ಚಳ್ಳಕೆರೆ (ಚಿತ್ರದುರ್ಗ ಲೈವ್): ಮಧ್ಯ ಕರ್ನಾಟಕದ ಅತ್ಯಂತ ಪ್ರಸಿದ್ಧ ಹಾಗೂ ವಿಶಿಷ್ಟ ಜಾತ್ರೆಗಳಲ್ಲಿ ಒಂದಾದ ಚಳ್ಳಕೆರೆ ತಾಲೂಕಿನ ಗೌರಸಂದ್ರ ಮಾರಮ್ಮ ದೇವಿಯ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಆಧುನಿಕತೆಯ ಕಾಲದಲ್ಲೂ ಅಪ್ಪಟ ಬುಡಕಟ್ಟು ಪೂಜಾ ವಿಧಿವಿಧಾನಗಳೊಂದಿಗೆ ನಡೆಯುವ ಈ ಜಾತ್ರೆಗೆ ಕೇವಲ ಕರ್ನಾಟಕ ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶದಿಂದಲೂ ಭಕ್ತಸಾಗರವೇ ಹರಿದುಬಂದಿತ್ತು.
ಪ್ರತಿ ವರ್ಷ ಭಾದ್ರಪದ ಮಾಸದ ಮೊದಲ ಮಂಗಳವಾರದಂದು ನಡೆಯುವ ಈ ಜಾತ್ರೆಯಲ್ಲಿ ಸರದಿಯ ಸಾಲಿನಲ್ಲಿ ನಿಂತ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ಕುರಿ, ಕೋಳಿ ಮರಿಗಳೇ ಇಲ್ಲಿ ಭಕ್ತರಿಗೆ ಪ್ರಸಾದ!
ಈ ಜಾತ್ರೆಯ ಅತ್ಯಂತ ರೋಚಕ ಘಟ್ಟ ಎಂದರೆ ದೇವಿ ‘ತುಮಲು’ ಪ್ರದೇಶ ಪ್ರವೇಶಿಸುವುದು. ಮಧ್ಯಾಹ್ನ 1:30ರ ಸುಮಾರಿಗೆ ದೇವಿಯನ್ನು ಪೆಟ್ಟಿಗೆಯಲ್ಲಿ ಹೊತ್ತುಕೊಂಡು ಸುಮಾರು ಮೂರ್ನಾಲ್ಕು ಕಿ.ಮೀ. ದೂರದ ತುಮಲು ಪ್ರದೇಶಕ್ಕೆ ತರಲಾಗುತ್ತದೆ.
ದೇವಿ ತುಮಲು ಪ್ರದೇಶ ಪ್ರವೇಶಿಸುತ್ತಿದ್ದಂತೆ, ಅಲ್ಲಿ ನೆರೆದಿರುವ ಲಕ್ಷಾಂತರ ಭಕ್ತರು ತಾವು ಬೆಳೆದ ಈರುಳ್ಳಿ, ಭತ್ತದ ಪೈರು, ಹೂವು ಹಾಗೂ ಹರಕೆ ಹೊತ್ತ ಕುರಿ, ಮೇಕೆ, ಕೋಳಿ ಮರಿಗಳನ್ನು ದೇವಿಯತ್ತ ತೂರಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಗಾಳಿಯಲ್ಲಿ ತೂರಿದ ಈ ಕುರಿ, ಕೋಳಿ ಮರಿಗಳು ಸಿಕ್ಕವರು, ಅದನ್ನು ದೇವಿಯ ‘ಪ್ರಸಾದ’ ಎಂದೇ ಭಾವಿಸಿ ಮನೆಗೆ ಕೊಂಡೊಯ್ಯುತ್ತಾರೆ. ಅವು ಮನೆಯಲ್ಲಿದ್ದರೆ ಆ ವರ್ಷ ಕೃಷಿ, ಪಶುಸಂಪತ್ತು ಸಮೃದ್ಧಿಯಾಗುತ್ತದೆ ಎಂಬುದು ಭಕ್ತರ ಅಚಲ ನಂಬಿಕೆ.
ದೇವಿಗೆ ‘ಮಧ್ಯಾಹ್ನ ಮಾರಿ’ ಎಂಬ ಹೆಸರು ಬಂದಿದ್ದೇಕೆ?
ಮಾರಮ್ಮ ದೇವಿಯು ರೋಗ-ರುಜಿನಗಳನ್ನು ನಿವಾರಿಸುವ ಶಕ್ತಿ ದೇವತೆ ಎಂಬ ಪ್ರತೀತಿ ಇದೆ. ಹೀಗಾಗಿ ಸಾವಿರಾರು ಭಕ್ತರು ಬೇವಿನ ಸೀರೆ, ಬಾಯಿಗೆ ಬೀಗ ಹಾಕಿಕೊಳ್ಳುವುದು, ಜಾನುವಾರುಗಳ ಪ್ರದಕ್ಷಿಣೆ ಸೇರಿದಂತೆ ನಾನಾ ಬಗೆಯ ಹರಕೆಗಳನ್ನು ತೀರಿಸುತ್ತಾರೆ. ವಿಶೇಷವೆಂದರೆ, ದೇವಿಯ ಬಹುತೇಕ ಆಚರಣೆಗಳು ಹಾಗೂ ಜಾತ್ರೆಯ ಪ್ರಮುಖ ಘಟ್ಟಗಳು ಮಧ್ಯಾಹ್ನದ ವೇಳೆಗೆ ಪೂರ್ಣಗೊಳ್ಳುತ್ತವೆ. ಇದೇ ಕಾರಣಕ್ಕಾಗಿ ದೇವಿಯನ್ನು ಭಕ್ತಿಭಾವದಿಂದ ‘ಮಧ್ಯಾಹ್ನ ಮಾರಿ’ ಎಂದು ಕರೆಯಲಾಗುತ್ತದೆ.
ಈ ಊರಲ್ಲಿ ಗಣೇಶ ಹಬ್ಬ ಆಚರಿಸುವುದಿಲ್ಲ, ಕಾರಣವೇನು?
ಗೌರಸಂದ್ರ ಗ್ರಾಮದಲ್ಲಿ ಒಂದು ಅಚ್ಚರಿಯ ಸಂಪ್ರದಾಯವಿದೆ. ಪ್ರತಿ ವರ್ಷ ಗೌರಿ-ಗಣೇಶ ಹಬ್ಬದ ಆಸುಪಾಸಿನಲ್ಲೇ ಈ ಜಾತ್ರೆ ಬರುತ್ತದೆ. ಆದರೆ, ಈ ಗ್ರಾಮದಲ್ಲಿ ಯಾರೊಬ್ಬರೂ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುವುದಿಲ್ಲ! ಗಣೇಶ ಹಬ್ಬದ ದಿನವೇ ಊರಲ್ಲಿ ದೇವಿಯ ದೊಡ್ಡ ಜಾತ್ರೆ ಇರುವ ಕಾರಣ, ನಾವು ಗಣೇಶೋತ್ಸವ ಆಚರಿಸುವುದಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡ ಓಬಣ್ಣ.
ಬುಧವಾರದ ವಿಶೇಷ ‘ಸಿಡಿ’ ಉತ್ಸವ
ದೇವಿಯ ತಮ್ಮನಾದ ಬೊಮ್ಮಲಿಂಗೇಶ್ವರ ಸ್ವಾಮಿಯ ಕಡೆಯವರಾದ ಕೋನಸಾಗರದ ನಾಯಕ ಜನಾಂಗದವರು (ಬುಟುಗಲು ಬೆಡಗಿನ ಎನಮಲರು ಮೇಟಿ ವಂಶಸ್ಥರು) ತಲೆತಲಾಂತರಗಳಿಂದ ‘ಸಿಡಿ’ ಆಡುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಬುಧವಾರ ಬೆಳಗ್ಗೆ ಕೋನಸಾಗರದಲ್ಲಿ ಪೂಜೆ ಸಲ್ಲಿಸಿ, ಕಾಲ್ನಡಿಗೆಯಲ್ಲಿ ಗೌರಸಮುದ್ರಕ್ಕೆ ಆಗಮಿಸಿ ಸಿಡಿ ಉತ್ಸವದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಾಡಿಕೆ.
ಮಳೆಯ ಕೊರತೆ, ಬಿಸಿಲಿನ ತಾಪಕ್ಕೆ ಡಲ್ ಹೊಡೆದ ವ್ಯಾಪಾರ!
ಈ ಬಾರಿ ಮಳೆಯ ಕೊರತೆ ಹಾಗೂ ವಿಪರೀತ ಬಿಸಿಲಿನಿಂದಾಗಿ ಮಧ್ಯಾಹ್ನದ ಹೊತ್ತಿಗೆ ಭಕ್ತರ ಸಂಖ್ಯೆ ಕೊಂಚ ಕಡಿಮೆಯಾಗಿತ್ತು. ದಾವಣಗೆರೆ, ಚಿತ್ರದುರ್ಗ, ಹಿರಿಯೂರು ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಬೆಂಡು-ಬತ್ತಾಸು, ಖಾರಮಂಡಕ್ಕಿ, ಜಿಲೇಬಿ, ಬಲೂನ್ ವ್ಯಾಪಾರಿಗಳು ಕಳೆದ ವರ್ಷದಷ್ಟು ವ್ಯಾಪಾರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ಬಂದ ಭಕ್ತರಿಗೆ ಕುಡಿಯುವ ನೀರು ಹಾಗೂ ನೆರಳಿನ ಕೊರತೆ ಎದ್ದು ಕಾಣುತ್ತಿತ್ತು.
ಜಾತ್ರೆಯಲ್ಲಿ ಗಣ್ಯರ ಭಾಗಿ:
ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ದ್ರಾಕ್ಷಿ ಮತ್ತು ವೈನ್ ಮಂಡಳಿ ಅಧ್ಯಕ್ಷ ಡಾ.ಯೋಗೇಶಬಾಬು, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಎಸ್ಪಿ ಡಾ.ಶಿವಕುಮಾರ್, ಡಿವೈಎಸ್ಪಿ ಎಂ.ಜಿ.ಸತ್ಯನಾರಾಯಣರಾವ್, ತಹಶೀಲ್ದಾರ್ ರೇಹಾನ್ ಪಾಷಾ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ದೇವಿಯ ದರ್ಶನ ಪಡೆದರು.