗುವ ಮೊದಲೇ ಪರಿಸ್ಥಿತಿಯ ಒತ್ತಡದಿಂದಾಗಿ ಒಲ್ಲದ ಮನಸಿನಿಂದ ‘ಸ್ವಯಂ ನಿವೃತ್ತಿ’ ಪಡೆದಿರುವ ಕ್ರಿಯಾಶೀಲ ಉದ್ಯೋಗಿಯೊಬ್ಬನ ಮನಸ್ಥಿತಿಯೂ ಹೌದು. ಎಷ್ಟು ದಿನ ಅಂತ ಏನೂ ಮಾಡದೇ ಹೀಗೆ ಸುಮ್ಮನೇ ಕೂರಲು ಸಾಧ್ಯ? ಒತ್ತಾಯಪೂರ್ವಕವಾಗಿ ದೈಹಿಕವಾಗಿ ಮನೆಯಲ್ಲೇ ಕೂತರು ಮನಸ್ಸೆಂಬ ಮರ್ಕಟ ಸುಮ್ಮನೆ ಕೂರಲು ಬಿಡುವುದಿಲ್ಲವಲ್ಲ. ಕೆಲ ದಿನಗಳ ನಂತರವಾದರೂ ಏನಾದರೂ ಮಾಡಲೇಬೇಕಲ್ಲವೇ?.

ಮಾಜಿ ಸಿಎಂ ಸಿದ್ದರಾಮಯ್ಯ ಅವರದು ಈಗ ಥೇಟ್ ಇಂಥದೇ ಸ್ಥಿತಿ. ‘ನನಗೀಗ ದುಡಿಯುವ ಅಗತ್ಯವೇನಿಲ್ಲ. ಆದರೆ, ಟೈಂಪಾಸ್‌ಗಾಗಿ ಕೆಲಸ ಮಾಡುತ್ತಿದ್ದೇನೆ’ ಎನ್ನುವ ಕೆಲ ‘ಸೀನಿಯರ್ ಸಿಟಿಜೆನ್’ಗಳ ರೀತಿಯಲ್ಲೇ ಸಿದ್ದರಾಮಯ್ಯ ಅವರ ರಾಜಕೀಯ ಈಗ ನಡೆದಿದೆ. ಅದೇ ಕಾರಣಕ್ಕಾಗಿ, ‘ಪ್ರಸ್ತುತ ರಾಜಕಾರಣದಲ್ಲಿ ಹಣದ ಪ್ರಭಾವ ಹೆಚ್ಚಾಗಿರುವುದರಿಂದ ಭವಿಷ್ಯದಲ್ಲಿ ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಆದರೆ, ರಾಜಕೀಯವಾಗಿ ಸಕ್ರಿಯನಾಗಿರುತ್ತೇನೆ’ ಎಂದು ಘೋಷಿಸಿದ್ದಾರೆ. ಜನಪ್ರಿಯತೆಯಲ್ಲಿ ಈಗಲೂ ರಾಜ್ಯದ ಉಳಿದೆಲ್ಲ ನಾಯಕರಿಗಿಂತ ಮುಂದಿರುವ ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧಿಸದೇ ರಾಜಕೀಯವಾಗಿ ಸಕ್ರಿಯರಾಗಿರೋದು ಅವರ ಪಕ್ಷಕ್ಕೆ ವರ ಅಥವಾ ಶಾಪ ಏನಾದರೂ ಆಗಬಹುದು.

ನಿಜಕ್ಕೂ ಅದು ವರವಾಗುತ್ತದೋ ಅಥವಾ ಶಾಪವಾಗುತ್ತದೋ ಎಂಬುದು ಖುದ್ದು ಸಿದ್ದರಾಮಯ್ಯ ಮತ್ತು ಅವರ ಪಕ್ಷದ ನಾಯಕತ್ವದ ಮೇಲೆಯೇ ಅವಲಂಬಿತವಾಗಿರುತ್ತದೆ. ಪಕ್ಷದ ದೃಷ್ಟಿಯಿಂದ ಇದು ಬಹಳ ಸೂಕ್ಷ್ಮವಾದ ಹಗ್ಗದ ಮೇಲಿನ ನಡಿಗೆಯಂಥ ವಿಚಾರ. ಸಿಎಂ ಡಿ.ಕೆ.ಶಿವಕುಮಾರ್ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದ್ದಾರೆ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಹೇಗೆ ಬಳಸಿಕೊಳ್ಳಲಿದೆ ಮತ್ತು ಸಿದ್ದರಾಮಯ್ಯ ಅವರು ಅದಕ್ಕೆಲ್ಲ ಹೇಗೆ ಸ್ಪಂದಿಸಲಿದ್ದಾರೆ ಎಂಬುದರ ಮೇಲೆ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಭವಿಷ್ಯ ನಿರ್ಧಾರವಾಗಲಿದೆ. ಇದೇ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತರೂ ಆಗಿರುವ ಮಾಜಿ ಸಭಾಧ್ಯಕ್ಷ ರಮೇಶಕುಮಾರ್ ಅವರು, ‘ಸಿದ್ದರಾಮಯ್ಯ ಅವರು ಕಟ್ಟಿದ ಮನೆಗೆ ಎಂಟ್ರಿ ಹೊಡೆದು ಎಂಟು ವರ್ಷ ಮುಖ್ಯಮಂತ್ರಿಯಾದವರು, ಈಗ ಸುಮ್ಮನೇ ಕೂರದೇ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನೆಗಾಗಿ ಸಿಎಂ ಡಿ.ಕೆ.ಶಿವಕುಮಾರ್ ಜೊತೆಗೆ ಕೈ ಜೋಡಿಸಬೇಕು’ ಎಂಬ ಕಿವಿಮಾತು ಹೇಳಿರಬಹುದು.

ಧವನ್ ರಾಕೇಶ್ ಎಂಟ್ರಿಗೆ ಸಿದ್ಧತೆ:

ಸಿಎಂ ಖುರ್ಚಿಯಿಂದ ಕೆಳಗಿಳಿದು ಡಿ.ಕೆ.ಶಿವಕುಮಾರ್ ಅವರಿಗೆ ಪಟ್ಟ ಕಟ್ಟಿದ ಮೇಲೆ ಸಿದ್ದರಾಮಯ್ಯ ಅವರು ಮಿತಭಾಷಿ ಆಗಿದ್ದಾರೆ. ಈ ತಿಂಗಳು ಆರಂಭದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆಯ ನಂತರವಂತೂ ‘ಮಾತು ಬೆಳ್ಳಿ, ಮೌನ ಬಂಗಾರ’ವೆಂಬಂತೆ ನಡೆದುಕೊಳ್ಳುತ್ತಿದ್ದಾರೆ. ಭವಿಷ್ಯದ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ಅವರ ಮನಸಿನಲ್ಲೀಗ ನೂರಾರು ವಿಷಯಗಳ ತಾಕಲಾಟ ನಡೆಯುತ್ತಿರಬಹುದು. ರಾಜ್ಯ ರಾಜಕೀಯದ ಕೇಂದ್ರ ಸ್ಥಾನವನ್ನು ತೆರುವುಗೊಳಿಸಿದ ಮೇಲೆ ಮೈಸೂರು ಜಿಲ್ಲೆಯ ಬಹುಕಾಲದ ‘ಆಪ್ತ ಮಿತ್ರ’ರ ಮುನಿಸನ್ನೂ ಲೆಕ್ಕಿಸದೇ ಪುತ್ರ ಡಾ.ಯತೀಂದ್ರರನ್ನು ಮಂತ್ರಿ ಮಾಡಿ ಜಿಲ್ಲೆಯ ಉಸ್ತುವಾರಿಯನ್ನು ಅವರ ಕೈಗೇ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಪುತ್ರ ವ್ಯಾಮೋಹಕ್ಕಾಗಿ ತಮ್ಮ ಹಿರಿಯ ಒಡನಾಡಿಗಳನ್ನು ಸಿದ್ದರಾಮಯ್ಯ ಕಡೆಗಣಿಸಿದರು ಎಂಬ ಆಕ್ಷೇಪದ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.

ಇದರ ಪರಿಣಾಮವೆಂಬಂತೆ ಮೈಸೂರು ಜಿಲ್ಲೆಯ ರಾಜಕಾರಣದಲ್ಲಿ ‘ಎಣ್ಣೆ-ಸೀಗೆಕಾಯಿ’ಯಂತಿದ್ದ ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಮತ್ತು ತನ್ವೀರ್ ಸೇಠ್ ಅವರು ‘ಶತ್ರುವಿನ ಶತ್ರು ಮಿತ್ರ’ ಎಂಬ ಚಾಣಕ್ಯನ ನೀತಿಯಂತೆ ತಮ್ಮ ನಡುವಿನ ರಾಜಕೀಯ ವೈಷಮ್ಯ ಮರೆತು ಸಿದ್ದರಾಮಯ್ಯ ವಿರುದ್ಧ ರಾಜಕೀಯವಾಗಿ ತೊಡೆ ತಟ್ಟಲು ಸಿದ್ಧರಾಗಿದ್ದಾರೆ. ದಶಕಗಳ ಕಾಲ ಸಿದ್ದರಾಮಯ್ಯ ಅವರ ಸಾಮಿಪ್ಯದಿಂದಾಗಿ ರಾಜಕೀಯ ಸ್ಥಾನಮಾನ ಪಡೆದ ಡಾ.ಮಹದೇವಪ್ಪ ಮತ್ತು ಕೆ.ವೆಂಕಟೇಶ್ ಅವರು ಒಂದು ಬಾರಿ ಮಂತ್ರಿ ಪದವಿ ಕೈತಪ್ಪಿದ ಮಾತ್ರಕ್ಕೆ ತಮ್ಮ ನಿಜವಾದ ಬಣ್ಣ ತೋರುತ್ತಿದ್ದಾರೆಂಬ ಟೀಕೆಗಳು ಇರುವುದೂ ನಿಜವೇ. ಅದೇನೇ ಇರಲಿ, ಡಾ.ಯತೀಂದ್ರರನ್ನು ಮಂತ್ರಿ ಮಾಡಿದ ಸಮಾಧಾನವಿದ್ದರೂ ಈ ಎಲ್ಲ ಬೆಳವಣಿಗೆಗಳು ಸಿದ್ದರಾಮಯ್ಯ ಅವರಿಗೆ ಸ್ವಲ್ಪ ಮಟ್ಟಿಗಿನ ಕಸಿವಿಸಿ ಉಂಟು ಮಾಡಿವೆ.

ಆದರೆ, ಸದ್ಯಕ್ಕೆ ಈ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಮೂಡ್‌ನಲ್ಲಿ ಸಿದ್ದರಾಮಯ್ಯ ಅವರು ಇದ್ದಂತಿಲ್ಲ. ಈಗ ಅವರ ಆಸಕ್ತಿ, ಆದ್ಯತೆ ಏನಿದ್ದರೂ ಮೊಮ್ಮಗನ ಮೇಲೆ ಕೇಂದ್ರಿತವಾದಂತಿದೆ. ರಾಜಕೀಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಹಿರಿಯ ಪುತ್ರ ರಾಕೇಶ್ ಅವರನ್ನು ರಾಜಕೀಯವಾಗಿ ಗಟ್ಟಿಯಾಗಿ ಸ್ಥಾಪನೆ ಮಾಡಬೇಕು ಎಂಬುದು ಸಿದ್ದರಾಮಯ್ಯ ಕನಸಾಗಿತ್ತು. ಆದರೆ, ರಾಕೇಶ್ ಅವರ ಅಕಾಲಿಕ ನಿಧನದಿಂದಾಗಿ ಸಿದ್ದರಾಮಯ್ಯ ಅವರ ಕನಸು ನುಚ್ಚು ನೂರಾಯಿತು. ಈಗ ದಿ.ರಾಕೇಶ್ ಅವರ ಪುತ್ರ, ಮೊಮ್ಮಗ ಧವನ್ ರಾಕೇಶ್‌ನಲ್ಲೇ ತಮ್ಮ ಅಗಲಿದ ಪುತ್ರನನ್ನು ನೋಡುತ್ತಿರುವ ಸಿದ್ದರಾಮಯ್ಯ ಅವರು ಮೊಮ್ಮಗನನ್ನು ರಾಜಕೀಯಕ್ಕೆ ತರಲು ಭೂಮಿಕೆ ಸಿದ್ಧಪಡಿಸುತ್ತಿದ್ದಾರೆ.

ಇನ್ನೂ ತಣ್ಣಗಾಗದ ಅತೃಪ್ತಿ:

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್‌ನಲ್ಲಿ ಹೊತ್ತಿಕೊಂಡಿರುವ ಅಸಮಾಧಾನದ ಕಿಡಿ ಇನ್ನೂ ತಣ್ಣಗಾಗಿಲ್ಲ. ಬೆಂಗಳೂರು, ಮೈಸೂರು, ವಿಜಯಪುರ, ಚಿತ್ರದುರ್ಗ, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸ್ವಪಕ್ಷೀಯರೇ ಪರಸ್ಪರರ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೀಗ ಅಧಿಕಾರ ವಂಚಿತರು ಮತ್ತು ಅಧಿಕಾರ ಅನುಭವಿಸುತ್ತಿರುವವರು ಎಂಬ ಎರಡು ಗುಂಪುಗಳು ಸ್ಪಷ್ಟವಾಗಿ ಸಕ್ರಿಯವಾಗಿವೆ. ಅಧಿಕಾರ ವಂಚಿತರಲ್ಲಿ ಬಹಳಷ್ಟು ಹಿರಿಯರು, ಅರ್ಹರು, ಪ್ರಭಾವಿಗಳಿದ್ದು, ಇಂಥವರನ್ನು ನಿರ್ಲಕ್ಷ್ಯ ಮಾಡುವುದು ಕಾಂಗ್ರೆಸ್‌ಗೆ ದುಬಾರಿ ಆಗಬಹುದು.

ಸಂಪುಟದಲ್ಲಿ ಎಲ್ಲರಿಗೂ ಸ್ಥಾನ ಕೊಡಲು ಸಾಧ್ಯವಿಲ್ಲ ಎಂಬುದೇನೋ ನಿಜ. ಆದರೆ, ಯಾವ ಮಾನದಂಡ, ಅಳತೆಗೋಲು ಬಳಸಿ ಮಂತ್ರಿಗಳನ್ನು ಮಾಡಲಾಗಿದೆ ಎಂಬುದು ನಿಗೂಢವಾಗಿರುವುದು ಮತ್ತು ಸಂಪುಟದಲ್ಲಿ ಸ್ಥಾನ ಸಿಗದ ಅರ್ಹರನ್ನು ಸಮಾಧಾನಪಡಿಸುವ ಕೆಲಸವೂ ಪರಿಣಾಮಕಾರಿಯಾಗಿ ಆಗದಿರುವುದರಿಂದ ಸಂಪುಟದಲ್ಲಿ ಸ್ಥಾನ ವಂಚಿತರ ಅತೃಪ್ತಿ ಈಗಲೂ ‘ಬೂದಿ ಮುಚ್ಚಿದ ಕೆಂಡ’ದಂತೆಯೇ ಇದೆ. ಸಂಪುಟದಲ್ಲಿ ಮಹಿಳೆಗೆ ಮೀಸಲಾಗಿರುವ ಏಕೈಕ ಖಾಲಿ ಸ್ಥಾನ ಯಾರ ಪಾಲಾಗಲಿದೆ ಎಂಬುದು ಹಾಗೂ ಎಂ.ಕೃಷ್ಣಪ್ಪ, ಬಸವರಾಜ್ ಶಿವಣ್ಣವರ್, ಎಚ್.ಕೆ.ಪಾಟೀಲ್‌, ಎನ್.ವೈ.ಗೋಪಾಲಕೃಷ್ಣ ಮತ್ತು ಅಪ್ಪಾಜಿ ನಾಡಗೌಡರಂಥ ಅತೃಪ್ತರನ್ನು ಸಮಾಧಾನಪಡಿಸಲು ಸಂಪುಟಕ್ಕೆ ಸಣ್ಣದೊಂದು ಸರ್ಜರಿ ನಡೆಯಬಹುದು ಎಂಬ ದೂರದಾಸೆಯಿಂದಾಗಿ ಸದ್ಯಕ್ಕೆ ಇನ್ನೂ ಕೆಲವರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಈ ತಿಂಗಳು 27ರವರೆಗೆ ನಡೆಯಲಿರುವ ವಿಧಾನ ಮಂಡಳ ಅಧಿವೇಶನದ ನಂತರ ಈ ಸರ್ಜರಿ ನಡೆಯಬಹುದು ಎಂಬ ನಿರೀಕ್ಷೆ ಅನೇಕ ಶಾಸಕರಿಗೆ ಇದೆ. ಅಧಿವೇಶನದ ನಂತರ ಮುಖ್ಯಮಂತ್ರಿ ಮತ್ತೊಂದು ಸುತ್ತಿನ ‘ದೆಹಲಿ ಯಾತ್ರೆ’ಗೆ ಅಣಿಯಾಗುವುದು ಗ್ಯಾರಂಟಿ. ಆಗಲೂ ಸಹ ಎಲ್ಲ ಸಚಿವಾಕಾಂಕ್ಷಿಗಳಿಗೆ ಅವಕಾಶ ಸಿಗುವುದಿಲ್ಲ. ಆಗ ಮತ್ತೊಂದು ಸುತ್ತಿನ ಅತೃಪ್ತಿ ಭುಗಿಲೇಳಲಿದೆ. ಸಿದ್ದರಾಮಯ್ಯ ಸೇರಿದಂತೆ ಪಕ್ಷದಲ್ಲಿನ ಎಲ್ಲ ಶಕ್ತಿ ಕೇಂದ್ರಗಳು ಒಟ್ಟಾಗಿ ಪ್ರಯತ್ನ ಮಾಡಿದರೆ ಮಾತ್ರ ಅಂಥ ಅತೃಪ್ತಿಯನ್ನು ಶೀಘ್ರ ಶಮನಗೊಳಿಸಲು ಸಾಧ್ಯ. ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ ಎಂಬುದು ಈಗ ‘ಪಾಲಿಟಿಕಲಿ ಕರೆಕ್ಟ್’ ಹೇಳಿಕೆಯಾಗಿ ಮಾತ್ರ ಉಳಿದಿದೆ. ರಾಷ್ಟ್ರೀಯ ಪಕ್ಷಗಳ ಸರ್ಕಾರಗಳಲ್ಲಿ ವಾಸ್ತವವಾಗಿ ಆಯಾ ಪಕ್ಷಗಳ ಹೈಕಮಾಂಡ್‌ಗಳೇ ಎಲ್ಲವನ್ನೂ ತೀರ್ಮಾನಿಸುತ್ತವೆ. ಹಾಗೆ ತೀರ್ಮಾನ ಮಾಡುವ ಮೊದಲು ಶಾಸ್ತ್ರಕ್ಕಾದರೂ ರಾಜ್ಯ ನಾಯಕರ ಅಭಿಪ್ರಾಯ ಕೇಳುತ್ತಾರೆ ಎಂಬುದೇ ಸಮಾಧಾನದ ಸಂಗತಿ.

ಸುಭಾಷ್ ಹೂಗಾರ್
ಹಿರಿಯ ಪತ್ರಕರ್ತ
(ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ)

Share
Written by
Prashanth Kumar N - Editor

ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ. ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Leave a comment

Leave a Reply

Your email address will not be published. Required fields are marked *

Loading News...

More News

Related Articles

ಮಠಾಧೀಶರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೌಹಾರ್ದಯುತ ಸಮಾಲೋಚನೆ: ಸಮುದಾಯಗಳ ಬೇಡಿಕೆಗಳ ಕುರಿತು ಚರ್ಚೆ

ಬೆಂಗಳೂರು: ಕರ್ನಾಟಕದ ವಿವಿಧ ಭಾಗಗಳ ಹಿಂದುಳಿದ ಹಾಗೂ ಶೋಷಿತ ಸಮಾಜಗಳಿಗೆ ಸೇರಿದ ಪ್ರಮುಖ ಮಠಾಧೀಶರು ಇಂದು...

ಸೋನಿಯಾ ಗಾಂಧಿ ಪ್ರೇಮಕತೆ, ರಹಸ್ಯಗಳ ಅನಾವರಣ: ನ.10ಕ್ಕೆ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಪುಸ್ತಕ!

ಸೋನಿಯಾ ಗಾಂಧಿ ಪ್ರೇಮಕತೆ: ಹುಟ್ಟಿದ್ದು ಇಟಲಿ, ಬೆಳೆದಿದ್ದು ಅಲ್ಲೇ, ಓದಿದ್ದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ. ಎಲ್ಲಿಯೋ ಚಿಗುರಿದ...

ಕುಟುಂಬ ಸಮೇತ ಭೋವಿ ಗುರುಪೀಠಕ್ಕೆ ಭೇಟಿ ನೀಡಿದ ನೂತನ ಸಚಿವ ವಿಜಯಾನಂದ ಕಾಶಪ್ಪನವರ

ಬಾಗಲಕೋಟೆ: ಕರ್ನಾಟಕ ಸರ್ಕಾರದ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಇಳಕಲ್ಲಿನ ಜನಪ್ರಿಯ ನಾಯಕ ಶ್ರೀ ವಿಜಯಾನಂದ...

ಅಪ್ಪರ್ ಭದ್ರಾ ಯೋಜನೆ ನವೆಂಬರ್‌ನೊಳಗೆ ಪೂರ್ಣ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು, ಆ.21: ಅಪ್ಪರ್ ಭದ್ರಾ ಯೋಜನೆ ಕಾಮಗಾರಿಯನ್ನು ನವೆಂಬರ್ ಅಥವಾ ಡಿಸೆಂಬರ್ ಮಾಹೆಯೊಳಗೆ ಪೂರ್ಣಗೊಳಿಸಲಾಗುವುದು ಎಂದು...