ಚಿತ್ರದುರ್ಗ (ಚಿತ್ರದುರ್ಗ ಲೈವ್ ): ಕಳೆದ ನಾಲ್ಕೈದು ತಿಂಗಳಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಿ.ಟಿ.ಸ್ಕ್ಯಾನ್ ಯಂತ್ರ ಕೆಟ್ಟು ನಿಂತು ಬಡ ರೋಗಿಗಳು ಪರದಾಡುತ್ತಿದ್ದರೂ, ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿರುವ ವೈದ್ಯಾಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚಿತ್ರದುರ್ಗ ವೈದ್ಯಕೀಯ ಕಾಲೇಜು ಹಾಗೂ ಬೋಧನಾ ಆಸ್ಪತ್ರೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಡೀನ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರ ಕಾರ್ಯವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನೆಪ ಹೇಳಬೇಡಿ, ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬಿಟ್ಟುಬಿಡಿ!
“ಜಿಲ್ಲಾಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂಬ ಕುಂಟು ನೆಪ ಹೇಳಿ ಜಿಲ್ಲಾ ಶಸ್ತ್ರಚಿಕಿತ್ಸಕರು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಕಳೆದ ಫೆಬ್ರವರಿಯಲ್ಲಿಯೇ ಆಸ್ಪತ್ರೆಯ ಹೊಣೆ ಹೊತ್ತಿದ್ದರೂ, ವೈದ್ಯಕೀಯ ಕಾಲೇಜು ಡೀನ್ ಸಿ.ಟಿ. ಸ್ಕ್ಯಾನ್ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಕೇವಲ ಪತ್ರ ವ್ಯವಹಾರ ಮಾಡಿಕೊಂಡು ಕೂತರೆ ರೋಗಿಗಳಿಗೆ ಉತ್ತರ ಕೊಡುವವರು ಯಾರು? ಇಬ್ಬರಿಗೂ ಸಮನ್ವಯದಿಂದ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬಿಟ್ಟುಬಿಡಿ,” ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಾರ್ವಜನಿಕರು ಸಿ.ಟಿ.ಸ್ಕ್ಯಾನ್ಗಾಗಿ ಪರದಾಡುತ್ತಿದ್ದರೆ, ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಟೀಕೆ ಎದುರಿಸುವಂತಾಗಿದೆ ಎಂದು ಸಚಿವರು ಅಸಮಾಧಾನ ಹೊರಹಾಕಿದರು.
ನಾಳೆಯಿಂದಲೇ ಸಿ.ಟಿ.ಸ್ಕ್ಯಾನ್ ಸೇವೆ ಲಭ್ಯ
ಸಚಿವರ ತರಾಟೆ ಬೆನ್ನಲ್ಲೇ ಉತ್ತರಿಸಿದ ವೈದ್ಯಕೀಯ ಕಾಲೇಜು ಡೀನ್ ಡಾ.ಯುವರಾಜ್, “ಸಿ.ಟಿ.ಸ್ಕ್ಯಾನ್ ಸೇವೆ ನೀಡಲು ಅಟಾಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ (AERB) ಅನುಮತಿ ಕಡ್ಡಾಯವಾಗಿತ್ತು. ಈ ಹಿಂದೆ ಯಂತ್ರ ಅಳವಡಿಸುವಾಗ ಅನುಮತಿ ಪಡೆದಿರಲಿಲ್ಲ. ಇದೀಗ ಅನುಮತಿ ದೊರೆತಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ನಾಳೆಯಿಂದಲೇ (ಬುಧವಾರ) ಸಾರ್ವಜನಿಕರಿಗೆ ಸೇವೆ ಲಭ್ಯವಾಗಲಿದೆ,” ಎಂದು ಸಭೆಗೆ ಭರವಸೆ ನೀಡಿದರು.
ಬ್ಲೂ ಸ್ಟಾರ್ ಕಂಪನಿಯ ಸಿ.ಟಿ.ಸ್ಕ್ಯಾನ್ ಟ್ಯೂಬ್ ಹಾಳಾಗಿದ್ದು, ಇದರ ದುರಸ್ತಿಗೆ ಬರೋಬ್ಬರಿ 57 ಲಕ್ಷ ರೂ. ವೆಚ್ಚವಾಗಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾಹಿತಿ ನೀಡಿದರು.
ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿದರೆ ಕಠಿಣ ಕ್ರಮ
ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಸಂಖ್ಯೆ ಹೆಚ್ಚಿರುವ ನಮ್ಮ ಜಿಲ್ಲೆಯಲ್ಲಿ ಬಡವರು ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಉಪಕರಣಗಳಿದ್ದರೂ ಸೂಕ್ತ ಚಿಕಿತ್ಸೆ ನೀಡದೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಿರುವ ಹಾಗೂ ಹೊರಗಡೆ ಔಷಧಿ ತರಲು ಚೀಟಿ ಬರೆದುಕೊಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ವ್ಯವಸ್ಥೆ ಕೂಡಲೇ ಬದಲಾಗಬೇಕು ಎಂದು ಸಚಿವರು ಖಡಕ್ ನಿರ್ದೇಶನ ನೀಡಿದರು.
ಸಚಿವರ ಪ್ರಮುಖ ಸೂಚನೆಗಳು:
-
ಲ್ಯಾಪ್ರೋಸ್ಕೋಪಿ, ಎಂಡೋಸ್ಕೋಪಿಯಂತಹ ಚಿಕಿತ್ಸೆಗಳನ್ನು ತಕ್ಷಣವೇ ಜಿಲ್ಲಾಸ್ಪತ್ರೆಯಲ್ಲಿ ಪ್ರಾರಂಭಿಸಬೇಕು.
-
ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲಾ ಚಿಕಿತ್ಸೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ನಾಮಫಲಕದಲ್ಲಿ ಅಳವಡಿಸಬೇಕು.
-
ಹೊರಗಡೆ ಆಸ್ಪತ್ರೆಗಳಿಗೆ ಶಿಫಾರಸು ಮಾಡುವ ಪ್ರಕರಣಗಳ ಆಡಿಟ್ ನಡೆಸಬೇಕು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ರಮ್ಯಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಜಿ.ಪಂ. ಸಿಪಿಒ ಗಾಯತ್ರಿ, ನಗರಸಭೆ ಆಯುಕ್ತೆ ಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.