Home ಚಿತ್ರದುರ್ಗ ನಿಜ ಹೋರಾಟಗಾರರನ್ನು ಮರೆತ ಕೋಟೆನಾಡು; ಜಯಣ್ಣ-ಒಡೆಯರ್‌ಗೆ ಭದ್ರೆ ನೀರು ಸಮರ್ಪಣೆ
ಚಿತ್ರದುರ್ಗ

ನಿಜ ಹೋರಾಟಗಾರರನ್ನು ಮರೆತ ಕೋಟೆನಾಡು; ಜಯಣ್ಣ-ಒಡೆಯರ್‌ಗೆ ಭದ್ರೆ ನೀರು ಸಮರ್ಪಣೆ

Share
ಚಿತ್ರದುರ್ಗದಲ್ಲಿ ಜಯಣ್ಣ ಒಡೆಯರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುತ್ತಿರುವ ಗಣ್ಯರು
Share

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ನಿಸ್ವಾರ್ಥ ಹೋರಾಟ ನಡೆಸಿದ ನೈಜ ವ್ಯಕ್ತಿಗಳನ್ನು ಮರೆತರೇ ನಾವ್ಯಾರೂ ಕ್ಷಮೆಗೆ ಅರ್ಹರಲ್ಲ ಎಂದು ಚಿಂತಕ ಜೆ. ಯಾದವರೆಡ್ಡಿ ಕಳವಳ ವ್ಯಕ್ತಪಡಿಸಿದರು.

ಜಯಣ್ಣ ಒಡೆಯರ್ ಹೋರಾಟ ವೇದಿಕೆ ವತಿಯಿಂದ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಭದ್ರಾ ನೀರು ಸಮರ್ಪಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ಹೋರಾಟ ಇರಲಿ ಜಯಣ್ಣ ಹಾಗೂ ಒಡೆಯರ್ ಇಬ್ಬರೂ ಪಾಲ್ಗೊಂಡು ಶಕ್ತಿ ತುಂಬುತ್ತಿದ್ದರು. ಆದರೆ, ಅವರ ಬದುಕು ನಿಕೃಷ್ಟವಾಗಿತ್ತು. ಈಗಲೂ ಅವರ ಮಕ್ಕಳು ಜೀವನ ನಿರ್ವಹಣೆಗಾಗಿ ಪರದಾಡುತ್ತಿದ್ದಾರೆ. ಈ ಇಬ್ಬರ ಸಾವು ಸಹಜವಲ್ಲ, ಅದು ವ್ಯವಸ್ಥೆಯ ಲೋಪದಿಂದ ಆಗಿರುವುದು. ಇಡೀ ಜೀವನವನ್ನೇ ಸಮಾಜಕ್ಕೆ ಅರ್ಪಿಸಿದ ಅವರು ಅನಾರೋಗ್ಯಕ್ಕೆ ಒಳಗಾದ ವೇಳೆ ಸಮಾಜ ಅವರ ಚಿಕಿತ್ಸೆಗೆ ಸ್ಪಂದಿಸಬೇಕಿತ್ತು. ಆ ಕೆಲಸ ಆಗಲಿಲ್ಲ. ಪರಿಣಾಮ ಇಬ್ಬರು ಈಗ ನಮ್ಮೊಂದಿಗಿಲ್ಲ ಎಂದು ವಿಷಾದಿಸಿದರು.

ಜಯಣ್ಣನ ಉಸಿರಲ್ಲೇ ಒಡೆಯರ್ ಇದ್ದರು. ಆದರೆ, ಒಡೆಯರ್ ಅವರ ಹೋರಾಟವನ್ನು ಸಮಾಜದಿಂದಲೇ ಮರೆಸುವ ಕೆಲಸ ಆಗುತ್ತಿದೆ. ಇದಕ್ಕೆ ನಾವ್ಯಾರೂ ಅವಕಾಶ ನೀಡಬಾರದು ಎಂದು ತಿಳಿಸಿದರು.

ಕನ್ನಡಪರ ಹೋರಾಟಗಾರ ಕೆ.ಟಿ. ಶಿವಕುಮಾರ್ ಮಾತನಾಡಿ, ಭದ್ರಾ ಯೋಜನೆಗಾಗಿ ಹೋರಾಟ ನಡೆಸಿದವರಲ್ಲಿ ಜಯಣ್ಣ ಹಾಗೂ ಒಡೆಯರ್ ಇಬ್ಬರ ಹೆಸರು ಸ್ಮರಣೀಯ. ಆದರೆ, ಭದ್ರಾ ನೀರು ಜಿಲ್ಲೆ ಪ್ರವೇಶಿಸುತ್ತಿದ್ದಂತೆ ಹೋರಾಟ ಮಾಡಿದ್ದು ನಾನೆಂದು ಅನೇಕರು ಹುಟ್ಟಿಕೊಂಡಿದ್ದಾರೆ. ಇಂತಹವರ ಅಬ್ಬರದಲ್ಲಿ ನೈಜ ಚಳವಳಿಗಾರರು ಕಣ್ಮರೆಯಾಗುತ್ತಿರುವುದು ನೋವಿನ ವಿಷಯ. ಆದ್ದರಿಂದ ಜಯಣ್ಣ ಒಡೆಯರ್ ಅವರ ಸಮಾಧಿ ಹಾಗೂ ಒನಕೆ ಓಬವ್ವ ವೃತ್ತದಲ್ಲಿ ಇಬ್ಬರ ಭಾವಚಿತ್ರಕ್ಕೆ ಭದ್ರಾ ನೀರು ಸಮರ್ಪಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರುವ ಕೆಲಸ ಮಾಡಲಾಗುವುದು. ಶೀಘ್ರದಲ್ಲಿ ದಿನಾಂಕ ಗೊತ್ತುಪಡಿಸಲಾಗುವುದು ಎಂದು ತಿಳಿಸಿದರು.

ಎರಡು ದೇಹ, ಆತ್ಮ ಒಂದೇ ಆಗಿದ್ದ ಈರ್ವರು, ನಾಲ್ಕೈದು ಮಂದಿ ಹೋರಾಟದಲ್ಲಿ ಪಾಲ್ಗೊಂಡು ಶಕ್ತಿ ತುಂಬುತ್ತಿದ್ದರು. ಇವರ ನಿಸ್ವಾರ್ಥದ ಫಲವಾಗಿ ಜಿಲ್ಲೆಗೆ ಭದ್ರೆ, ರೈಲು ಹಾಗೂ ಮೆಡಿಕಲ್ ಕಾಲೇಜು ಬಂದಿದೆ ಎಂದರು.

ಟಿಪ್ಪುಸುಲ್ತಾನ್ ವೇದಿಕೆ ರಾಜ್ಯಾಧ್ಯಕ್ಷ ಖಾಸಿಂ ಆಲಿ ಮಾತನಾಡಿ, ಇವರಿಬ್ಬರ ಬದುಕು ಅತ್ಯಂತ ನಿಕೃಷ್ಟವಾಗಿತ್ತು. ಈಗಲಾದ್ರೂ ಅವರ ಆತ್ಮಕ್ಕೆ ಶಾಂತಿ ಸಿಗುವ ಕೆಲಸ ನಾವೆಲ್ಲರೂ ಮಾಡಬೇಕು ಎಂದರು. ಲೇಖಕ ಹೆಚ್. ಆನಂದಕುಮಾರ್ ಮಾತನಾಡಿ, ನಾಡು ಮರೆತ ಕಾರಣಕ್ಕೆ ಜಯಣ್ಣ, ಒಡೆಯರ್ ಆತ್ಮ ನೊಂದುಕೊಂಡಿರಬಹುದು. ಭದ್ರೆ ನೀರು ಸಮರ್ಪಿಸುವ ಮೂಲಕ ಅವರನ್ನು ಶಾಂತಗೊಳಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎಂದರು.

ಮುಖಂಡ ಆಂಜನೇಯ ಬಾಲು ಮಾತನಾಡಿ, ಅವರಿಬ್ಬರೂ ನಮ್ಮೆಲ್ಲರ ಭವಿಷ್ಯದ ಆಸ್ತಿಯಾಗಿದ್ದರು. ಭದ್ರೆ ನೀರು ಹರಿದಾಕ್ಷಣವೇ ಅವರ ಭಾವಚಿತ್ರ ಅಥವಾ ಸಮಾಧಿಗೆ ನೀರು ಅರ್ಪಿಸುವ ಕೆಲಸ ಆಗಬೇಕಿತ್ತು. ಈಗಲಾದರೂ ಆ ಕಾರ್ಯ ನೆರವೇರಲಿ ಎಂದು ಹೇಳಿದರು.

ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ಕೆರೆ ತುಂಬಿಸುವುದರಿಂದ ಕೊಳವೆಬಾವಿಗಳು ಮರುಜೀವ ಪಡೆದುಕೊಳ್ಳುತ್ತವೆ ಎಂಬುದು ಸುಳ್ಳು. ಆದ್ದರಿಂದ ಹನಿನೀರಾವರಿ ಯೋಜನೆ ಅಳವಡಿಸಬೇಕು. ಪ್ರತಿ ರೈತನ ಭೂಮಿ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡಬೇಕು. ಈ ನಿಟ್ಟಿನಲ್ಲಿ ಜಯಣ್ಣ ಒಡೆಯರ್ ಅವರ ಹೋರಾಟದ ರಥವನ್ನು ನಾವೆಲ್ಲರೂ ಮುಂದುವರಿಸಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮುಖಂಡರಾದ ಎಂ.ಜೆ. ಪ್ರಸನ್ನ ಜಯಣ್ಣ, ಬಿ.ಟಿ. ಮಲ್ಲಯ್ಯ, ಮಂಜುನಾಥ್ ತಿಮ್ಮಪ್ಪನಹಳ್ಳಿ, ಟಿ. ಶಫಿವುಲ್ಲಾ, ಪ್ರಾಣೇಶ್, ಹಂಪಯ್ಯನಮಾಳಿಗೆ ಧನಂಜಯ್ಯ, ಬಸ್ತಿಹಳ್ಳಿ ಸುರೇಶಬಾಬು, ರಾಜಣ್ಣ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕಣ್ಮೇಶ್, ಪುರುಷೋತ್ತಮ್ ತೊರಣಕಟ್ಟೆ, ಬಂಜಗೆರೆ ವೆಂಕಟೇಶ್, ರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭೆಯ ಪ್ರಮುಖ ನಿರ್ಣಯಗಳು ಹಾಗೂ ಮುಖಂಡರ ಆಗ್ರಹ:

  • ಗೇಲಿ ಮಾಡುತ್ತಿದ್ದವರಿಂದಲೇ ಕ್ರೆಡಿಟ್ ವಾರ್: ಭದ್ರಾ ಹೋರಾಟ ನಡೆಸುವ ವೇಳೆ ಗೇಲಿ ಮಾಡುತ್ತಿದ್ದವರೆಲ್ಲರೂ ಈಗ ನಾವೇ ಹೋರಾಟ ಮಾಡಿದ್ದೇಂದು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ನೈಜ ಚಳವಳಿಗಾರರನ್ನು ಸ್ಮರಿಸುವ ಕೆಲಸ ಆಗಬೇಕೆಂದು ದಸಂಸ ನಾಯಕ ಡಿ. ದುರುಗೇಶ್ ಆಗ್ರಹಿಸಿದರು.

  • ಡಿಸೆಂಬರ್‌ನಲ್ಲಿ ಪ್ರಶಸ್ತಿ ಪ್ರದಾನ: ಜಯಣ್ಣ ಒಡೆಯರ್ ಪ್ರಶಸ್ತಿಯನ್ನು ಡಿಸೆಂಬರ್ ತಿಂಗಳಲ್ಲಿ ಪ್ರದಾನ ಮಾಡಲಾಗುವುದು. ಈ ನಿಟ್ಟಿನಲ್ಲಿ ಆಯ್ಕೆ ಸಮಿತಿ ರಚಿಸಿ ಶೀಘ್ರವೇ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಲಾಗುವುದು ಎಂದು ಕೆ.ಟಿ. ಶಿವಕುಮಾರ್ ತಿಳಿಸಿದರು.

  • ಕಾಲುವೆಗೆ ಹೆಸರಿಡಲು ಒತ್ತಾಯ: ಜಯಣ್ಣ ಒಡೆಯರ್ ಹೆಸರನ್ನು ನೂತನ ಕಾಲುವೆಗೆ ಅಥವಾ ಜಿಲ್ಲೆಯ ಪ್ರಮುಖ ವೃತ್ತ, ಬಡಾವಣೆಗೆ ನಾಮಕರಣ ಮಾಡುವ ಮೂಲಕ ಹೋರಾಟಗಾರರನ್ನು ಶಾಶ್ವತವಾಗಿ ಸ್ಮರಿಸುವ ಕೆಲಸ ಆಗಬೇಕೆಂದು ಬಿ. ರಾಜಪ್ಪ ಒತ್ತಾಯಿಸಿದರು.

Author

Share

Loading News...

More News

Related Articles

ಮದಕರಿ ಜಯಂತಿಗೆ ಬಂದ ಕಿಚ್ಚ: ಹೆಲಿಪ್ಯಾಡ್‌ನಿಂದ ವೇದಿಕೆವರೆಗೆ ಬರಿಗಾಲ ನಡಿಗೆ

ಚಿತ್ರದುರ್ಗ: ಮದಕರಿ ನಾಯಕ ಜಯಂತೋತ್ಸವದಲ್ಲಿ ಭಾಗವಹಿಸಲು ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಕಿಚ್ಚ ಸುದೀಪ್ ಅವರ ಭಕ್ತಿ...

ಚಿತ್ರದುರ್ಗದ ಜನರಿಗೆ ಕಿಚ್ಚನ ಭರವಸೆ: ಆಗಾಗ ಬಂದು ಭೇಟಿ ಮಾಡ್ತೇನೆ

ಚಿತ್ರದುರ್ಗ: ಒಂದು ವರ್ಷದ ನಂತರ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿರುವ ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳೊಂದಿಗೆ...

ಮೀಸಲಾತಿ ರದ್ದು, ಸ್ಟಿಂಗ್ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು...

ಚಿತ್ರದುರ್ಗದಲ್ಲಿ ಸಂಸದ ಕಾರಜೋಳ ಗುಡುಗು: ಮೀಸಲಾತಿ ರದ್ದಿಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ

ಚಿತ್ರದುರ್ಗ: ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ರದ್ದಾಗಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ...