ಚಳ್ಳಕೆರೆ (Chitradurga Live): ತಾಲೂಕಿನ ಕೋನಿಗರಹಳ್ಳಿ ಗ್ರಾಮದ ಬಳಿ ವೇದಾವತಿ ನದಿಗೆ ನಿರ್ಮಿಸಲಾಗಿರುವ ಸೇತುವೆ ದಿಢೀರ್ ಬಿರುಕು ಬಿಟ್ಟಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಆತಂಕ ನಿರ್ಮಾಣವಾಗಿದೆ. ಜೀವ ಕೈಯಲ್ಲಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
ಚಳ್ಳಕೆರೆಯಿಂದ ಎಲಗಟ್ಟೆ, ಟಿ.ಎನ್. ಕೋಟೆ ಹಾಗೂ ಧರ್ಮಪುರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜೀವನಾಡಿ ಈ ಸೇತುವೆ. ಕಳೆದ ಕೆಲವು ವರ್ಷಗಳಿಂದಲೇ ಈ ಸೇತುವೆ ಶಿಥಿಲಾವಸ್ಥೆಗೆ ತಲುಪಿತ್ತು. ಈಗ ಸೇತುವೆಯಲ್ಲಿ ಬಿರುಕುಗಳು ಇನ್ನಷ್ಟು ಹೆಚ್ಚಾಗಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಒಂದು ವೇಳೆ ಸೇತುವೆ ಕುಸಿದರೆ ಈ ಭಾಗದ ಹಳ್ಳಿಗಳ ಸಂಪೂರ್ಣ ರಸ್ತೆ ಸಂಪರ್ಕ ಕಡಿತಗೊಳ್ಳುವುದು ನಿಶ್ಚಿತ.
ಅನಾಹುತಕ್ಕೆ ಕಾಯುತ್ತಿದ್ದಾರಾ ಅಧಿಕಾರಿಗಳು?
ನಿತ್ಯ ಇದೇ ಮಾರ್ಗದಲ್ಲಿ ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ಹಾಗೂ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ತೆರಳುವ ರೋಗಿಗಳು ಸಂಚರಿಸಬೇಕಾದ ಅನಿವಾರ್ಯತೆ ಇದೆ. “ವರ್ಷಗಳಿಂದ ಸೇತುವೆ ಹಾಳಾಗುತ್ತಿದ್ದರೂ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಈಗೇನಾದರೂ ಹೆಚ್ಚು ಕಮ್ಮಿಯಾಗಿ ಅನಾಹುತ ಸಂಭವಿಸಿದರೆ ಜೀವಹಾನಿಗೆ ಯಾರು ಹೊಣೆ? ಚುನಾವಣೆ ವೇಳೆ ಮಾತ್ರ ಮತ ಕೇಳಲು ಬರುವ ಜನಪ್ರತಿನಿಧಿಗಳು ಈಗ ಎಲ್ಲಿದ್ದಾರೆ?” ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಅನಾಹುತ ನಡೆದು ಪ್ರಾಣಹಾನಿಯಾದ ಮೇಲೆ ಪರಿಹಾರ ಘೋಷಣೆ ಮಾಡುವ ಬದಲು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಸ್ಥಿತಿಗತಿ ಪರಿಶೀಲಿಸಿ, ತುರ್ತು ದುರಸ್ತಿ ಕಾಮಗಾರಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಉಗ್ರವಾಗಿ ಒತ್ತಾಯಿಸಿದ್ದಾರೆ.
Leave a comment