ಚಿತ್ರದುರ್ಗ: ಮೊಬೈಲ್ ಬಳಕೆಗೆ ಸೀಮಿತ ಹಾಕಿಕೊಂಡು ಯುವಜನರು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರೀಡಾಂಗಣಕ್ಕೆ ಬಂದು ಆಟವಾಡುವುದರಿಂದ ದೈಹಿಕ ಆರೋಗ್ಯದ ಜತೆಗೆ ಮನಸ್ಸಿಗೂ ಉಲ್ಲಾಸ ದೊರೆಯುತ್ತದೆ. ಕ್ರೀಡೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಪೂರಕವಾಗಿದೆ ಎಂದು ಹಿರಿಯ ಪತ್ರಕರ್ತ ವೀರೇಂದ್ರಕುಮಾರ್ ಕೋಗುಂಡೆಮಠ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಖೋ ಖೋ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮತ್ತು ಯುವಜನರು ಹೆಚ್ಚಿನ ಸಮಯವನ್ನು ಮೊಬೈಲ್ ಫೋನ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಾರೆ. ಇದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಮೊಬೈಲ್ ಬಳಕೆಗೆ ಅಗತ್ಯವಿರುವಷ್ಟು ಸಮಯ ಮೀಸಲಿಟ್ಟು ಉಳಿದ ಸಮಯವನ್ನು ಕ್ರೀಡೆ, ಓದು ಹಾಗೂ ಇತರ ಸೃಜನಶೀಲ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು ಎಂದರು.
ಕ್ರೀಡಾಂಗಣಕ್ಕೆ ಬಂದಾಗ ಗೆಲುವು–ಸೋಲಿಗಿಂತ ಮುಖ್ಯವಾಗಿ ಶಿಸ್ತು, ಸಮಯಪ್ರಜ್ಞೆ, ಏಕಾಗ್ರತೆ, ತಂಡದೊಂದಿಗೆ ಹೊಂದಾಣಿಕೆ ಹಾಗೂ ಸೋಲನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಖೋ ಖೋ ಆಟದಲ್ಲಿ ಕ್ಷಣಾರ್ಧದಲ್ಲಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಅಗತ್ಯವಿದ್ದು, ಇದರಿಂದ ಮಕ್ಕಳಲ್ಲಿ ಚುರುಕುತನ ಮತ್ತು ಏಕಾಗ್ರತೆ ಹೆಚ್ಚುತ್ತದೆ. ಇಂತಹ ಗುಣಗಳು ಶೈಕ್ಷಣಿಕ ಬದುಕಿನಲ್ಲಿಯೂ ನೆರವಾಗುತ್ತವೆ ಎಂದು ತಿಳಿಸಿದರು.
ಖೋ ಖೋ ದೇಶದ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಪ್ರಮುಖವಾದುದು. ಗ್ರಾಮೀಣ ಭಾಗದಲ್ಲಿ ಈ ಆಟಕ್ಕೆ ಉತ್ತಮ ನೆಲೆ ಇದ್ದರೂ, ಆಧುನಿಕ ಜೀವನಶೈಲಿಯ ಪರಿಣಾಮ ಯುವಜನರ ಆಸಕ್ತಿ ಇತರ ಕ್ರೀಡೆಗಳತ್ತ ಹಾಗೂ ಮೊಬೈಲ್ ಬಳಕೆಯತ್ತ ಹೆಚ್ಚು ತಿರುಗುತ್ತಿದೆ. ಖೋ ಖೋ ಉಳಿಸಿ ಬೆಳೆಸಲು ಯುವ ಕ್ರೀಡಾಪಟುಗಳ ನಿರಂತರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಹೇಳಿದರು.
ಶಾಲಾ–ಕಾಲೇಜುಗಳಲ್ಲಿ ಹೆಚ್ಚಿನ ಖೋ ಖೋ ಪಂದ್ಯಾವಳಿಗಳನ್ನು ಆಯೋಜಿಸಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಬೇಕು. ಅವರಿಗೆ ಉತ್ತಮ ತರಬೇತಿ, ಅಗತ್ಯ ಸೌಲಭ್ಯ ಮತ್ತು ಪ್ರೋತ್ಸಾಹ ದೊರೆತರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಯುವಜನರು ಮೊಬೈಲ್ ಪರದೆಗೆ ಸೀಮಿತರಾಗದೆ ಕ್ರೀಡಾಂಗಣದತ್ತ ಹೆಜ್ಜೆ ಹಾಕಬೇಕು. ಕ್ರೀಡೆ ಆರೋಗ್ಯದ ಜತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾದ ವೆಂಕಟೇಶ್ , ಯುವ ಮುಖಂಡ ಜಿತೇಂದ್ರ, ಹಿರಿಯ ಕ್ರೀಡಾಪಟು ಸಿದ್ದರಾಜು ಇದ್ದರು.
Leave a comment