Home ಚಿತ್ರದುರ್ಗ ಭದ್ರೆಗೆ ಮುಕ್ತವಿಚಾರ ವೇದಿಕೆ ಆನೆಬಲ | ಹೋರಾಟಕ್ಕೆ ಪತ್ರಕರ್ತರು ಪ್ರವೇಶ | ಮಲೆನಾಡು ತಪ್ಪಲಲ್ಲಿ ಅಧ್ಯಯನ ತಂಡ ಓಡಾಟ
ಚಿತ್ರದುರ್ಗ

ಭದ್ರೆಗೆ ಮುಕ್ತವಿಚಾರ ವೇದಿಕೆ ಆನೆಬಲ | ಹೋರಾಟಕ್ಕೆ ಪತ್ರಕರ್ತರು ಪ್ರವೇಶ | ಮಲೆನಾಡು ತಪ್ಪಲಲ್ಲಿ ಅಧ್ಯಯನ ತಂಡ ಓಡಾಟ

Share
Share

ವಿಶೇಷ ವರದಿ: ಗೌನಹಳ್ಳಿ ಗೋವಿಂದಪ್ಪ, ಚಿತ್ರದುರ್ಗ: ಬಯಲುಸೀಮೆ ಪ್ರದೇಶದ ಸಮಾನ ಮನಸ್ಕರು, ಪತ್ರಕರ್ತರು, ಸಾಹಿತಿಗಳು, ಹೋರಾಟಗಾರರು, ಉಪನ್ಯಾಸಕರು, ವಿದ್ಯಾರ್ಥಿ ಸಂಘಟನೆಗಳು, ವಿಚಾರವಂತರು ಒಗ್ಗೂಡಿ ಸುಮಾರು 1995ರಲ್ಲಿ ‘ಮುಕ್ತ ವಿಚಾರ ವೇದಿಕೆ’ ರಚಿಸಿಕೊಂಡು ಜನರಲ್ಲಿ ವೈಜ್ಞಾನಿಕ ಚಿಂತನೆ ಬಿತ್ತುವ ಕಾರ್ಯ ಆರಂಭಿಸಿದರು.

ಆಯಾ ಕಾಲದ ಸಮಕಾಲೀನ ವಿಷಯಗಳು ಹಾಗೂ ಜನಪರ ಚಿಂತನೆಗಳ ಕುರಿತು ತಿಂಗಳಿಗೊಮ್ಮೆ ನಗರದ ಕಾಮರ್ಸ್ ಬ್ಲಾಕ್ ಕಾಲೇಜಿನಲ್ಲಿ ಚಿಂತನಾಗೋಷ್ಠಿ ಏರ್ಪಡಿಸಲಾಗುತ್ತಿತ್ತು. ಈ ಮಧ್ಯೆ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನೌಕರರಾಗಿದ್ದ ಪ್ರಗತಿಪರ ಚಿಂತಕ ದಿವಂಗತ ಡಿ.ತಿಪ್ಪೇಸ್ವಾಮಿ (ಹೊಸಹಳ್ಳಿ), ಪತ್ರಕರ್ತ ಚಳ್ಳಕೆರೆ ಬಸವರಾಜ್ ಸೇರಿ ಕೆಲವರು ಸಂಜೆ ವೇಳೆ ಸಹಜ ಮಾತುಕತೆ ವೇಳೆ ಜಿಲ್ಲೆಯಲ್ಲಿ ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ನಡೆಯುತ್ತಿದ್ದ ಹೋರಾಟ, ಹೋರಾಟಗಾರರ ಬದ್ಧತೆ ಕುರಿತು ಚರ್ಚೆ ಮುನ್ನೆಲೆಗೆ ಬಂದಿದ್ದು, ಈ ಚಳವಳಿಗೆ ಪತ್ರಕರ್ತರು ಏಕೆ ಕೈಜೋಡಿಸಬಾರದೆಂಬ ಚಿಂತನೆ ಮೂಡಿ, ಅದು ಮುಕ್ತವಿಚಾರ ವೇದಿಕೆ ಅಂಗಳಕ್ಕೆ ಪ್ರವೇಶಿಸಿ ಬಲ ಪಡೆದುಕೊಂಡಿದ್ದು ವಿಶೇಷ.

ಈ ಚಿಂತನೆಗೆ ದಿವಂಗತ ಪ್ರೊ.ಆಂಜನೇಯಲು ಸೇರಿ ಅನೇಕ ಉಪನ್ಯಾಸಕರು, ಚಿಂತಕರು ಬೆಂಬಲವಾಗಿ ನಿಂತಿದ್ದರು. ವೇದಿಕೆ ಸಂಚಾಲಕ ನರೇನಹಳ್ಳಿ ಅರುಣ್‌ಕುಮಾರ್ ಸೇರಿ ಅನೇಕ ಪ್ರಮುಖರು ಈ ವಿಷಯವನ್ನು ಕವಿ ಡಾ.ಬಂಜಗೆರೆ ಜಯಪ್ರಕಾಶ್ ಅವರೊಂದಿಗೆ ಚರ್ಚಿಸಿ, ಬಯಲುಸೀಮೆಯ ಬರಗಾಲದ ಸಮಸ್ಯೆ ನಿವಾರಿಸಲು, ನೀರಾವರಿ ಯೋಜನೆ ಜಾರಿಗಾಗಿ ಹೋರಾಟ ಕೈಗೊಳ್ಳುವ ಕುರಿತು ಗಂಭೀರ ಚಿಂತನೆ ನಡೆಸಿದರು.

ನಿರಂತರ ಚರ್ಚೆ, ಚಿಂತನೆ ನಂತರ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಹೋರಾಟ ಕೈಗೆತ್ತಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬರಲಾಯಿತು. ಆದರೆ, ಅದಕ್ಕಿಂತಲೂ ಮುಂಚಿತವಾಗಿ ಯೋಜನೆಯ ಸಾಧಕ-ಬಾಧಕ ಕುರಿತು ಅಧ್ಯಯನ ನಡೆಸುವುದು ಅಗತ್ಯವೆಂದು ನಿರ್ಣಯಿಸಿ, ಅದರಂತೆ ಕವಿ, ಹೋರಾಟಗಾರ ಡಾ.ಬಂಜಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ಪತ್ರಕರ್ತರು ಅಧ್ಯಯನ ಪ್ರವಾಸ ಕೈಗೊಂಡರು. ಅಧ್ಯಯನ ಪ್ರವಾಸಕ್ಕೆ 15 ಸಾವಿರ ರೂ. ಆರ್ಥಿಕ ನೆರವು ಒದಗಿಸಿದ್ದು ಎಸ್ಕಾರ್ಟ್ ಟ್ರ್ಯಾಕ್ಟರ್ ಏಜೆನ್ಸಿಯ ಕೆ.ಆರ್.ನಾರಪ್ಪ, ಕೆ.ಆರ್.ದಯಾನಂದ್.

ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಭದ್ರಾ ಮೇಲ್ದಂಡೆ ಯೋಜನೆಯ ವ್ಯಾಪ್ತಿ ಪ್ರದೇಶದಲ್ಲಿ ತಂಡ ಅಲೆದಾಟ ನಡೆಸಿ, ಯೋಜನೆ ಹೇಗೆ ಜಾರಿ ಸಾಧ್ಯ, ನೀರು ಲಭ್ಯತೆ, ಯಾವ ಮೂಲ, ಪ್ರದೇಶದಿಂದ ಬಯಲುಸೀಮೆಗೆ ನೀರು ಹರಿಸಬಹುದು ಹಾಗೂ ಯೋಜನೆಗೆ ವಿರೋಧಿಸುತ್ತಿದ್ದ ಮಲೆನಾಡು ಪ್ರದೇಶದ ಚಿಂತಕರು, ಹೋರಾಟಗಾರರನ್ನು ಖುದ್ದಾಗಿ ಭೇಟಿ ಮಾಡಿ ಮಾಹಿತಿ ಪಡೆಯಲಾಯಿತು. ಇದಕ್ಕೂ ಮೊದಲು ಮತ್ತು ಅಧ್ಯಯನದ ಬಳಿಕ ಈ ತಂಡ ಖ್ಯಾತ ಇಂಜಿನಿಯರ್ ಪರಮಶಿವಯ್ಯ ಅವರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಪದೇ ಪದೆ ಅವರೊಂದಿಗೆ ನೀರಾವರಿ ಯೋಜನೆಗಳ ಕುರಿತು ಮಾಹಿತಿ ಪಡೆಯುವ ಜೊತೆಗೆ ಸುದೀರ್ಘ ಚರ್ಚೆ ನಡೆಸಲಾಗುತ್ತಿತ್ತು.

ಮಲೆನಾಡು ಪ್ರದೇಶದ ಜನರ ಭಾವನೆಗೆ ಧಕ್ಕೆ ಆಗದ ರೀತಿ, ಪರಿಸರಕ್ಕೆ ಹೆಚ್ಚು ನಾಶ ಮಾಡದೆ ಬಯಲುಸೀಮೆ ಪ್ರದೇಶದ ಭೂಮಿಗೆ ಭದ್ರೆ ನೀರುಣಿಸಬಹುದು. ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಬಹುದು. ಇದಕ್ಕೆ ಜನಪ್ರತಿನಿಧಿಗಳಲ್ಲಿ ಬದ್ಧತೆ ಅಗತ್ಯ. ಈ ನಿಟ್ಟಿನಲ್ಲಿ ಬಯಲುಸೀಮೆ ಪ್ರದೇಶದಲ್ಲಿ ಜನಾಂದೋಲನ ರೂಪಿಸಬೇಕು. ಅದಕ್ಕಾಗಿ ಎಲ್ಲರನ್ನೊಳಗೊಂಡ ಬಹುದೊಡ್ಡ ಸಮಿತಿ ಅಸ್ತಿತ್ವ ಅಗತ್ಯವೆಂದು ಅಧ್ಯಯನ ತಂಡ ಮನಗಂಡು, ಆ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಿಟ್ಟಿತು.

ಅದರ ಫಲವೇ ಬಸವ ಮಂಟಪದಲ್ಲಿ ಹೋರಾಟಗಾರರು, ಚಿಂತಕರು, ಹಾಲಿ-ಮಾಜಿ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪ್ರಮುಖರ ಸಭೆ 1996ರ ಅಂತ್ಯದಲ್ಲಿ ನಡೆಯಿತು. ಈ ಸಂಬಂಧ ಮುಕ್ತವಿಚಾರ ವೇದಿಕೆ ವತಿಯಿಂದ ಖುದ್ದಾಗಿ ನರೇನಹಳ್ಳಿ ಅರುಣ್‌ಕುಮಾರ್ – ಚಿಕ್ಕಪ್ಪನಹಳ್ಳಿ ಷಣ್ಮುಖ ಪ್ರಮುಖರಿಗೆ ಪತ್ರ ಬರೆದು ಆಹ್ವಾನಿಸುವ ಪ್ರಕ್ರಿಯೆ ಕೈಗೊಂಡರು.

ಪೂರ್ವಭಾವಿ ಸಭೆ ಯಶಸ್ವಿ

ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಸಮಿತಿ ರಚಿಸುವ ಸಂಬಂಧ ಬಸವಮಂಟಪದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು. ಕಾರ್ಮಿಕ, ರೈತ, ಕನ್ನಡಪರ ಸೇರಿ ವಿವಿಧ ಸಂಘಟನೆಗಳ 250ಕ್ಕೂ ಪ್ರಮುಖರು ಪಾಲ್ಗೊಂಡು ಹೋರಾಟದ ಕಿಚ್ಚಿನ ದೀಪ ಹಚ್ಚಿದರು. ಅದು ಸಮಿತಿ ರಚನೆ, ಹೋರಾಟದ ಕಹಳೆ ಮೊಳಗಿಸಲು ಬಹುದೊಡ್ಡ ಬೆಳಕಾಯಿತೆಂಬುದೇ ವಿಶೇಷ.

ಚಿಂತನೆಯ ಮೊಳಕೆ

ಚಿತ್ರದುರ್ಗ ಜಿಲ್ಲೆಯಲ್ಲಿ ವೈಚಾರಿಕ ಚಿಂತನೆ ಬೀಜ ಬಿತ್ತುವ ಜೊತೆಗೆ ಅಂದಿನ ಪ್ರಸ್ತುತ ವಿಷಯಗಳನ್ನು ಚರ್ಚಿಸಲು ಮುಕ್ತವಿಚಾರ ವೇದಿಕೆ ಆರಂಭಿಸುವಲ್ಲಿ ಬಂಜಗೆರೆ ಜಯಪ್ರಕಾಶ್, ಡಿ.ತಿಪ್ಪೇಸ್ವಾಮಿ, ದೊಣೆಹಳ್ಳಿ ಗುರುಮೂರ್ತಿ ಪಾತ್ರ ಹಿರಿದು. ಪ್ರವಾಸಿ ಮಂದಿರದಲ್ಲಿ ವೇದಿಕೆ ಆರಂಭಿಸುವ ಚಿಂತನೆಯ ಮೊಳಕೆ ಮೂಡಿದ್ದು, ಅಂದಿನ ಸಭೆಯಲ್ಲಿ ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ಮೆ.ನಾ.ಅಹೋಬಳಪತಿ ಸೇರಿ ಅನೇಕರು ಉಪಸ್ಥಿತರಿದ್ದರು. ಬಳಿಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಜೋಗಿಮಟ್ಟಿ ಮಹೇಶಬಾಬು ಸೇರಿ ಅನೇಕರು ಸೇರ್ಪಡೆಗೊಂಡು ವೇದಿಕೆ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮುಂಚೂಣಿಯಲ್ಲಿ ನಿಂತರು.

Share
Written by
Prashanth Kumar N - Editor

ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ. ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Leave a comment

Leave a Reply

Your email address will not be published. Required fields are marked *

Loading News...

More News

Related Articles

ಚಿತ್ರದುರ್ಗ: ಸಾಧಕರಿಗೆ ಪ್ರತಿಷ್ಠಿತ ‘ಗೊರುಚ ದತ್ತಿ ಪ್ರಶಸ್ತಿ’ ಪ್ರದಾನ; ನಾಲ್ವರು ಗಣ್ಯರಿಗೆ ಗೌರವ

ಚಿತ್ರದುರ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ...

ಚಿತ್ರದುರ್ಗ ನೀರಾವರಿ ಹೋರಾಟ: ‘ಮುಕ್ತವಿಚಾರ ವೇದಿಕೆ’ಯ ಭದ್ರಾ ಮೇಲ್ದಂಡೆ ಚಳವಳಿಯ ಇತಿಹಾಸ

ಬರಹ: ಗೌನಹಳ್ಳಿ ಗೋವಿಂದಪ್ಪ ಚಿತ್ರದುರ್ಗ: ಏಳುಸುತ್ತಿನಕೋಟೆಯ ಗತ್ತು ಇದೆ, ಕಲ್ಲಿನ ಗೋಡೆಗಳಲ್ಲಿ ಅಡಗಿರುವ ರಣ ಕಲಾವಿದರ...

ಚಿತ್ರದುರ್ಗದ ಮೂರು ತಾಲ್ಲೂಕುಗಳು ಶೀಘ್ರವೇ ಬರ ಪಟ್ಟಿಗೆ ಸೇರ್ಪಡೆ: ಸಚಿವ ಟಿ.ರಘುಮೂರ್ತಿ ಸ್ಪಷ್ಟನೆ

ಚಿತ್ರದುರ್ಗ (Chitradurga Live News): ಜಿಲ್ಲೆಯ ಬಿಟ್ಟುಹೋಗಿರುವ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳು ಮುಂದಿನ...

ಕೋಟೆನಾಡಿಗೆ ಮತ್ತೊಂದು ಗರಿ: ಕುವೆಂಪು ಭಾಷಾ ಭಾರತಿ ಪ್ರಶಸ್ತಿಗೆ ಡಾ.ಬಂಜಗೆರೆ ಜಯಪ್ರಕಾಶ್ ಆಯ್ಕೆ

ಚಿತ್ರದುರ್ಗ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಚಿತ್ರದುರ್ಗದ ಹೆಮ್ಮೆಯ...