ಚಿತ್ರದುರ್ಗ: ಜಿಲ್ಲೆಯ ನೀರಾವರಿ ಹೋರಾಟದ ಇತಿಹಾಸದಲ್ಲಿ ಕೆಲವು ದಿನಾಂಕಗಳು ಕೇವಲ ಕ್ಯಾಲೆಂಡರ್ನ ದಿನಗಳಲ್ಲ, ಅವು ಜನರ ಎದೆಯಲ್ಲಿ ಬರೆದಿಟ್ಟ ಹೋರಾಟದ ಶಾಸನಗಳು. ಅಂತಹ ಒಂದು ಶಾಸನವೇ 2006ರ ಆಗಸ್ಟ್ 23.
ಆ ದಿನ ಹಿರಿಯೂರಿನಲ್ಲಿ ಸೂರ್ಯೋದಯ ಎಂದಿನಂತೆ ಆಗಿರಲಿಲ್ಲ. ಶಾಲೆಯ ಪ್ರಾರ್ಥನೆ ಘಂಟೆ ಬಾರಿಸಲಿಲ್ಲ. ಕಾಲೇಜಿನ ತರಗತಿಗಳು ಖಾಲಿ ಖಾಲಿ. ಬಸ್ ನಿಲ್ದಾಣದಲ್ಲಿ ಜನಜಂಗುಳಿ. ಆದರೆ, ಅದು ಪ್ರಯಾಣಕ್ಕೆ ಅಲ್ಲ, ಪ್ರತಿಭಟನೆಗೆ. ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದರೇ, ಜನರ ಮನಸ್ಸಿನ ಬಾಗಿಲು ತೆರೆದಿತ್ತು. ಕಾರಣ ಒಂದೇ— ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತರಬೇಕು.
ಬಯಲುಸೀಮೆಯ ಬದುಕು ಅಂದು ಅಕ್ಷರಶಃ ಬಾಯಾರಿತ್ತು. ವಾಣಿ ವಿಲಾಸ ಸಾಗರ (ಮಾರಿಕಣಿವೆ) ನೆಲ ಕಾಣುತ್ತಿತ್ತು. ಜಿಲ್ಲೆಯ ನೂರಾರು ಕೆರೆಗಳು ಬಿರುಕು ಬಿಟ್ಟಿದ್ದವು. ರೈತನ ಹೊಲದಲ್ಲಿ ಬೆಳೆ ಇಲ್ಲ, ದನಕರುಗಳಿಗೆ ಮೇವು ಇಲ್ಲ, ಮನೆ ಮನೆಗೆ ಕುಡಿಯುವ ನೀರಿಗೂ ಹಾಹಾಕಾರ. ದಶಕಗಳಿಂದ ಸರ್ಕಾರಗಳು ಭದ್ರಾ ನೀರಿನ ಭರವಸೆ ಕೊಡುತ್ತಲೇ ಬಂದಿದ್ದವು, ಆದರೆ ಅದು ಕಡತದಲ್ಲೇ ನೇತಾಡುತ್ತಿತ್ತು.
ಈ ನೋವನ್ನು ಇನ್ನು ಸಹಿಸಲು ಆಗದ ವಿದ್ಯಾರ್ಥಿಗಳು, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ “ಒಂದು ದಿನ ನಿಮ್ಮ ಕೆಲಸ, ನಿಮ್ಮ ಶಾಲೆ ಬದಿಗಿಟ್ಟು, ಭವಿಷ್ಯಕ್ಕಾಗಿ ಬೀದಿಗಿಳಿಯಿರಿ’’ ಎಂಬ ಐತಿಹಾಸಿಕ ಕರೆಗೆ ಹಿರಿಯೂರು ಶಾಲಾ-ಕಾಲೇಜ್ಗಳು ಸ್ತಬ್ಧವಾಗಿದ್ದವು.
ಸಹಸ್ರಾರು ವಿದ್ಯಾರ್ಥಿಗಳು, ಶಿಕ್ಷಕರು, ರೈತರು, ಕಾರ್ಮಿಕರು, ವಿವಿಧ ಪಕ್ಷದ ಕಾರ್ಯಕರ್ತರು, ಮುಖಂಡರು ಬೀದಿಗಿಳಿದಿದ್ದರು. ಇಡೀ ಜಿಲ್ಲೆಯೇ ತಿರುಗಿ ನೋಡುವ ರೀತಿ ಭದ್ರಾ ಚಳವಳಿ ಕಾವು ಏರಿತ್ತು.
ಶ್ರೀ ಶಿವಮೂರ್ತಿ ಶರಣರು, ಶ್ರೀ ಶಾಂತವೀರ ಸ್ವಾಮೀಜಿ
ಈ ಹೋರಾಟದ ಅತ್ಯಂತ ದೊಡ್ಡ ಶಕ್ತಿ ಮತ್ತು ಆಕರ್ಷಣೆ ಎಂದರೆ, ಇದು ಯಾವುದೇ ಒಂದು ಪಕ್ಷದ, ಒಂದು ಜಾತಿಯ ಹೋರಾಟವಾಗಿರಲಿಲ್ಲ, ಸರ್ವಧರ್ಮದ ಸಮ್ಮಿಲನವಾಗಿತ್ತು. ಹೋರಾಟದ ಪ್ರತಿ ಹೆಜ್ಜೆಯಲ್ಲೂ ಕಾರ್ಯಕರ್ತರಂತೆ ಪಾಲ್ಗೊಳ್ಳುತ್ತಿದ್ದ ಮುರುಘ ಮಠದ ಶ್ರೀ ಶಿವಮೂರ್ತಿ ಶರಣರು, ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ವಿದ್ಯಾರ್ಥಿಗಳಲ್ಲಿ ಹೋರಾಟದ ಕಿಚ್ಚನ್ನು ಹೆಚ್ಚಿಸುವ ರೀತಿ ಮಾತುಗಳನ್ನು ಹೊರಹೊಮ್ಮಿಸಿದರು.
ಆದಿಜಾಂಬವ ಮಠದ ಶ್ರೀ ರುದ್ರಾಕ್ಷಿ ದೇಶೀಕೇಂದ್ರ ಮುನಿ ಸ್ವಾಮೀಜಿ, ಜಾಮೀಯಾ ಮಸೀದಿಯ ಧರ್ಮಗುರು ಹಾಫೀಜ್ ಸಿಬ್ಘತ್ ಉಲ್ಲಾ, ಅಸಂಷನ್ ಚರ್ಚ್ನ ಫಾದರ್ ಸಾನ್ನಿಧ್ಯ, ಹೋರಾಟ ಸಮಿತಿಯ ಅಧ್ಯಕ್ಷ ಎಂ.ಜಯಣ್ಣ, ಕಾರ್ಯಾಧ್ಯಕ್ಷ ಮುರುಘ ರಾಜೇಂದ್ರ ಒಡೆಯರ್ ಹಾಗೂ ಸಂಚಾಲಕರು ಸಾರಥ್ಯ ವಹಿಸಿದ್ದರು.
ಜನರ ಜೀವನ್ಮರಣದ ಪ್ರಶ್ನೆ ಎಂಬ ಸತ್ಯದರ್ಶನ
ವಿದ್ಯಾರ್ಥಿಗಳ ಒಂದು ದಿನದ ಹೋರಾಟ ಸರ್ಕಾರದ ಗಮನಸೆಳೆಯುವಂತಿತ್ತು. ಭದ್ರಾ ಮೇಲ್ದಂಡೆ ಯೋಜನೆ ಎಂದರೆ ಅದು ಕೇವಲ ಒಂದು ಯೋಜನೆ ಅಲ್ಲ, ಅದು ಲಕ್ಷಾಂತರ ಜನರ ಜೀವನ್ಮರಣದ ಪ್ರಶ್ನೆ ಎಂಬ ಸತ್ಯದರ್ಶನ ಮಾಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಿದರು.
ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಾರಥ್ಯ, ಧರ್ಮಗುರುಗಳ ಸಾನ್ನಿಧ್ಯ, ವಿವಿಧ ಪಕ್ಷದ ಸಹಕಾರದೊಂದಿಗೆ ಅಂದು ಚಳವಳಿಗೆ ಶಕ್ತಿತುಂಬಿದ ವಿದ್ಯಾರ್ಥಿಗಳ ಹೋರಾಟದ ಫಲ ಇಂದು ಹಿರಿಯೂರಿನ ಕೆಲವು ಕೆರೆಗಳಿಗೆ ಭದ್ರಾ ನೀರು ಹರಿದು ಬಂದಿದೆ.
ಆ ದಿನ ತೋರಿಸಿಕೊಟ್ಟ ಪಾಠ ಸ್ಪಷ್ಟವಾಗಿತ್ತು. ಪಕ್ಷ, ಜಾತಿ, ಧರ್ಮ ಮರೆತು ನೀರಿಗಾಗಿ ಒಂದಾದರೆ, ಸರ್ಕಾರವೇನು, ಇತಿಹಾಸವನ್ನೇ ಬದಲಿಸಬಹುದೆಂಬ ಸಂದೇಶ ವಿದ್ಯಾರ್ಥಿಗಳ ಹೋರಾಟದಲ್ಲಿ ಅಡಗಿತ್ತು.
ನೀರೂ ಎಲ್ಲರಿಗೂ ಬೇಕು
ಹೋರಾಟಗಾರರ ಮಾತು
“
ನಾನು, ಚಮನ್ ಷರೀಫ್ ಸೇರಿ ಅನೇಕರು ವಿದ್ಯಾರ್ಥಿ ಚಳವಳಿ ಸಂಘಟಿಸಿದ್ದೆವು. ಅಲ್ಲಿನ ಘೋಷಣೆಗಳಲ್ಲಿ ರಾಜಕೀಯ ಇರಲಿಲ್ಲ, ನಮ್ಮಗಳ ಕಣ್ಣಲ್ಲಿ ಭವಿಷ್ಯದ ಭಯ ಇತ್ತು. ಹೊಲದಲ್ಲಿ ನೀರಿಲ್ಲದೆ ಅನ್ನದಾತ ಅಳುತ್ತಿದ್ದಾನೆ, ಇಂತಹ ವೇಳೆ ನಾವು ಮೌನವಾಗಿದ್ದರೆ ದ್ರೋಹ ಬಗೆದಂತೆ ಎಂದು ಭಾವಿಸಿ ಹೋರಾಟ ಸಮಿತಿ ಕರೆಗೆ ಬೀದಿಗಿಳಿದಿದ್ದೆವು.
— ಮಾಲತೇಶ್ ಅರಸ್
👥 ಚಳವಳಿ ಮುನ್ನಡೆಸಿದವರು
ಆದಿಜಾಂಬವ ಮಠದ ಪೀಠಾಧ್ಯಕ್ಷರಾಗಿರುವ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಅವರು ಪೂರ್ವಾಶ್ರಮದಲ್ಲಿ (ಜೆ.ಆರ್.ಷಡಕ್ಷರಮುನಿ) ನಮ್ಮೆಲ್ಲರ ವಿದ್ಯಾರ್ಥಿ ನಾಯಕರಾಗಿದ್ದರು. ಅವರೊಂದಿಗೆ ಮಾಲತೇಶ್ ಅರಸ್, ಅಸ್ಗರ್ ಅಹಮದ್, ಎಂ.ಎಲ್.ಗಿರಿಧರ, ವಿ.ಅರುಣಕುಮಾರ್ ಬಬ್ಬೂರು, ಕೃಷ್ಣಮೂರ್ತಿ, ಪ್ರತಾಪ್, ಮಹಮದ್ ಫಕ್ರುದ್ದೀನ್, ಎಸ್.ಆರ್.ಲೇಪಾಕ್ಷ, ವೆಂಡರ್ ರಹೀಂ, ಎನ್.ಎಲ್.ಬಸವರಾಜು, ಶಂಭು, ಎಂ.ಜಿ.ರಂಗಸ್ವಾಮಿ, ದಿವಂಗತರಾದ ಎಚ್.ಎಚ್.ಸಿದ್ದೇಶ್ಕುಮಾರ್, ಗೂಳ್ಯದ ಶಿವಣ್ಣ, ರಾಜಣ್ಣಶೆಟ್ಟಿ, ಗೌಡ ಹೀಗೆ ನೂರಾರು ಮಂದಿ ಪಾಲ್ಗೊಂಡಿದ್ದರು ಎನ್ನುತ್ತಾರೆ ಚಮನ್ ಷರೀಫ್.
ಮೊಳಗಿದವು ಘೋಷಣೆಗಳು
ಬೆಳಗ್ಗೆ 10ಕ್ಕೆ ಹಿರಿಯೂರಿನ ಗಾಂಧಿ ವೃತ್ತದಲ್ಲಿ ಜನಸ್ತೋಮ. ಎಲ್ಲೆಡೆ ವಿದ್ಯಾರ್ಥಿಗಳು. ಮಹಿಳೆಯರು, ರೈತರ ಸಾಥ್. ಭದ್ರಾ ಯೋಜನೆ ಜಾರಿಯಾಗಲೇಬೇಕೆಂಬ ಘೋಷಣೆಗಳು ಮಾರ್ದನಿಸಿದವು. ಸಮಾವೇಶದಲ್ಲಿ ಮಾತನಾಡಿದ ಎಲ್ಲ ಸ್ವಾಮೀಜಿಗಳು, ಮೌಲ್ವಿಗಳು, ಫಾದರ್ಗಳು ಇನ್ನು ಕಾಲಹರಣ ಮಾಡಿದರೆ, ಇಡೀ ಜಿಲ್ಲೆಯೇ ಬೀದಿಗಿಳಿಯುತ್ತದೆ ಎಂಬ ಒಕ್ಕೊರಲಿನಿಂದ ಎಚ್ಚರಿಕೆ ಸಂದೇಶ ಸರ್ಕಾರಕ್ಕೆ ರವಾನಿಸಿದರು ಎನ್ನುತ್ತಾರೆ ಎಸ್.ಆರ್.ಲೇಪಾಕ್ಷ.