ಚಿತ್ರದುರ್ಗ: ನಾಡಿನಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಅರಸು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ನ್ಯಾಯದ ಶಿಲ್ಪಿಯಾಗಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಉಪನ್ಯಾಸಕ ಎಸ್.ಲಕ್ಷ್ಮಿಕಾಂತ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ತರಾಸು ರಂಗಮAದಿರದಲ್ಲಿ ಗುರುವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 111ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ವಿಶ್ವಗುರು ಬಸವಣ್ಣ ಬಿತ್ತಿದ ಸಮಾನತೆಯ ಬೀಜ, ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಗೌತಮ ಬುದ್ಧರ ಚಿಂತನೆ, ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯಗಳನ್ನು ತಮ್ಮ ಆಡಳಿತದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ ಧೀಮಂತ ನಾಯಕ ಎಂದು ಬಣ್ಣಿಸಿದರು.
ಅಧಿಕಾರ ಎನ್ನುವುದು ಕೇವಲ ವೈಯಕ್ತಿಕ ಅಭಿವೃದ್ಧಿಗಾಗಿ ಅಲ್ಲ, ಸಮಾಜಮುಖಿಯಾಗಿ ದೀನ-ದಲಿತರು, ಶೋಷಿತರು ಹಾಗೂ ಬಡವರ ಏಳಿಗೆಗೆ ಶ್ರಮಿಸಿದಾಗ ಮಾತ್ರ ಬದುಕು ಸಾರ್ಥಕತೆ ಪಡೆಯುತ್ತದೆ. ಈ ನಿಟ್ಟಿನಲ್ಲಿ ಅರಸು ಕ್ರಾಂತಿಕಾರಿ ಕಾನೂನುಗಳನ್ನು ತಂದು, ತುರ್ತಾಗಿ ಚರ್ಚಿಸಿ ಶಾಸನ ರೂಪಕ್ಕೆ ತರುವ ಮೂಲಕ ಶೋಷಿತರಿಗೆ ಧ್ವನಿಯಾದರು. ಸಂವಿಧಾನ ನೀಡಿದ ಹಕ್ಕುಗಳು ಪ್ರತಿಯೊಬ್ಬರಿಗೂ ಸಮಾನವಾಗಿ ತಲುಪಬೇಕು ಎಂಬುದು ಅವರ ಕನಸಾಗಿತ್ತು ಎಂದರು.
ಕೇವಲ ರಾಜಕಾರಣಿಯಾಗಿರಲಿಲ್ಲ, ಬದಲಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ಮಹಾನ್ ಚಿಂತಕರಾಗಿದ್ದರು. ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಭೇಟಿ ನೀಡಿ, ಹಸು ಸಾಕಣೆ, ಹಾಲಿನ ಉತ್ಪಾದನೆ ಹೆಚ್ಚಳ ಹಾಗೂ ಕೃಷಿ ಪೂರಕ ಸ್ವಉದ್ಯೋಗಗಳನ್ನು ಕಂಡುಕೊಳ್ಳುವAತೆ ಜನರಲ್ಲಿ ಜಾಗೃತಿ ಮೂಡಿಸಿದರು. ಉಳುವವನೇ ಭೂಮಿಯ ಒಡೆಯ ಕಾಯ್ದೆಯ ಮೂಲಕ ಬಡವರು, ಶೋಷಿತರು ಸ್ವಾಭಿಮಾನದಿಂದ ತಲೆಎತ್ತಿ ಬಾಳುವಂತೆ ಮಾಡಿದರು ಎಂದು ಸ್ಮರಿಸಿದರು.
ಹಿಂದುಳಿದ ವರ್ಗಗಳಿಗೆ ಬಲ ತಂದುಕೊಟ್ಟ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಇಂದು ನಾವೆಲ್ಲರೂ ಅನುಭವಿಸುತ್ತಿರುವ ಸಾಮಾಜಿಕ ಭದ್ರತೆ ಮತ್ತು ಸೌಲಭ್ಯಗಳಿಗೆ ಅರಸು ಅವರ ದೂರದೃಷ್ಟಿಯ ಕಾಯ್ದೆಗಳೇ ಕಾರಣ. ಪ್ರತಿಯೊಬ್ಬರ ಮನೆಯಲ್ಲೂ ಅವರ ಭಾವಚಿತ್ರವಿರಬೇಕು ಹಾಗೂ ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ತಜ್ಞರು ಹಾಗೂ ರವಿಪುರಸ್ಕಾರ ಇಂದಿರಾ ಪ್ರಿಯದರ್ಶಿನಿ ರಾಷ್ಟ್ರೀಯ ಪುರಸ್ಕೃತ ಆರ್.ಎ.ಚೇತನ್ ರಾಮ್ ಅವರು ಮೌಲ್ಯಾಧಾರಿತ ಶಿಕ್ಷಣ ಮತ್ತು ಸ್ವ ಅಭಿವೃದ್ಧಿಯ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಆಧುನಿಕ ಕಾಲದಲ್ಲಿ ವಿದ್ಯಾವಂತರಾಗುತ್ತಿದ್ದರೂ ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಕಡಿಮೆಯಾಗುತ್ತಿರುವುದು ಕಳವಳಕಾರಿ. ವಿದ್ಯಾರ್ಥಿಗಳು ತಮ್ಮ ಜೀವನ ಮೌಲ್ಯ ಹಾಗೂ ಜವಾಬ್ದಾರಿಯನ್ನು ಮರೆಯಬಾರದು ಎಂದರು.
ಪದವಿ ಮುಗಿದ ತಕ್ಷಣ ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದು ಸಾಧ್ಯವಿಲ್ಲದ ಕಾರಣ, ವಿದ್ಯಾರ್ಥಿಗಳು ಸ್ವಾವಲಂಬಿ ಬದುಕಿಗೆ ಅಗತ್ಯವಾದ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಮೊಬೈಲ್, ಇಂಟರ್ನೆಟ್ ಹಾಗೂ ರೀಲ್ಸ್ ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮಗಳ ಭ್ರಮಾಲೋಕದಲ್ಲಿ ಕಾಲಹರಣ ಮಾಡದೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರಂತರ ಅಧ್ಯಯನ, ಏಕಾಗ್ರತೆ ಹಾಗೂ ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಬಂಧ, ಚರ್ಚಾ ಸ್ಪರ್ಧೆಗಳಲ್ಲಿ ವಿಜೇತರು, ಬಿಸಿಎಂ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಲೇಖಕ ಎಚ್.ಆನಂದ್ಕುಮಾರ್, ವಕೀಲ ಪ್ರತಾಪ್ ಜೋಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ಭಾವಿಮಠ ಇದ್ದರು.
Leave a comment