ಚಿತ್ರದುರ್ಗ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಚಿತ್ರದುರ್ಗದ ಹೆಮ್ಮೆಯ ಪುತ್ರ, ಹಿರಿಯ ಸಾಹಿತಿ ಹಾಗೂ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ಭಾಜನರಾಗಿದ್ದಾರೆ.
ಡಾ.ಬಂಜಗೆರೆ ಜಯಪ್ರಕಾಶ್ ಕೇವಲ ಒಂದು ಹೆಸರಲ್ಲ, ನುಡಿದಂತೆ ನಡೆದ ಜನಪರ ಕಾಳಜಿಯ ಜೀವಂತ ಸಾಕ್ಷಿ. ಕೋಟೆನಾಡು ಚಿತ್ರದುರ್ಗದ ಕಲ್ಲು ಬಂಡೆಗಳ ನಡುವೆ ಬೆಳೆದು, ಇಡೀ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ನೆಲದ ಗಟ್ಟಿ ದನಿ ಇವರದ್ದಾಗಿದೆ. ಜನಪರ ಚಳುವಳಿಗಳ ಭಾಗವಾಗಿ ಸಮುದಾಯಗಳ ಅಧ್ಯಯನ ಮಾಡುತ್ತಾ ಬಂದಿರುವ ಅವರು, ತೆಲುಗು ಮತ್ತು ಇಂಗ್ಲಿಷ್ನಿಂದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.
ಡಾ.ಬಂಜಗೆರೆ ಜಯಪ್ರಕಾಶ್ ಕೃತಿಗಳು
-
ಕನ್ನಡ ರಾಷ್ಟ್ರೀಯತೆ (2000)
-
ಇದೇ ರಾಮಾಯಣ (1994)
-
ಕರ್ನಾಟಕತ್ವ ಸಮಾಜೋ ಆರ್ಥಿಕ ತಳಹದಿ (2006)
-
ಬಂಡಾಯ ಸಾಹಿತ್ಯ ಸಂದರ್ಭ
-
ಬಾಗ್ ಬಹಾದುರ್ ನ ಸಾವು (2003)
-
ಉಲಿಯ ಉಯ್ಯಲೆ (2005)
-
ನಿಲ-ವರ್ತಮಾನ ಮುಖಾಬಿಲೆ (2009)
-
ಪಿಳ್ಳಂಗೋವಿ (2009)
ಕವನ ಸಂಕಲನಗಳು ಹಾಗೂ ಪ್ರಮುಖ ಅನುವಾದಗಳು
-
ಕವನ ಸಂಕಲನಗಳು: ಕಳೆದ ಕಾಲದ ಪ್ರೇಯಸಿಯರಿಗೆ (ಸಂಯುಕ್ತ – 2001), ನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತು (1998), ಮಹೂವಾ (1992), ಪದಾರ್ಪಣ (1983).
-
ಅನುವಾದ ಕೃತಿಗಳು: ಮತ್ತೊಂದು ಪ್ರಸ್ಥಾನ (1991), ಸಮುದ್ರ ಮತ್ತು ಇತರ ಕವಿತೆಗಳು (1995), ಅಗೆತವಿಲ್ಲದ ತೋಟಗಾರಿಕೆ (1996), ತಲೆಮಾರು (ಅಲೆಕ್ಸ್ ಹೆಲಿ), ಭೂಮಿ (ಎಮಿಲ್ ಜೋಲಾ), ಬೇಗಂಪುರ (ಗೇಲ್ ಓಮ್ವೆಟ್).
ಕರ್ನಾಟಕದ ಮೂಲೆ ಮೂಲೆಯಲ್ಲೂ ಶೋಷಿತರು, ರೈತರು, ಕಾರ್ಮಿಕರು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಪರವಾಗಿ ಡಾ.ಬಂಜಗೆರೆ ಅವರು ನಡೆಸಿದ ಚಳುವಳಿಗಳು ಅಪ್ರತಿಮವಾದವು. ಆಡಳಿತಶಾಹಿ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದಾಗಲೆಲ್ಲಾ ಅವರ ದನಿ ಜನಸಾಮಾನ್ಯರ ಆಶೋತ್ತರಗಳಿಗೆ ಕನ್ನಡಿಯಾಗುತ್ತಿತ್ತು. ತತ್ವ ಸಿದ್ಧಾಂತಗಳನ್ನು ಕೇವಲ ವೇದಿಕೆ ಭಾಷಣಕ್ಕೆ ಸೀಮಿತಗೊಳಿಸದೆ, ಬೀದಿಗಿಳಿದು ಹೋರಾಡಿದ ಅಪರೂಪದ ಕ್ರಿಯಾಶೀಲ ಚಿಂತಕರಿವರು.
ಅವರ ಬರವಣಿಗೆಯಲ್ಲಿ ಈ ನೆಲದ ಮೂಲ ಸಂಸ್ಕೃತಿ, ಜಾನಪದ ಸೊಗಡು ಮತ್ತು ಶ್ರಮಜೀವಿಗಳ ಬದುಕಿನ ನೈಜ ಮಿಡಿತಗಳು ಒಡಮೂಡಿವೆ. ಸಾಹಿತ್ಯ ಮತ್ತು ಹೋರಾಟವನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ಜೀವಿಸಿದ ಚಿತ್ರದುರ್ಗದ ಹೆಮ್ಮೆಯ ಪುತ್ರನಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಕೋಟೆನಾಡಿನ ಸಾಹಿತ್ಯ ಪ್ರೇಮಿಗಳಲ್ಲಿ ಸಂಭ್ರಮ ಮೂಡಿಸಿದೆ.
Leave a comment