ಚಿತ್ರದುರ್ಗ (Chitradurga Live): ಗಡಿಭಾಗದ ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಪ್ರದೇಶಕ್ಕೆ ಸೇರಿಸಬೇಕು ಎಂದು ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ನೀಡಿರುವ ಅಚ್ಚರಿಯ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ತಮ್ಮದೇ ಸರ್ಕಾರದ ವಿರುದ್ಧ ಹಾಗೂ ನಾಯಕರ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು, ಅಂಬೇಡ್ಕರ್ ಭವನದ ಸ್ಥಳ ಪರಿಶೀಲನೆ ವೇಳೆ ಆಡಿರುವ ಮಾತುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.
“ದೊಡ್ಡವರಿಗೆ ಕ್ಷೇತ್ರದ ಬಗ್ಗೆ ಗಮನವೇ ಇಲ್ಲ”
“ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಪ್ರದೇಶಕ್ಕೆ ಸೇರಿಸಲಿ. ಅದು ಸಾಧ್ಯವಾಗದಿದ್ದರೆ ಪಕ್ಕದ ಚಳ್ಳೆಕೆರೆ ವಿಧಾನಸಭಾ ಕ್ಷೇತ್ರಕ್ಕಾದರೂ ಸೇರಿಸಲಿ” ಎಂದು ಎನ್.ವೈ. ಗೋಪಾಲಕೃಷ್ಣ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
“ಮೊಳಕಾಲ್ಮೂರು ರಾಜ್ಯದ ಯಾವುದೋ ಒಂದು ಮೂಲೆಯಲ್ಲಿದೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ದೊಡ್ಡವರಿಗೆ ಗಮನವೇ ಇಲ್ಲ. ಇಲ್ಲಿನ ಶಾಸಕರಿಗೆ ಸೂಕ್ತ ಗೌರವವೂ ಸಿಗುತ್ತಿಲ್ಲ. ಒಟ್ಟಿನಲ್ಲಿ ಮೊಳಕಾಲ್ಮೂರಿನ ಹಣೆಬರಹ ಎಲ್ಲಿದ್ದಲ್ಲಿಯೇ ಇದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳ ಭರವಸೆ
ಕ್ಷೇತ್ರದ ಅಭಿವೃದ್ಧಿ ಕಡೆಗಣನೆ ಬಗ್ಗೆ ಬೇಸರ ವ್ಯಕ್ತಪಡಿಸುವ ಜೊತೆಯಲ್ಲೇ, ಅಭಿವೃದ್ಧಿಯ ಭರವಸೆಯನ್ನೂ ಶಾಸಕರು ನೀಡಿದ್ದಾರೆ. “ನೂತನ ಸಚಿವರಿಗೆ ಮಳಕಾಲಮೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಭರದಲ್ಲಿ ಶಾಸಕರು ತಮ್ಮ ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸುವಂತೆ ಹೇಳಿರುವುದು ಇದೀಗ ಚಿತ್ರದುರ್ಗ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
Leave a comment