ಚಿತ್ರದುರ್ಗ (ಆ. 17): ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 2.70 ಲಕ್ಷ ರೂ. ಮೌಲ್ಯದ ಕಬ್ಬಿಣದ ಅದಿರನ್ನು ವಶಪಡಿಸಿಕೊಂಡಿದ್ದಾರೆ.
ಅಧಿಕಾರಿಗಳ ಜಂಟಿ ದಾಳಿ ತಾಲ್ಲೂಕಿನ ಬಿ.ದುರ್ಗ ಹೋಬಳಿಯ ಕಾಳಘಟ್ಟ ಗ್ರಾಮದ ಜಮೀನೊಂದರಲ್ಲಿ ಎಲ್ಲಿಂದಲೋ ತಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಡಂಪ್ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ಮಾಹಿತಿ ಮೇರೆಗೆ ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳ ಜಂಟಿ ತಂಡ ದಿಢೀರ್ ದಾಳಿ ನಡೆಸಿದೆ.
ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಬರೋಬ್ಬರಿ 135 ಟನ್ ಕಬ್ಬಿಣದ ಅದಿರು ಪತ್ತೆಯಾಗಿದೆ. ಜಪ್ತಿ ಮಾಡಲಾದ ಈ ಅದಿರಿನ ಅಂದಾಜು ಮೌಲ್ಯ 2,70,000 ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಅದಿರು ಸಾಗಾಟಕ್ಕೆ ಬಳಸಲಾಗಿದ್ದ ಒಂದು ಲಾರಿಯನ್ನೂ ವಶಕ್ಕೆ ಪಡೆಯಲಾಗಿದೆ.
ಚಿಕ್ಕಜಾಜೂರು ಠಾಣೆಯಲ್ಲಿ ಎಫ್‌ಐಆರ್ ಘಟನೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಮಲ್ಲೇಶ್ ಎಸ್. ಅವರು ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. BMMACT ಕಾಯ್ದೆ ಸೆಕ್ಷನ್ 4(1), 4(1A), 21 ಹಾಗೂ BNS 2023 ರ ಸೆಕ್ಷನ್ 303(2) ಅಡಿಯಲ್ಲಿ ಕ್ರೈಂ ನಂಬರ್ (180/2026) ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಆರೋಪಿಗಳ ಬಂಧನಕ್ಕೆ ಎಸ್ಪಿ ಸೂಚನೆ ಅಕ್ರಮ ಅದಿರು ದಂಧೆ ಕುರಿತು ಪ್ರತಿಕ್ರಿಯಿಸಿರುವ ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ (ಎಸ್ಪಿ) ರಂಜಿತ್‌ಕುಮಾರ್ ಬಂಡಾರು, ಕೃತ್ಯದಲ್ಲಿ ಭಾಗಿಯಾದವರನ್ನು ಶೀಘ್ರವೇ ಪತ್ತೆ ಹಚ್ಚಲು ವಿಶೇಷ ತಂಡ ರಚಿಸುವಂತೆ ಸೂಚಿಸಿದ್ದಾರೆ. ಚಿತ್ರದುರ್ಗ ಉಪವಿಭಾಗದ ಡಿವೈಎಸ್‌ಪಿ ಅರುಣ್ ನಾಗೇಗೌಡ, ಹೊಳಲ್ಕೆರೆ ಸಿಪಿಐ ಶ್ರೀಶೈಲ ಚೌಗಲೆ ಹಾಗೂ ತನಿಖಾಧಿಕಾರಿಯಾಗಿರುವ ಚಿಕ್ಕಜಾಜೂರು ಪಿಎಸ್‌ಐ ಗಾದೀಲಿಂಗ ಹೆಚ್. ಅವರಿಗೆ ಆರೋಪಿಗಳನ್ನು ಬಂಧಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ವರದಿ: ಚಿತ್ರದುರ್ಗ ಲೈವ್ (ChitradurgaLive.com)
Leave a comment