ಚಿತ್ರದುರ್ಗ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯಡಿ ಮುಂದಿನ ಕಂತಿನ ಹಣ ಪಡೆಯಲು ಫಲಾನುಭವಿಗಳು ಬಯೋಮೆಟ್ರಿಕ್ ಅಥವಾ ಮುಖ ದೃಢೀಕರಣ (Face Authentication) ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇ-ಕೆವೈಸಿ ಮಾಡಿಸದ ರೈತರು ಮುಂದಿನ ಕಂತಿನ ಹಣದಿಂದ ವಂಚಿತರಾಗಲಿದ್ದಾರೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000 ನಂತೆ ವಾರ್ಷಿಕ ₹6,000 ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಯಾಗಲಿದ್ದು, ನಕಲಿ ಫಲಾನುಭವಿಗಳು ಹಾಗೂ ಮೃತಪಟ್ಟವರ ಹೆಸರಿನಲ್ಲಿ ಹಣ ದುರುಪಯೋಗವಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಜಾರಿಗೆ ತಂದಿದೆ.
ಒಟಿಪಿ (OTP) ಆಧಾರಿತ ಇ-ಕೆವೈಸಿಗೆ ಬ್ರೇಕ್; ಮುಖ ದೃಢೀಕರಣ ಕಡ್ಡಾಯ
ಈ ಹಿಂದೆ ಆಧಾರ್ ಒಟಿಪಿ ಆಧಾರಿತ ಇ-ಕೆವೈಸಿ ಜಾರಿಯಲ್ಲಿದ್ದಾಗ ಮೃತ ವ್ಯಕ್ತಿಗಳ ಖಾತೆಗೂ ಹಣ ವರ್ಗಾವಣೆಯಾದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆದ್ದರಿಂದ ಸರ್ಕಾರ ಒಟಿಪಿ ಆಧಾರಿತ ವ್ಯವಸ್ಥೆಯನ್ನು ರದ್ದುಪಡಿಸಿದ್ದು, ಕೇವಲ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿಗೆ ಮಾತ್ರ ಮಾನ್ಯತೆ ನೀಡಿದೆ. ಈಗಾಗಲೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತು NPCI ಮ್ಯಾಪಿಂಗ್ ಆಗಿದ್ದರೂ ಸಹ, ಪ್ರತಿಯೊಬ್ಬ ಫಲಾನುಭವಿಯೂ ಈ ಹೊಸ ಪದ್ಧತಿಯಡಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 1.51 ಲಕ್ಷ ರೈತರ e-KYC ಬಾಕಿ!
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 1,51,693 ಫಲಾನುಭವಿಗಳಿದ್ದು, ಈ ಪೈಕಿ ಬರೋಬ್ಬರಿ 1,51,498 ರೈತರ ಇ-ಕೆವೈಸಿ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿದೆ.
ತಾಲ್ಲೂಕುವಾರು ಬಾಕಿ ವಿವರ:
-
ಚಿತ್ರದುರ್ಗ: 31,736
-
ಚಳ್ಳಕೆರೆ: 33,846
-
ಹಿರಿಯೂರು: 24,875
-
ಹೊಳಲ್ಕೆರೆ: 25,895
-
ಹೊಸದುರ್ಗ: 24,023
-
ಮೊಳಕಾಲ್ಮೂರು: 11,123
ಇ-ಕೆವೈಸಿ ಮಾಡಿಸುವುದು ಹೇಗೆ?
ಅರ್ಹ ರೈತರು ಈ ಕೆಳಗಿನ ಸುಲಭ ವಿಧಾನಗಳ ಮೂಲಕ ತಕ್ಷಣವೇ ಇ-ಕೆವೈಸಿ ಪೂರ್ಣಗೊಳಿಸಬಹುದು:
- ಗ್ರಾಮ ಒನ್ / ಕರ್ನಾಟಕ ಒನ್ / ಸಿಎಸ್ಸಿ ಕೇಂದ್ರಗಳು: ಸಮೀಪದ ಸಾಮಾನ್ಯ ಸೇವಾ ಕೇಂದ್ರ (CSC), ಗ್ರಾಮ ಒನ್, ಕರ್ನಾಟಕ ಒನ್ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಕ್ (ಬೆರಳಚ್ಚು) ನೀಡಿ ಇ-ಕೆವೈಸಿ ಮಾಡಿಸಬಹುದು.
- ಗ್ರಾಮ ಮಟ್ಟದ ಸಿಬ್ಬಂದಿ: ಗ್ರಾಮಗಳ ವಿಲೇಜ್ ನೋಡಲ್ ಅಧಿಕಾರಿಗಳಾದ ಕೃಷಿ ಸಖಿ, ಪಶು ಸಖಿ ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ನೆರವಿನಿಂದ ಮುಖ ದೃಢೀಕರಣ ಮಾಡಿಸಿಕೊಳ್ಳಬಹುದು.
- ಮೊಬೈಲ್ ಆ್ಯಪ್ ಮೂಲಕ: ರೈತರು ಸ್ವತಃ ತಮ್ಮ ಮೊಬೈಲ್ನಲ್ಲೇ ಗೂಗಲ್ ಪ್ಲೇ ಸ್ಟೋರ್ನಿಂದ PM-KISAN Mobile App ಡೌನ್ಲೋಡ್ ಮಾಡಿಕೊಂಡು, ಫೇಸ್ ಅಥೆಂಟಿಕೇಷನ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು.
ಮುಂದಿನ ಕಂತಿನ ಹಣ ಯಾವುದೇ ಅಡೆತಡೆಯಿಲ್ಲದೆ ಜಮೆಯಾಗಲು ತಕ್ಷಣವೇ ಎಲ್ಲ ರೈತರು ಇ-ಕೆವೈಸಿ ಪ್ರಕ್ರಿಯೆ ಮುಗಿಸಿಕೊಳ್ಳಬೇಕು ಎಂದು ಚಿತ್ರದುರ್ಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಬಿ. ಮಂಜುನಾಥ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Leave a comment