ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶುಕ್ರವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗೋವಾ ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ನರ್ಸಿಂಗ್ ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಬಸ್ ಚಾಲಕ ಹಾಗೂ ಕ್ಲೀನರ್ ದಾರುಣವಾಗಿ ಸಾವನ್ನಪ್ಪಿದ್ದಾರೆ. 26 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗಿನ ಜಾವ 5:30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತಪಟ್ಟವರನ್ನು ಬಸ್ ಚಾಲಕ ಗುರುಪ್ರಸಾದ್ ಹಾಗೂ ಕ್ಲೀನರ್ ಶಂಕರ್ ಎಂದು ಗುರುತಿಸಲಾಗಿದೆ. ಬೆಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿಬಿದ್ದಿದೆ.
ಗೋವಾ ಪ್ರವಾಸ ಮುಗಿಸಿ ಮರಳುತ್ತಿದ್ದ ವಿದ್ಯಾರ್ಥಿಗಳು:
ಬಸ್ನಲ್ಲಿದ್ದವರೆಲ್ಲರೂ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿರುವ ‘ಯೂನಿವರ್ಸಲ್ ನರ್ಸಿಂಗ್ ಕಾಲೇಜಿನ’ ವಿದ್ಯಾರ್ಥಿಗಳು. ಆಗಸ್ಟ್ 16ರಂದು ಗೋವಾ ಪ್ರವಾಸಕ್ಕೆ ತೆರಳಿದ್ದ ಇವರು, ಪ್ರವಾಸ ಮುಗಿಸಿ ಗುರುವಾರ ಸಂಜೆ ಬೆಂಗಳೂರಿನತ್ತ ವಾಪಸ್ಸಾಗುತ್ತಿದ್ದರು. ಬಸ್ನಲ್ಲಿ ಒಟ್ಟು 56 ಪ್ರಯಾಣಿಕರಿದ್ದರು. ಅದೃಷ್ಟವಶಾತ್ 28 ವಿದ್ಯಾರ್ಥಿಗಳು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ಚಿತ್ರದುರ್ಗ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ
ಗಾಯಗೊಂಡ 26 ವಿದ್ಯಾರ್ಥಿಗಳನ್ನು ತಕ್ಷಣವೇ ಚಿತ್ರದುರ್ಗದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಇಬ್ಬರ ಸ್ಥಿತಿ ಕೊಂಚ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಬಸವೇಶ್ವರ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಎಲ್ಲಾ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
“ಬೆಳಗಿನ ಜಾವದ ಸಮಯವಾಗಿದ್ದರಿಂದ ಚಾಲಕನಿಗೆ ನಿದ್ದೆ ಮಂಪರು ಆವರಿಸಿದ್ದೇ ಈ ಭೀಕರ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ” ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಐಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a comment