ಚಿತ್ರದುರ್ಗ: ಗಣಿಬಾಧಿತ ಪ್ರದೇಶಗಳಲ್ಲಿ ಅದಿರು ಸಾಗಾಣಿಕೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಮತ್ತು ಲಾರಿ ಮಾಲೀಕರ ನಡುವಿನ ಹಗ್ಗಜಗ್ಗಾಟ ಇದೀಗ ತಾರಕಕ್ಕೇರಿದೆ. ಸಿರಿಗೆರೆ ಸಮೀಪದ ಭೀಮಸಮುದ್ರ ರಸ್ತೆಯಲ್ಲಿ ಗುರುವಾರ ಸಂಜೆ ಏಕಾಏಕಿ ಲಾರಿಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ಲಾರಿ ಚಾಲಕರು ಮತ್ತು ಮಾಲೀಕರು, ರೈತರ ಪ್ರತಿಭಟನೆಗೆ ಪ್ರತಿಯಾಗಿ ಆಕ್ರೋಶ ಹೊರಹಾಕಿದರು. ಈ ದಿಢೀರ್ ಬೆಳವಣಿಗೆಯಿಂದಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಪರದಾಡುವಂತಾಯಿತು.
ಕಳೆದ 22 ದಿನಗಳಿಂದ ಅದಿರು ಲಾರಿಗಳ ಸಂಚಾರಕ್ಕೆ ತಡೆವೊಡ್ಡಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಅಹೋರಾತ್ರಿ ಧರಣಿ ನಡೆಸುತ್ತಿವೆ. ಇದರಿಂದ ರೋಸಿಹೋದ ಲಾರಿ ಮಾಲೀಕರು, ತಮಗೂ ಇದೇ ರಸ್ತೆಯಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ಪಟ್ಟು ಹಿಡಿದು ವಾಹನಗಳನ್ನು ರಸ್ತೆ ಮಧ್ಯೆಯೇ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮೈಮೇಲೆ ಡೀಸೆಲ್ ಸುರಿದು ಆಕ್ರೋಶ
ನೂರಾರು ಲಾರಿಗಳನ್ನು ರಸ್ತೆಗಿಳಿಸಿದ ಚಾಲಕರು, ಮುಷ್ಕರ ನಿರತ ರೈತರ ವಿರುದ್ಧ ಘೋಷಣೆ ಕೂಗಿದರು. ಕೆಲವರು ತಮ್ಮ ಮೈಮೇಲೆ ಹಾಗೂ ಇತರರ ಮೇಲೂ ಡೀಸೆಲ್ ಸುರಿದುಕೊಂಡು ಸಿಟ್ಟು ಪ್ರದರ್ಶಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆ ಸಂಪೂರ್ಣ ಬಂದ್ ಆದ ಪರಿಣಾಮ ಬಿ.ದುರ್ಗ, ಹೊಳಲ್ಕೆರೆ, ಚನ್ನಗಿರಿ, ಶಿವಮೊಗ್ಗ ಹಾಗೂ ಚಿತ್ರದುರ್ಗದ ಕಡೆಗೆ ಸಂಚರಿಸಬೇಕಿದ್ದ ಖಾಸಗಿ ಬಸ್‌ಗಳು ಮತ್ತು ವಾಹನ ಸವಾರರು ಸುತ್ತು ಬಳಸಿ ಪರ್ಯಾಯ ಮಾರ್ಗಗಳಲ್ಲಿ ಸಾಗಬೇಕಾಯಿತು.
ನಡು ರಸ್ತೆಯಲ್ಲಿ ಶಾಲಾ ಮಕ್ಕಳ ಪರದಾಟ
ಸಂಜೆ ಶಾಲಾ-ಕಾಲೇಜು ಬಿಡುವ ಸಮಯವಾಗಿದ್ದರಿಂದ ಚಿತ್ರದುರ್ಗ, ಭೀಮಸಮುದ್ರ ಹಾಗೂ ಸಿರಿಗೆರೆ ಭಾಗದಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದ ಹತ್ತಾರು ಬಸ್‌ಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡವು. ನೂರಾರು ವಿದ್ಯಾರ್ಥಿಗಳು ಮನೆ ಸೇರಲಾಗದೆ ನಡುರಸ್ತೆಯಲ್ಲೇ ಕಾದು ನಿಲ್ಲುವಂತಾಯಿತು. ಪರಿಸ್ಥಿತಿಯ ಗಂಭೀರತೆ ಅರಿತ ಪೋಷಕರು, ತಾವೇ ಖುದ್ದಾಗಿ ಸ್ಥಳಕ್ಕೆ ಧಾವಿಸಿ ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಮನೆಗೆ ಕರೆದೊಯ್ದರು. ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿ ಜನಸಾಮಾನ್ಯರಿಗೆ ತೊಂದರೆ ನೀಡಿದ ಲಾರಿ ಸಂಘದ ನಡೆಯ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ: ರೈತರ ಆರೋಪ
ಗಣಿಬಾಧಿತ ಹಳ್ಳಿಗಳಾದ ವಿ.ಪಾಳ್ಯ, ನಳ್ಳಿಕಟ್ಟೆ, ಮಳಲಿ, ಮೇಗಳಹಳ್ಳಿ, ಹಿರೇಗುಂಟನೂರು ಸೇರಿದಂತೆ ಹಲವು ಗ್ರಾಮಗಳ ನೂರಾರು ರೈತರು ಭೀಮಸಮುದ್ರದ ಧರಣಿ ಸ್ಥಳದಲ್ಲಿ ಜಮಾಯಿಸಿದ್ದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, “ಸಮಸ್ಯೆ ಬಗೆಹರಿಸುವುದಾಗಿ ಆರು ಬಾರಿ ಭರವಸೆ ನೀಡಿದ್ದ ಜಿಲ್ಲಾಧಿಕಾರಿಗಳು ಒಮ್ಮೆಯೂ ಇತ್ತ ಸುಳಿದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಅದಿರು ಸಾಗಣೆದಾರರು ಮತ್ತು ರೈತರ ನಡುವಿನ ಸಂಘರ್ಷವನ್ನು ಅಧಿಕಾರಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ” ಎಂದು ಕಿಡಿಕಾರಿದರು.
ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿಯ ಸಂಚಾಲಕಿ ಡಿ. ನಾಗಲಕ್ಷ್ಮಿ ಮಾತನಾಡಿ, “ಜಿಲ್ಲಾಡಳಿತ ಸಂಪೂರ್ಣವಾಗಿ ಗಣಿ ಮತ್ತು ಲಾರಿ ಮಾಲೀಕರ ಪರವಾಗಿ ಕೆಲಸ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಹಾಗೂ ಪರಿಸರ ಸಚಿವಾಲಯದ ಆದೇಶಗಳನ್ನು ಗಾಳಿಗೆ ತೂರಲಾಗಿದೆ. ಅಧಿಕಾರಿಗಳು ಲಾರಿಗಳನ್ನು ನಿಯಂತ್ರಿಸುವ ಬದಲು ಅವರೊಂದಿಗೆ ಶಾಮೀಲಾಗಿ ಕಾನೂನುಬಾಹಿರವಾಗಿ ವರ್ತಿಸುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
ಸ್ಥಳದಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ರಾಜಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ್, ಭೀಮಸಮುದ್ರ ಘಟಕದ ಅಧ್ಯಕ್ಷ ಶಂಕರಮೂರ್ತಿ ಪ್ರಸನ್ನ ಕುಮಾರ್, ಬಳ್ಳಾರಿಯ ಮಾಧವ ರೆಡ್ಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
Leave a comment