ಚಿತ್ರದುರ್ಗ/ಮೊಳಕಾಲ್ಮೂರು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 150 ಎ (NH 150A) ರ ಹಾನಗಲ್ ಪೆಟ್ರೋಲ್ ಬಂಕ್ ಸಮೀಪ ಭಾನುವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಏಳು ಜನರಿಗೆ ಗಾಯಗಳಾಗಿವೆ.
ಮೃತರನ್ನು ಬೆಂಗಳೂರು ದಕ್ಷಿಣ ಮಾಗಡಿ ಪಟ್ಟಣದ ನಿವಾಸಿಗಳಾದ ಶಿವಕುಮಾರ್ (38) ಮತ್ತು ಮಲ್ಲಯ್ಯ (60) ಎಂದು ಗುರುತಿಸಲಾಗಿದೆ. ಇದೇ ಗ್ರಾಮದ ಸುನಿಲ್ ಕುಮಾರ್, ಚೈತ್ರ, ಪವನ್, ಕುಶಾಲ್, ರಮೇಶ್, ಲಕ್ಷ್ಮಮ್ಮ ಹಾಗೂ ಕೆ.ರಮೇಶ್ ಎಂಬುವವರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ದೈವ ದರ್ಶನ ಮುಗಿಸಿ ಮರಳುವಾಗ ದುರಂತ: ಕಳೆದ ಎರಡು ದಿನಗಳ ಹಿಂದೆ ಈ ಕುಟುಂಬ ತಮ್ಮ ಮನೆ ದೇವರಾದ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿತ್ತು. ಅಲ್ಲಿಂದ ಹೂವಿನ ಹಡಗಲಿ, ಹೊಸಪೇಟೆ, ಬಳ್ಳಾರಿ ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳಿ ದರ್ಶನ ಪಡೆದು, ಮರಳಿ ತಮ್ಮ ಊರಾದ ಮಾಗಡಿಗೆ ಹಿಂದಿರುಗುತ್ತಿದ್ದರು.
ಭಾನುವಾರ ಮುಂಜಾನೆ ಸುಮಾರು 2.30ರ ಸುಮಾರಿಗೆ ಕಾರು ಹಾನಗಲ್ ಸಮೀಪ ಬರುತ್ತಿದ್ದಂತೆ, ಚಾಲಕನ ನಿಯಂತ್ರಣ ತಪ್ಪಿದ ಕಾರು 150 ಎ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಘಟನೆ ಕುರಿತು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Leave a comment