ದಾವಣಗೆರೆ: “ಯತಿಗಳು ಹಾಗೂ ಸಾಧಕರ ಜೀವನ ಸುಲಭವಾಗಿರುವುದಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ಸವಾಲುಗಳು ಹಾಗೂ ಸಮಸ್ಯೆಗಳು ಎದುರಾಗುತ್ತವೆ. ಆ ಸಮಸ್ಯೆಗಳಿಗೆ ಯಾರೂ ಹೆದರಬಾರದು. ಅವುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆದಾಗ ಮಾತ್ರ ನಿಜವಾದ ಸಾಧನೆ ಸಾಧ್ಯ,” ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ನಗರದ ಶಿವಯೋಗಿ ಮಂದಿರದಲ್ಲಿ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಲಿಂ. ಶ್ರೀಜಯದೇವ ಮುರುಘಾರಾಜೇಂದ್ರ ಮಹಾಸ್ವಾಮಿಗಳವರ 70ನೇ ವರ್ಷದ ಸ್ಮರಣೋತ್ಸವ ಹಾಗೂ ಮಹಾರಥೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ವೇಷದಲ್ಲಿ ಬಂದಿದ್ದ ಜಗದ್ಗುರುಗಳು
ಜಯದೇವ ಜಗದ್ಗುರುಗಳ ಜೀವನದ ರೋಚಕ ಕ್ಷಣಗಳನ್ನು ಮೆಲುಕು ಹಾಕಿದ ಶರಣರು, “ಬ್ಯಾಡಗಿಯಿಂದ ಚಿತ್ರದುರ್ಗ ಪೀಠಕ್ಕೆ ಆಗಮಿಸುವ ಸಂದರ್ಭದಲ್ಲಿ ಶ್ರೀಜಯದೇವ ಗುರುಗಳಿಗೆ ಪ್ರಾಣಬೆದರಿಕೆ ಸೇರಿದಂತೆ ಹಲವು ಬೆದರಿಕೆಗಳು ಎದುರಾಗಿದ್ದವು. ಈ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಅವರು ಪೊಲೀಸ್ ಇನ್ಸ್‌ಪೆಕ್ಟರ್ ಅವರ ಸಮವಸ್ತ್ರ ಧರಿಸಿ ಚಿತ್ರದುರ್ಗಕ್ಕೆ ಆಗಮಿಸಿದ್ದರು,” ಎಂಬ ಐತಿಹಾಸಿಕ ಮಾಹಿತಿಯನ್ನು ಹಂಚಿಕೊಂಡರು.
ಅಲ್ಲದೆ, ಕರೊನಾ ಸಮಯದಲ್ಲಿ ಮ್ಯೂಸಿಯಂ ವ್ಯವಸ್ಥೆಗೊಳಿಸುವಾಗ ಶ್ರೀಗಳು ಬಳಸುತ್ತಿದ್ದ ಹಾಸಿಗೆಯನ್ನು ಪರಿಶೀಲಿಸಿದಾಗ, ಅದರೊಳಗೆ ಸ್ವರಕ್ಷಣೆಗಾಗಿ ಇಟ್ಟಿದ್ದ ಬೆಳ್ಳಿಯ ಚೂರಿಯೊಂದು ಪತ್ತೆಯಾಗಿತ್ತು ಎಂದು ತಿಳಿಸಿದರು.
ಶರಣರಿಗೆ ಶ್ರೀರಕ್ಷೆಯಾಗಿ ನಿಂತಿದ್ದ ಜಗದ್ಗುರುಗಳು
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದಾವಣಗೆರೆ ವಿರಕ್ತಮಠದ ಡಾ. ಶ್ರೀಬಸವಪ್ರಭು ಸ್ವಾಮೀಜಿ, “ಸಂಕಷ್ಟದ ಸಂದರ್ಭದಲ್ಲಿ ಮುರುಘಾ ಶರಣರಿಗೆ ರಕ್ಷೆಯಾಗಿ ನಿಂತವರು ಜಯದೇವ ಜಗದ್ಗುರುಗಳು. ಅವರು ಮುರುಘಾ ಮಠ ಹಾಗೂ ಶೂನ್ಯ ಪೀಠವನ್ನು ಕಾಪಾಡಿರುವುದು ಅವರ ಪವಾಡವಲ್ಲದೆ ಮತ್ತೇನು? ಶ್ರೀಜಯದೇವ ಜಗದ್ಗುರುಗಳ ಆಶೀರ್ವಾದ ಹಾಗೂ ಅವರ ವ್ಯಕ್ತ-ಅವ್ಯಕ್ತ ಶಕ್ತಿ ಸದಾ ಈ ಮುರುಘಾ ಶರಣರ ಮೇಲಿದೆ. ಶ್ರೀಗಳ ಜೀವನವು ಅನೇಕ ಸವಾಲುಗಳು, ಸಂಕೀರ್ಣ ಸಂದರ್ಭಗಳು ಮತ್ತು ಆಪತ್ತುಗಳಿಂದ ಕೂಡಿದ್ದರೂ, ಅವರು ಸದಾ ಭಕ್ತರ ರಕ್ಷಕರಾಗಿದ್ದರು,” ಎಂದು ಸ್ಮರಿಸಿದರು.
ಜಯದೇವ ಜಗದ್ಗುರುಗಳ ಆಶೀರ್ವಾದದಿಂದಲೇ ಮುರುಘಾ ಶರಣರು ಹಲವು ಸವಾಲು ಹಾಗೂ ಸಂಕಷ್ಟಗಳನ್ನು ಎದುರಿಸಿ ಗೆದ್ದು ಬಂದಿದ್ದಾರೆ. ಅತ್ಯಂತ ಕಷ್ಟದ ಸಂದರ್ಭಗಳಲ್ಲಿಯೂ ಶರಣರು ವೈಯಕ್ತಿಕ ವಿಚಾರಗಳಿಗಿಂತ ಮಠದ ಅಭಿವೃದ್ಧಿ ಹಾಗೂ ಸಮಾಜದ ಹಿತದ ಬಗ್ಗೆಯೇ ಚಿಂತಿಸುತ್ತಿದ್ದರು ಎಂದು ಬಣ್ಣಿಸಿದರು.
ಜಯದೇವ ಜಗದ್ಗುರುಗಳು ಪವಾಡ ಪುರುಷರು, ಮಹಾನ್ ಶಿವಯೋಗಿಗಳು. ತಮ್ಮನ್ನು ಗೌರವಿಸಿ ಕಾಣಿಕೆಯಾಗಿ ನೀಡಿದ ಸುಮಾರು 9 ಕೋಟಿ ರೂ. ಹಣವನ್ನು ವೈಯಕ್ತಿಕ ಬಳಕೆಗೆ ಬಳಸದೆ ಸಮಾಜದ ಏಳಿಗೆಗೆ ಸಮರ್ಪಿಸಿದ ಮಹಾಶರಣರು. ಕೇವಲ ಮಠವನ್ನು ಶ್ರೀಮಂತಗೊಳಿಸದೆ, ಉಚಿತ ಪ್ರಸಾದ ನಿಲಯಗಳನ್ನು ಆರಂಭಿಸಿ ಹಸಿದವರಿಗೆ ಅನ್ನ ನೀಡಿದರು ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸಿದರು ಎಂದು ಶ್ರೀಬಸವಪ್ರಭು ಸ್ವಾಮೀಜಿ ಸ್ಮರಿಸಿದರು.
ಜಯದೇವ ಜಗದ್ಗುರುಗಳ ಸೇವಾ ಪರಂಪರೆಯೇ ಇಂದು ಮುರುಘಾ ಮಠದ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೇರಣೆಯಾಗಿದೆ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ನಿಜವಾದ ಗುರುಸೇವೆ ಎಂದರು.