ಮೊಳಕಾಲ್ಮೂರು (Chitradurga Live): ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಚುನಾವಣೆಗೂ ಮುನ್ನವೇ ಟಿಕೆಟ್ ಫೈಟ್ ಕಗ್ಗಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ. ಚುನಾವಣೆ ಎದುರಿಸಲು ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಪಡೆಯ ಬಣ ರಾಜಕೀಯ ಬೀದಿಗೆ ಬಂದಿದೆ. ವಿಶೇಷವಾಗಿ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ವಿರುದ್ಧವೇ ಸ್ವಪಕ್ಷೀಯ ನಾಯಕರು ತಿರುಗಿ ಬಿದ್ದಿದ್ದಾರೆ.
ವಲಸಿಗರು ವರ್ಸಸ್ ಸ್ಥಳೀಯರ ಸಮರ
ಮೊಳಕಾಲ್ಮೂರು ಕ್ಷೇತ್ರದಲ್ಲಿ ಇದೀಗ ವಲಸಿಗರ ದರ್ಬಾರ್ ನಡೆಯುತ್ತಿದೆಯಾ ಅಥವಾ ಸ್ಥಳೀಯರಿಗೆ ಮಣೆ ಹಾಕಲಾಗುತ್ತಿದೆಯಾ ಎಂಬ ಚರ್ಚೆ ಕಾರ್ಯಕರ್ತರಲ್ಲಿ ಶುರುವಾಗಿದೆ. ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಎಸ್. ತಿಪ್ಪೇಸ್ವಾಮಿ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ತಮ್ಮದೇ ಪಕ್ಷದ ಮುಖಂಡರ ಈ ನಡೆಗೆ ಸ್ವತಃ ತಿಪ್ಪೇಸ್ವಾಮಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ಕ್ಷೇತ್ರದಲ್ಲಿ ವಲಸಿಗರದ್ದೇ ರಾಜ್ಯಭಾರ ಆಗಿಬಿಟ್ಟಿದೆ” ಎಂಬ ಬೇಸರ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.
ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳಿವೆ ಎಂದು ಸದಾ ಟೀಕಿಸುವ ಬಿಜೆಪಿಯಲ್ಲಿ, ಇದೀಗ ತಳಮಟ್ಟದಲ್ಲಿ ಅಂಥದ್ದೇ ಆಂತರಿಕ ಬೇಗುದಿ ಶುರುವಾಗಿದೆ. ಟಿಕೆಟ್ಗಾಗಿ ನಡೆಯುತ್ತಿರುವ ಈ ಒಳಜಗಳ ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ತಮ್ಮ ಸುದೀರ್ಘ ರಾಜಕೀಯ ಹಾದಿಯ ಬಗ್ಗೆ ಮಾತನಾಡಿದ ಎಸ್. ತಿಪ್ಪೇಸ್ವಾಮಿ, “ನನ್ನ ರಾಜಕೀಯ ಜೀವನದಲ್ಲಿ ನಾನು ಒಟ್ಟು ಏಳು ಚುನಾವಣೆಗಳನ್ನು ಎದುರಿಸಿದ್ದೇನೆ. ಆ ಪೈಕಿ ಒಂದು ಚುನಾವಣೆಯಲ್ಲಿ ಮಾತ್ರ ಸೋತಿದ್ದು, ಉಳಿದ ಆರು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ. ಇಷ್ಟು ಸುದೀರ್ಘ ಅನುಭವ ನನ್ನಲ್ಲಿದೆ” ಎಂದು ತಮ್ಮ ವಿರೋಧಿ ಬಣಕ್ಕೆ ಪರೋಕ್ಷ ಟಾಂಗ್ ನೀಡಿದರು.
ಇದೇ ವೇಳೆ, ಶ್ರಾವಣ ಮಾಸದ ಹಿನ್ನೆಲೆಯಲ್ಲಿ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ದರ್ಶನ ಪಡೆದ ಅವರು, ವಿಶೇಷ ಪೂಜೆ ಸಲ್ಲಿಸಿದರು. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಮೊಳಕಾಲ್ಮೂರು ಬಿಜೆಪಿಯ ಟಿಕೆಟ್ ಕದನ ಯಾವ ತಿರುವು ಪಡೆಯಲಿದೆ ಕಾದು ನೋಡಬೇಕಿದೆ.
Leave a comment