Home ಚಿತ್ರದುರ್ಗ ಭದ್ರಾ ಧರಣಿಯಲ್ಲಿ ಕುರಾನ್ ಪಠಣ; ಕಸ ಗುಡಿಸಿ ತಾಡ್ಪಲ್ ಹಾಸುತ್ತಿದ್ದ ಶಫೀವುಲ್ಲಾ
ಚಿತ್ರದುರ್ಗ

ಭದ್ರಾ ಧರಣಿಯಲ್ಲಿ ಕುರಾನ್ ಪಠಣ; ಕಸ ಗುಡಿಸಿ ತಾಡ್ಪಲ್ ಹಾಸುತ್ತಿದ್ದ ಶಫೀವುಲ್ಲಾ

Share
Share

ಚಿತ್ರದುರ್ಗ: ಭದ್ರಾ ನೀರಿಗಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಹೋರಾಟದ ಇತಿಹಾಸದಲ್ಲಿ ವೇದಿಕೆಯ ಮೇಲೆ ಕಾಣಿಸಿಕೊಂಡವರಷ್ಟೇ ಅಲ್ಲ, ವೇದಿಕೆಯ ಹಿಂದೆ ನಿಂತು ಹೋರಾಟಕ್ಕೆ ಜೀವ ತುಂಬಿದ ಅನೇಕರ ನೆನಪುಗಳೂ ಇವೆ. ಅಂತಹ ಮೌನ ಕಾರ್ಯಕರ್ತರಲ್ಲಿ ಟಿ. ಶಫೀವುಲ್ಲಾ ಅವರೂ ಒಬ್ಬರು.

ಧರಣಿ ಎಂದರೆ ಶಫೀವುಲ್ಲಾ ಅವರಿಗೆ ಕೇವಲ ಕುಳಿತು ಘೋಷಣೆ ಕೂಗುವುದಾಗಿರಲಿಲ್ಲ. ಧರಣಿಗೆ ಜನರನ್ನು ಕರೆತರುವುದು, ಸ್ಥಳವನ್ನು ಸಿದ್ಧಪಡಿಸುವುದು, ಬಂದವರನ್ನು ನೋಡಿಕೊಳ್ಳುವುದು, ಕಾರ್ಯಕ್ರಮ ಮುಗಿಯುವವರೆಗೆ ಜವಾಬ್ದಾರಿ ವಹಿಸುವುದು—ಇವೆಲ್ಲವೂ ಅವರ ಹೋರಾಟದ ಭಾಗವಾಗಿತ್ತು.

ವೇದಿಕೆ ಹಿಂದಿನ ಮೌನ ಹೋರಾಟಗಾರ ಟಿ. ಶಫೀವುಲ್ಲಾ

ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಎಂ. ಜಯಣ್ಣ ಹಾಗೂ ಕಾರ್ಯಾಧ್ಯಕ್ಷ ಮುರುಘರಾಜೇಂದ್ರ ಒಡೆಯರ ಅವರೊಂದಿಗೆ ಅವರು ಧರಣಿ, ಸತ್ಯಾಗ್ರಹ, ಜಾಥಾ ಹಾಗೂ ಬಾಗಿನ ಅರ್ಪಿಸುವ ಸಂದರ್ಭಗಳಲ್ಲಿ ನಿರಂತರವಾಗಿ ಹೆಜ್ಜೆ ಹಾಕಿದರು.

ಟೈಲರ್ ಸಂಘದ ಅಧ್ಯಕ್ಷರಾಗಿ ಹೊಸದಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಕಾಲ. ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಮಠದ ಹಟ್ಟಿಯಿಂದ ಜನರನ್ನು ಕರೆದುಕೊಂಡು ಹೋಗಬೇಕಿತ್ತು. ‘ನಿನಗೆ ಒಂದು ಬಸ್ ಕಳುಹಿಸುತ್ತೇವೆ. ಅದರಲ್ಲಿ ಜನರನ್ನು ಕರೆತರುವ ಜವಾಬ್ದಾರಿ ನಿನ್ನದು’ ಎಂದು ಹೇಳಿದರೆ ಸಾಕಿತ್ತು. ಬಸ್‌ನಲ್ಲಿ ಜನರನ್ನು ಕರೆದುಕೊಂಡು ಹೋಗುವುದಷ್ಟೇ ಅಲ್ಲ, ಕಾರ್ಯಕ್ರಮ ಮುಗಿಯುವವರೆಗೂ ಎಲ್ಲರನ್ನೂ ನೋಡಿಕೊಂಡು, ಮತ್ತೆ ಸುರಕ್ಷಿತವಾಗಿ ವಾಪಸ್ ಕರೆತರುವವರೆಗೂ ಅವರ ಜವಾಬ್ದಾರಿ ಮುಗಿಯುತ್ತಿರಲಿಲ್ಲ.

ನಗರಸಭೆ ಪಕ್ಕದಲ್ಲಿದ್ದ ಲಕ್ಷ್ಮಣ ವಾಯ್ಸ್ ಕಚೇರಿಯ ಪಕ್ಕದ ಕಚೇರಿಯಲ್ಲಿ ನೀರಾವರಿ ಹೋರಾಟ ಸಮಿತಿಯ ಸಭೆಗಳು ನಡೆಯುತ್ತಿದ್ದವು. ಸಭೆ ಇದೆ ಎಂದಾಕ್ಷಣ ಶಫೀವುಲ್ಲಾ ಅವರ ಕೆಲಸ ಆರಂಭವಾಗುತ್ತಿತ್ತು.

ಜವಾಬ್ದಾರಿಯ ಹೊಣೆ: ಜನರನ್ನು ಸೇರಿಸುವ ನಾಯಕತ್ವ

ಕಚೇರಿಗೆ ಹೋಗಿ ಕಸ ಗುಡಿಸುವುದು, ತಾಡ್ಪಲ್ ಹಾಸುವುದು, ಸಭೆಗೆ ಬೇಕಾದ ವ್ಯವಸ್ಥೆ ಮಾಡುವುದು, ಯಾರಾದರೂ ಹೇಳುವವರೆಗೆ ಕಾಯುತ್ತಿರಲಿಲ್ಲ. ‘ಇದು ನನ್ನ ಕೆಲಸವಲ್ಲ’ ಎಂಬ ಭಾವವೂ ಇರಲಿಲ್ಲ. ಹೋರಾಟ ತನ್ನದು ಎಂಬ ಭಾವದಿಂದ ಎಲ್ಲವನ್ನೂ ತಾವೇ ಮುಂದೆ ನಿಂತು ಮಾಡುತ್ತಿದ್ದರು.

ಹೋರಾಟದ ದೊಡ್ಡ ವೇದಿಕೆಯ ಮೇಲೆ ಮೈಕ್ ಹಿಡಿದು ಮಾತನಾಡುವುದು ಸುಲಭವಾಗಬಹುದು. ಆದರೆ ನೂರಾರು ಜನ ಕುಳಿತುಕೊಳ್ಳುವ ಸ್ಥಳವನ್ನು ಸಿದ್ಧಪಡಿಸಲು ಕಸ ಗುಡಿಸುವುದು, ತಾಡ್ಪಲ್ ಹಾಸುವುದು, ಜನರನ್ನು ಕರೆತರುವುದು, ಅವರ ಊಟ-ಉಪಚಾರ ನೋಡಿಕೊಳ್ಳುವುದು—ಇಂತಹ ಕೆಲಸಗಳಲ್ಲಿಯೇ ಒಬ್ಬ ನಿಜವಾದ ಕಾರ್ಯಕರ್ತನ ಬದ್ಧತೆ ಕಾಣುತ್ತದೆ. ಶಫೀವುಲ್ಲಾ ಅವರ ಹೋರಾಟ ಅಂತಹದ್ದಾಗಿತ್ತು.

ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಬೇಕು ಎಂಬ ಬೇಡಿಕೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದ ದಿನಗಳು. ಹೋರಾಟಕ್ಕೆ ಬೆಂಬಲವಾಗಿ ಮಹಿಳೆಯರನ್ನು ಕರೆಸಿ ಕುರಾನ್ ಪಠಣ ಮಾಡಿಸಲಾಯಿತು.

ನೀರಿಗಾಗಿ ನಡೆದ ಆ ಹೋರಾಟದಲ್ಲಿ ಧರ್ಮದ ಗಡಿಗಳಿರಲಿಲ್ಲ. ರೈತನ ಬದುಕಿಗೆ ನೀರು ಬೇಕೆಂಬ ಒಂದೇ ಆಶಯ ಎಲ್ಲರನ್ನೂ ಒಗ್ಗೂಡಿಸಿತ್ತು. ಕುರಾನ್ ಪಠಣವೂ ಆ ಹೋರಾಟದ ಒಂದು ಭಾಗವಾಯಿತು.

ಶಫೀವುಲ್ಲಾ ಅವರಂತಹ ಕಾರ್ಯಕರ್ತರು ಇಂತಹ ಕ್ಷಣಗಳಲ್ಲಿ ಹೋರಾಟದೊಳಗಿನ ವೈವಿಧ್ಯತೆಯನ್ನು ಒಗ್ಗೂಡಿಸುವ ಸೇತುವೆಯಾಗಿ ಕೆಲಸ ಮಾಡಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಪಿ. ಕೋದಂಡರಾಮಯ್ಯ ಅವರು ಚುನಾವಣೆಯಲ್ಲಿ ಸೋತ ಬಳಿಕ ನೀರಾವರಿ ಹೋರಾಟದಿಂದ ದೂರ ಉಳಿಯುವುದಾಗಿ ಹೇಳಿದ್ದರು. ಆದರೆ ಹೋರಾಟಗಾರರಿಗೆ ಅದು ಒಪ್ಪಿಗೆಯಾಗಲಿಲ್ಲ.

‘ನೀವು ಮತ್ತೆ ಹೋರಾಟಕ್ಕೆ ಬರಬೇಕು’ ಎಂದು ಒತ್ತಾಯಿಸಲು ಎಲ್ಲರೂ ಅವರ ಬಳಿಗೆ ತೆರಳಿದರು. ಆರಂಭದಲ್ಲಿ ಅವರು ಒಪ್ಪಲಿಲ್ಲ.

ಜಮೀನಿಲ್ಲದಿದ್ದರೂ ರೈತರಿಗಾಗಿ ಮಿಡಿದ ಜೀವ

ಆ ಸಮಯದಲ್ಲಿ ಕಾಮ್ರೇಡ್ ಚಂದ್ರಣ್ಣ ಅವರಿಗೆ ಚಿತ್ರದುರ್ಗದಲ್ಲಿ ಎಂ. ಜಯಣ್ಣ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಮುರುಘರಾಜೇಂದ್ರ ಒಡೆಯರ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿ ಹೋರಾಟವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ಆ ಜವಾಬ್ದಾರಿಯನ್ನು ಅವರು ನಿರ್ವಹಿಸಿದರು.

ಹೋರಾಟಕ್ಕೆ ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಹೋರಾಟದ ಆಶಯ ಮಾತ್ರ ಮುಂದುವರಿಯುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆ.

ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಸಂದರ್ಭವೂ ನೀರಾವರಿ ಹೋರಾಟದ ಪ್ರಮುಖ ಘಟನೆಯಾಯಿತು. ಮುಖ್ಯಮಂತ್ರಿಗೆ ಕಪ್ಪು ಬಟ್ಟೆ ಪ್ರದರ್ಶಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಪತ್ರಕರ್ತರು ಮತ್ತು ಹೋರಾಟಗಾರರು ಒಟ್ಟಾಗಿ ಕಾರ್ಯಪ್ರವೃತ್ತರಾದ ಪರಿಣಾಮ ಅಂದು ನಗರದಲ್ಲಿ ಅಘೋಷಿತ ಬಂದ್‌ನಂತಹ ವಾತಾವರಣ ನಿರ್ಮಾಣವಾಗಿತ್ತು. ನೀರಾವರಿ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಆ ಎಲ್ಲ ಸಂದರ್ಭಗಳಲ್ಲೂ ಶಫೀವುಲ್ಲಾ ಹೋರಾಟಗಾರರ ಸಾಲಿನಲ್ಲಿ ಇದ್ದರು.

‘ನನಗೂ ಜಮೀನಿಲ್ಲ, ಶಫೀಗೂ ಜಮೀನಿಲ್ಲ. ಆದರೂ ನಾವು ರೈತರ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ.’ ಎಂ. ಜಯಣ್ಣ ಅವರು ಶಫೀವುಲ್ಲಾ ಅವರ ಸೇವೆಯನ್ನು ಸ್ಮರಿಸುವಾಗ ಆಗಾಗ್ಗೆ ಹೇಳುತ್ತಿದ್ದ ಮಾತಿದು.

ಸ್ವತಃ ಜಮೀನು ಇಲ್ಲದಿದ್ದರೂ, ಜಮೀನು ಹೊಂದಿರುವ ರೈತರ ಬದುಕಿಗೆ ನೀರು ಬೇಕೆಂಬ ಕಾರಣಕ್ಕಾಗಿ ಹೋರಾಟಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಅದೇ ಕಾರಣಕ್ಕೆ ಶಫೀವುಲ್ಲಾ ಅವರ ಹೋರಾಟ ಕೇವಲ ಒಬ್ಬ ವ್ಯಕ್ತಿಯ ಪಾಲ್ಗೊಳ್ಳುವಿಕೆಯಾಗಿ ಉಳಿಯಲಿಲ್ಲ; ಅದು ನೀರಿಗಾಗಿ ನಡೆದ ಸಾಮೂಹಿಕ ಹೋರಾಟದ ಒಂದು ನೆನಪಾಯಿತು.

ಭದ್ರಾ ನೀರು ಹರಿಯಬೇಕು ಎಂಬ ಕನಸಿನ ಹಿಂದೆ ಸಾವಿರಾರು ಜನರ ಬೆವರು, ಕಣ್ಣೀರು, ಘೋಷಣೆ, ಹೋರಾಟ ಮತ್ತು ತ್ಯಾಗಗಳಿವೆ. ಆ ಸಾಲಿನಲ್ಲಿ ವೇದಿಕೆಯ ಬೆಳಕಿನಿಂದ ದೂರ ಉಳಿದು, ಕಸ ಗುಡಿಸಿ, ತಾಡ್ಪಲ್ ಹಾಸಿ, ಬಸ್‌ನಲ್ಲಿ ಜನರನ್ನು ಕರೆತಂದು, ಧರಣಿಯಲ್ಲಿ ಕುಳಿತು ಹೋರಾಡಿದ ಶಫೀವುಲ್ಲಾ ಅವರಂತಹ ಕಾರ್ಯಕರ್ತರ ಹೆಜ್ಜೆ ಗುರುತುಗಳೂ ಇವೆ.

ಭದ್ರಾ ನೀರು ಹರಿದಾಗ ಸಂಭ್ರಮಿಸುವ ಕಣ್ಣುಗಳ ಹಿಂದೆ, ಆ ನೀರಿಗಾಗಿ ಹೋರಾಡಿದ ಇಂತಹ ಮೌನ ಕಾರ್ಯಕರ್ತರ ನೆನಪುಗಳೂ ಹರಿಯುತ್ತಲೇ ಇರುತ್ತವೆ.

Author

Share
Written by
ಗೌನಹಳ್ಳಿ ಗೋವಿಂದಪ್ಪ - Sub Editor

ಹಿರಿಯ ಪತ್ರಕರ್ತರು, ಚಿತ್ರದುರ್ಗ

Loading News...

More News

Related Articles

ಮದಕರಿ ಜಯಂತಿಗೆ ಬಂದ ಕಿಚ್ಚ: ಹೆಲಿಪ್ಯಾಡ್‌ನಿಂದ ವೇದಿಕೆವರೆಗೆ ಬರಿಗಾಲ ನಡಿಗೆ

ಚಿತ್ರದುರ್ಗ: ಮದಕರಿ ನಾಯಕ ಜಯಂತೋತ್ಸವದಲ್ಲಿ ಭಾಗವಹಿಸಲು ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಕಿಚ್ಚ ಸುದೀಪ್ ಅವರ ಭಕ್ತಿ...

ಚಿತ್ರದುರ್ಗದ ಜನರಿಗೆ ಕಿಚ್ಚನ ಭರವಸೆ: ಆಗಾಗ ಬಂದು ಭೇಟಿ ಮಾಡ್ತೇನೆ

ಚಿತ್ರದುರ್ಗ: ಒಂದು ವರ್ಷದ ನಂತರ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿರುವ ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳೊಂದಿಗೆ...

ಮೀಸಲಾತಿ ರದ್ದು, ಸ್ಟಿಂಗ್ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು...

ಚಿತ್ರದುರ್ಗದಲ್ಲಿ ಸಂಸದ ಕಾರಜೋಳ ಗುಡುಗು: ಮೀಸಲಾತಿ ರದ್ದಿಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ

ಚಿತ್ರದುರ್ಗ: ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ರದ್ದಾಗಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ...