Home ಹೊಳಲ್ಕೆರೆ ಹನಿ ನೀರಿಗೂ ಕೊಳಾಳ್ ಗ್ರಾಮಸ್ಥರ ಹಾಹಾಕಾರ: ಸಂಕಷ್ಟಕ್ಕೆ ನೆರವಾಗುತ್ತಾರಾ ನೂತನ ಸಚಿವ ರಘುಮೂರ್ತಿ
ಹೊಳಲ್ಕೆರೆ

ಹನಿ ನೀರಿಗೂ ಕೊಳಾಳ್ ಗ್ರಾಮಸ್ಥರ ಹಾಹಾಕಾರ: ಸಂಕಷ್ಟಕ್ಕೆ ನೆರವಾಗುತ್ತಾರಾ ನೂತನ ಸಚಿವ ರಘುಮೂರ್ತಿ

Share
ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟಿಸುತ್ತಿರುವ ಗ್ರಾಮಸ್ಥರು
ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟಿಸುತ್ತಿರುವ ಗ್ರಾಮಸ್ಥರು
Share

ಹೊಳಲ್ಕೆರೆ/ಚಿತ್ರದುರ್ಗ: ಮೂರು ವಿಧಾನಸಭಾ ಕ್ಷೇತ್ರಗಳ ಗಡಿ ಗ್ರಾಮವಾಗಿರುವ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ‘ಕೊಳಾಳ್’ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಜನತೆ ಹನಿ ನೀರಿಗೂ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಆದರೆ ಈವರೆಗೆ ಯಾವುದೇ ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸಿಲ್ಲ.

ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಇಡೀ ಊರು ನರಳುತ್ತಿದ್ದು, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲು ಸಾಲು ಕೊಡಗಳನ್ನು ಹಿಡಿದು ಕುಡಿಯುವ ನೀರಿಗಾಗಿ ಆಗ್ರಹಿಸಿ ಬೀದಿಗಿಳಿದಿದ್ದಾರೆ.

ಕೊಳಾಳ್ : ಬತ್ತಿಹೋದ ಬೋರ್‌ವೆಲ್‌ಗಳು!

ಈ ಹಿಂದೆಯೂ ಗ್ರಾಮದಲ್ಲಿ ಇಂತಹದ್ದೇ ಸಮಸ್ಯೆ ಉಲ್ಬಣಿಸಿತ್ತು. ಆ ವೇಳೆ ಆಕ್ರೋಶಗೊಂಡಿದ್ದ ಗ್ರಾಮದ ಜನರು ಗ್ರಾಮ ಪಂಚಾಯಿತಿ ಪಿಡಿಒ (PDO) ಹಾಗೂ ತಾಲೂಕು ಪಂಚಾಯಿತಿ ಇಒ (EO) ಅವರಿಗೆ ದಿಗ್ಬಂಧನ ಹಾಕಿದ್ದರು. ಆಗ ಎಚ್ಚೆತ್ತುಕೊಂಡಿದ್ದ ತಾಲೂಕು ಆಡಳಿತ ಎರಡು ಬೋರ್‌ವೆಲ್‌ಗಳನ್ನು ಕೊರೆಸಿ ನೀರು ಸರಬರಾಜು ಮಾಡಿತ್ತು. ಆದರೆ ಇದೀಗ ಆ ಎರಡೂ ಬೋರ್‌ವೆಲ್‌ಗಳು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಗ್ರಾಮದ ಜನರಿಗೆ ನೀರಿನ ಭವಣೆ ಮತ್ತೆ ಶುರುವಾಗಿದೆ.

ಮಹಿಳೆಯರು ಹಾಗೂ ಶಾಲಾ ಮಕ್ಕಳ ಪರದಾಟ

ನೀರಿಲ್ಲದೆ ಗ್ರಾಮದ ಮಹಿಳೆಯರ ಪಾಡು ಹೇಳತೀರದಾಗಿದೆ. ಸ್ನಾನ ಮಾಡಲು, ಅಡುಗೆ ಮಾಡಲು ನೀರಿಲ್ಲದೆ ತಣ್ಣೀರ ಬಟ್ಟೆಯಲ್ಲೇ ಮೈ ಒರೆಸಿಕೊಳ್ಳುವಂತಹ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಬಟ್ಟೆ ತೊಳೆಯಲು ನೀರು ಸಿಗದೆ ದೂರದ ತೋಟಗಳತ್ತ ಮುಖ ಮಾಡುವಂತಾಗಿದೆ. ಶಾಲಾ ಮಕ್ಕಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ; ಶಾಲೆಯಲ್ಲಿ ನೀರಿಲ್ಲದ ಕಾರಣ ಬಿಸಿಯೂಟ ತಯಾರಿಸುವುದನ್ನೇ ಶಿಕ್ಷಕರು ಬಂದ್ ಮಾಡಿದ್ದಾರೆ.

ಅಧಿಕಾರಿಗಳು, ಶಾಸಕರ ನಿರ್ಲಕ್ಷ್ಯ

“ಸ್ಥಳೀಯ ಶಾಸಕ ಎಂ. ಚಂದ್ರಪ್ಪ ಅವರು ಇತ್ತ ತಿರುಗಿಯೂ ನೋಡಿಲ್ಲ ಹಾಗೂ ಅಧಿಕಾರಿಗಳು ಕೂಡ ಕಣ್ಮುಚ್ಚಿ ಕುಳಿತಿದ್ದಾರೆ. ನಮ್ಮೂರು ಚಿತ್ರದುರ್ಗ ಹಾಗೂ ಹೊಳಲ್ಕೆರೆಯ ಕೊನೆಯ ಗಡಿ (ಲಾಸ್ಟ್ ಬಾರ್ಡರ್) ಆಗಿರುವುದರಿಂದ ಯಾವ ಅಧಿಕಾರಿಗಳು ಇತ್ತ ಬಂದು ವಿಚಾರಿಸುತ್ತಿಲ್ಲ. ಆರು ತಿಂಗಳಾದರೂ ಯಾರೂ ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಜಾನುವಾರುಗಳಿಗೆ, ಅಡಿಕೆ ಗಿಡಗಳಿಗೆ ನೀರಿಲ್ಲ. ನಮಗೆ ತಕ್ಷಣವೇ ಮಾರಿ ಕಣಿವೆ ನೀರು ಒದಗಿಸಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮಸ್ಥರ ಸಂಕಷ್ಟಕ್ಕೆ ನೆರವಾಗುತ್ತಾರಾ ನೂತನ ಸಚಿವ ರಘುಮೂರ್ತಿ

ಸದ್ಯ ನಮ್ಮ ಜಿಲ್ಲೆಯವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಟಿ.ರಘುಮೂರ್ತಿ ಅವರು ನಮ್ಮ ಸಂಕಷ್ಟಕ್ಕೆ ನೆರವಾಗುತ್ತಾರಾ ಎಂಬ ಆಸೆಯಿಂದ ಕಾಯುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಶಾಸತ್ವ ಪರಿಹಾರಕ್ಕೆ ನೂತನ ಸಚಿವರು ಗಮನಹರಿಸಬೇಕು ಎಂಬುದು ಜನರ ಬೇಡಿಕೆ.

ಒಟ್ಟಾರೆಯಾಗಿ ಕಳೆದ ಒಂದು ವರ್ಷದಿಂದ ಕುಡಿಯುವ ನೀರಿಲ್ಲದೆ ಕೊಳಾಳ್ ಗ್ರಾಮದ ಜನರ ಜೀವನ ದುಸ್ತರವಾಗಿದ್ದು, ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು, ಗಡಿಗ್ರಾಮಕ್ಕೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುತ್ತಾರಾ ಕಾದು ನೋಡಬೇಕಿದೆ.

Share
Written by
Prashanth Kumar N - Editor

ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ. ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Leave a comment

Leave a Reply

Your email address will not be published. Required fields are marked *

Loading News...

More News