ಚಿತ್ರದುರ್ಗ (ಸೆ.20): ಚಿತ್ರದುರ್ಗ ಜಿಲ್ಲೆಯ ರೈತರ ಬಹುದಿನಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಪ್ರಾಯೋಗಿಕವಾಗಿ ಹಿರಿಯೂರು ತಾಲ್ಲೂಕಿನ ಹಲವು ಕೆರೆಗಳಿಗೆ ಭದ್ರಾ ನೀರು ಹರಿಸಲಾಗುತ್ತಿದೆ. ಇಂದು (ಸೆ. 20) ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಹಿರಿಯೂರು ತಾಲ್ಲೂಕಿನ ಆದಿರಾಳು ಗ್ರಾಮದ ಗೋಕಟ್ಟೆ ಬಳಿ ಭದ್ರಾ ನದಿಗೆ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಕೆರೆಗಳಿಗೆ ಜೀವಕಳೆ
ಚಿತ್ರದುರ್ಗ ಬ್ರಾಂಚ್ ಕೆನಾಲ್ ಮೂಲಕ ಪ್ರಾಯೋಗಿಕವಾಗಿ ಭದ್ರಾ ನೀರನ್ನು ಹರಿಸಲಾಗುತ್ತಿದೆ. ಕೆನಾಲ್ನ 87.740 ಕಿ.ಮೀ ಬಳಿಯ ಔಟ್ ಲೆಟ್ ನಿಂದ ನೈಸರ್ಗಿಕ ಹಳ್ಳದ ಮೂಲಕವೇ ಹಿರಿಯೂರು ತಾಲ್ಲೂಕಿನ ಸೂರಗೊಂಡಹಳ್ಳಿ ಹಾಗೂ ತವಂದಿ ಎರದಕಟ್ಟೆ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.
ಒಟ್ಟು 17 ಕಿ.ಮೀ. ಉದ್ದದ ಈ ನೈಸರ್ಗಿಕ ಹಳ್ಳದ ಹಾದಿಯಲ್ಲಿ ಬರುವ ಕೆ.ಸಿ.ರೊಪ್ಪ, ಮಲ್ಲರಸನಹಟ್ಟಿ, ಆದಿರಾಳು, ಸಿ.ಎನ್.ಮಾಳಿಗೆ, ಹುಳಿ ತೊಟ್ಟಿಲು, ಸೂರಗೊಂಡಹಳ್ಳಿ ಹಾಗೂ ತವಂದಿ ಎರದಕಟ್ಟೆ ಸೇರಿದಂತೆ ಸುಮಾರು 6 ಚೆಕ್ ಡ್ಯಾಮ್, 3 ಗೋ ಕಟ್ಟೆಗಳು ಮತ್ತು ಹಲವು ಎಕರೆ ಕೃಷಿ ಭೂಮಿಗೆ ಭದ್ರಾ ನೀರು ಜೀವಕಳೆ ತುಂಬಲಿದೆ. ಇದು ಈ ಭಾಗದ ರೈತರಿಗೆ ಮತ್ತು ಸಾರ್ವಜನಿಕರಿಗೆ ದೊಡ್ಡ ಮಟ್ಟದ ಅನುಕೂಲ ಕಲ್ಪಿಸಲಿದೆ.
Read: ಪಿಎಗಳ ಮಾತು ಕೇಳಿ ರಾಜಕೀಯ ಮುಗಿಸ್ಕೊಬೇಡ: ಬಿ. ಶ್ರೀರಾಮುಲುಗೆ ತಿಪ್ಪೇಸ್ವಾಮಿ ಖಡಕ್ ಎಚ್ಚರಿಕೆ
ಕಾಮಗಾರಿ ಪರಿಶೀಲನೆ
ಬಾಗಿನ ಅರ್ಪಿಸಿದ ಬಳಿಕ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೋವೇರಹಟ್ಟಿ ಬಳಿ ನಡೆಯುತ್ತಿರುವ ಭದ್ರಾ ಕೆನಾಲ್ ಕಾಮಗಾರಿಯನ್ನು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೆಚ್.ಸಿ.ರಮೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಜಿಲ್ಲಾಧಿಕಾರಿ ಎಸ್.ರಮ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ರವಿಶಂಕರ್, ಅಧೀಕ್ಷಕ ಇಂಜಿನಿಯರ್ ಹರೀಶ್ ಸೇರಿದಂತೆ ಹಲವು ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.