ಸೋನಿಯಾ ಗಾಂಧಿ ಪ್ರೇಮಕತೆ: ಹುಟ್ಟಿದ್ದು ಇಟಲಿ, ಬೆಳೆದಿದ್ದು ಅಲ್ಲೇ, ಓದಿದ್ದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ. ಎಲ್ಲಿಯೋ ಚಿಗುರಿದ ಪ್ರೀತಿಯನ್ನು ಕಳೆದುಕೊಳ್ಳಲಾರದೇ ಭಾರತಕ್ಕೆ ಬಂದು ದಶಕಗಳ ಕಾಲ ಗೃಹಿಣಿಯಾಗಿದ್ದ ಸೋನಿಯಾ ಗಾಂಧಿ ಅವರ ಬದುಕಿನ ಕುರಿತು ಹೊರಪ್ರಪಂಚಕ್ಕೆ ತಿಳಿದಿರುವುದು ಬಹಳ ಕಡಿಮೆ.
ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮಾಂಕುರ, ಮದುವೆ, ಇಂದಿರಾ ಗಾಂಧಿಯವರ ಮುದ್ದಿನ ಸೊಸೆಯಾಗಿದ್ದು… ಮನೆ ಅಂಗಳದಲ್ಲಿ ಗುಂಡೇಟು ತಿಂದು ರಕ್ತಸಿಕ್ತವಾಗಿ ಬಿದ್ದಿದ್ದ ಅತ್ತೆ ಇಂದಿರಾ ಗಾಂಧಿ ಅವರನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಬದುಕಿಸಲು ಪರದಾಡಿದ ರೀತಿ ಕರುಣಾಜನಕ. “ರಾತ್ರಿ ಮನೆಗೆ ಬರುತ್ತೇನೆ, ಜೊತೆಗೆ ಕೂತು ಎಲ್ಲರೂ ಊಟ ಮಾಡೋಣ” ಎಂದು ಹೇಳಿ ಹೋಗಿದ್ದ ಪತಿ ರಾಜೀವ್ ಗಾಂಧಿ ಪೆರಂಬೂರಿನಲ್ಲಿ ಎಲ್.ಟಿ.ಟಿ.ಇ (LTTE) ದಾಳಿಯಲ್ಲಿ ಛಿದ್ರಗೊಂಡು, ಆ ದೇಹದ ಚೂರುಗಳು ದೆಹಲಿಗೆ ತಲುಪಿದಾಗ ಉಂಟಾದ ಆಘಾತ…
ರಾಜಕೀಯ ಪ್ರವೇಶ ಮತ್ತು ಪ್ರಧಾನಿ ಹುದ್ದೆ ತ್ಯಾಗ
ಒಂದಲ್ಲ ಎರಡಲ್ಲ, ಅನೇಕ ಸಂಕಷ್ಟಗಳನ್ನು ಅನುಭವಿಸಿ ದಶಕ ಕಾಲ ‘ರಾಜಕಾರಣವೇ ಬೇಡ’ವೆಂದು ಮನೆ ಸೇರಿ ಮುದ್ದಿನ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಪಾಲಿಗೆ ಪ್ರೀತಿಯ ಅಮ್ಮನಾಗಿ ಬದುಕು ಸವೆಸಿದ್ದರು. ಆದರೆ, ಪಕ್ಷ ಹಾಗೂ ದೇಶದ ಹಿತಕ್ಕಾಗಿ ರಾಜಕೀಯ ಪ್ರವೇಶಿಸಬೇಕೆಂಬ ಕಾಂಗ್ರೆಸ್ ಪಕ್ಷದ ದಿಗ್ಗಜರ ಒತ್ತಡಕ್ಕೆ ಮಣಿದು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶ ಕಂಡ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಮಧ್ಯೆ ಪಕ್ಷ ಬಹುಮತ ಗಳಿಸಿ, ಎಲ್ಲ ಸಂಸದರು ಪ್ರಧಾನಿ ಹುದ್ದೆಗೆ ಸೋನಿಯಾ ಗಾಂಧಿ ಅವರನ್ನು ಸೂಚಿಸಿದ್ದರು. ಎಲ್ಲ ಅಧಿಕಾರವನ್ನು ಸೋನಿಯಾ ಗಾಂಧಿ ಕೈಗೊಳ್ಳಬಹುದೆಂಬ ಪತ್ರ ರವಾನೆಯಾಗಿತ್ತು. ಇನ್ನೇನೂ ಪ್ರಧಾನಮಂತ್ರಿಯಾಗಿ ಸೋನಿಯಾ ಗಾಂಧಿ ಅವರಿಗೆ ಪ್ರಮಾಣ ವಚನ ಬೋಧಿಸಲು ಅಂದಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಸಿದ್ಧತೆ ಮಾಡಿಕೊಂಡಿದ್ದರು.
ಮತ್ತೊಂದೆಡೆ, ಸೋನಿಯಾ ಗಾಂಧಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೆ ತಲೆಬೋಳಿಸಿಕೊಳ್ಳುತ್ತೇನೆಂಬ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಹೇಳಿಕೆ.
ಒಂದೆಡೆ ಇಟಲಿ ಮೂಲದ ಮಹಿಳೆ ಪ್ರಧಾನಿಯಾಗುವುದು ಸರಿಯಲ್ಲವೆಂಬ ಬಿಜೆಪಿಯ ಕೂಗು…!
ಮನದಲ್ಲಿ ತನ್ನದೇ ನಿರ್ಧಾರವನ್ನು ಗಟ್ಟಿಮಾಡಿಕೊಂಡು ವಿಶ್ವದ ಖ್ಯಾತ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಜೊತೆಗೂಡಿ ರಾಷ್ಟ್ರಪತಿ ಭವನಕ್ಕೆ ಸೋನಿಯಾ ಹೆಜ್ಜೆ ಹಾಕುತ್ತಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಇನ್ನೇನೂ ನಮ್ಮ ನಾಯಕಿ ಪ್ರಧಾನಿ ಹುದ್ದೆ ಅಲಂಕರಿಸಿದರೆಂಬ ಸಂಭ್ರಮ ಮನೆ ಮಾಡಿತ್ತು, ಬಿಜೆಪಿಯಲ್ಲಿ ಆಕ್ರೋಶವಿತ್ತು.
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವಂತೆ ಲಿಖಿತವಾಗಿ ಪತ್ರ ಕಳುಹಿಸಲು ಸಿದ್ಧತೆ ನಡೆಸಿಕೊಂಡಿದ್ದ ರಾಷ್ಟ್ರಪತಿ ಭವನ. ಆದರೆ ಇವೆಲ್ಲವೂ ತಲೆಕೆಳಗಾಗಿ, ಇಡೀ ದೇಶವಷ್ಟೇ ಅಲ್ಲ, ಜಗತ್ತೇ ನಿಬ್ಬೆರಗಾಗುವ ರೀತಿ ಪ್ರಧಾನಿ ಹುದ್ದೆಗೆ ಮನಮೋಹನ್ ಸಿಂಗ್ ಅವರ ಹೆಸರನ್ನು ಸೂಚಿಸುವ ಮೂಲಕ ತ್ಯಾಗದ ನಡೆ ಇಟ್ಟು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.
ರಹಸ್ಯಗಳನ್ನೊಳಗೊಂಡ ಕುತೂಹಲದ ಪುಟಗಳು
ಇಂತಹ ಬೆಳವಣಿಗೆಗಳಾಗಲು ಕಾರಣವೇನು? ರಾಜಕೀಯದಲ್ಲಿ ಉನ್ನತ ಹುದ್ದೆ ನಿರಾಕರಿಸಿದ್ದೇಕೆ? ತನ್ನ ಪತಿಯನ್ನೇ ಕೊಂದ ಎಲ್.ಟಿ.ಟಿ.ಇ.ಯ ನಳಿನಿ ಹಾಗೂ ಇತರರನ್ನು ಕ್ಷಮಿಸಿದ ಗುಣ, ಮಕ್ಕಳ ರಾಜಕೀಯ ಪ್ರವೇಶಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದು, ಅಂತಿಮವಾಗಿ ರಾಹುಲ್ ಗಾಂಧಿ ರಾಜಕೀಯ ಪ್ರವೇಶ, ಅನೇಕ ವರ್ಷಗಳ ಬಳಿಕ ಪ್ರಿಯಾಂಕಾ ಗಾಂಧಿ ಸಂಸದೆಯಾಗಿದ್ದು… ಹೀಗೆ ಅನೇಕ ಬೆಳವಣಿಗೆಗಳ ಕುರಿತ ಸ್ಪಷ್ಟ ಚಿತ್ರಣ ಈ ಪುಸ್ತಕದಲ್ಲಿ ದೊರೆಯಲಿದೆ.
ತಮ್ಮ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಕಹಿ-ಸಿಹಿ ಘಟನೆಗಳು, ರಾಜಕೀಯಕ್ಕೆ ಬರಲು ಮುಖ್ಯ ಕಾರಣ, ಸೋನಿಯಾ ಗಾಂಧಿ ಏಕಾಂಗಿಯಾಗಿ ಅನುಭವಿಸಿದ ತಲ್ಲಣಗಳು, ನಿರ್ಧಾರಗಳು, ನೋವುಗಳು ಹಾಗೂ ಮಾನವೀಯ ನಡೆ ಕೈಗೊಂಡು ನೆಮ್ಮದಿ ಕಂಡುಕೊಂಡಿದ್ದು—ಹೀಗೆ ಅನೇಕ ವಿಷಯಗಳನ್ನು ಈ ಪುಸ್ತಕ ಭಾರತೀಯರ ಮುಂದಿಡಲಿದೆ. ಈ ಕೃತಿ ಹೊರಬರುತ್ತಿರುವ ವಿಷಯದತ್ತ ಭಾರತವಷ್ಟೇ ಅಲ್ಲದೆ ವಿವಿಧ ದೇಶದ ರಾಜಕೀಯ ನಾಯಕರು ಕುತೂಹಲದಿಂದ ಕಾಯುತ್ತಿದ್ದಾರೆ.
“ಆತ್ಮಚರಿತ್ರೆ ಬರೆಯುವುದು ಬಹಳ ಸವಾಲಿನ ಕೆಲಸ. ನನ್ನ ಮನಸ್ಸನ್ನು ಮುಕ್ತವಾಗಿ ಜನರ ಬಳಿ ತೆರೆದಿಡುವುದು ಅಷ್ಟು ಸುಲಭವಾದ ಕೆಲಸವಲ್ಲ. ಆದರೂ ನನ್ನ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಪುಸ್ತಕ ದಾರಿಮಾಡಿಕೊಟ್ಟಿದೆ” – ಸೋನಿಯಾ ಗಾಂಧಿ
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಗಳಂತಹ ಭೀಕರ ಘಟನೆಗಳು, ರಾಜಕೀಯವೇ ಬೇಡವೆಂದಿದ್ದರೂ ಒತ್ತಡಕ್ಕೆ ಮಣಿದು ಪ್ರವೇಶಿಸಿದ್ದು, 2004ರಲ್ಲಿ ಕೈಯಲ್ಲಿದ್ದ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದ್ದು, ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಜೊತೆಗಿನ ಪ್ರೇಮ—ಹೀಗೆ ಅನೇಕ ಪ್ರಸಂಗಗಳನ್ನು ಪುಸ್ತಕದಲ್ಲಿ ಸೊಗಸಾಗಿ ವರ್ಣಿಸಲಾಗಿದೆ. ಜೊತೆಗೆ, ಇದರಲ್ಲಿನ ಕೆಲ ಘಟನೆಗಳು ಓದುಗರ ಹೃದಯವನ್ನೇ ಅಲುಗಾಡಿಸಲಿವೆ ಎನ್ನಲಾಗುತ್ತಿದೆ. ಒಟ್ಟಾರೆ ನ.11ರಂದು ಸೋನಿಯಾ ಗಾಂಧಿ ಅವರ ಈ ಆತ್ಮಕತೆಯ ಬಿಡುಗಡೆಯತ್ತ ಭಾರತೀಯರ ಚಿತ್ತ ನೆಟ್ಟಿದೆ.
Leave a comment