ಚಿತ್ರದುರ್ಗ (ಸೆ. 30): ಸ್ವಾತಂತ್ರ್ಯದ ನಂತರ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರು. ಹಾಗೆಯೇ ರಾಜ್ಯದಲ್ಲೂ ಬಿ. ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳ ಹಾಗೂ ಒಳಮೀಸಲಾತಿ ವರ್ಗೀಕರಣದ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ. ವೈ. ವಿಜಯೇಂದ್ರ ಗುಡುಗಿದ್ದಾರೆ.
ಭಾರತೀಯ ಜನತಾ ಪಾರ್ಟಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ, ನಗರ ಮಂಡಲದ ವತಿಯಿಂದ ನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ‘ಮಾದಿಗ ಕಾರ್ಯಕರ್ತರ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಿತರ ಕಣ್ಣೀರು ಒರೆಸುವ ಆಶಯ ಕಾಂಗ್ರೆಸ್‌ಗಿಲ್ಲ
ಈ ಹಿಂದೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಮಾದಿಗ ಸಮುದಾಯಕ್ಕೆ ಶೇ. 6 ರಷ್ಟು ಮೀಸಲಾತಿ ಹಾಗೂ ಅಲೆಮಾರಿ ಸಮುದಾಯಗಳು ಸೇರಿದಂತೆ ಇತರ ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿತ್ತು. ಆದರೆ, ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಶೋಷಿತ ವರ್ಗಗಳಿಗೆ ನ್ಯಾಯ ನೀಡಬೇಕು ಎಂಬ ಆಶಯ ಎಂದೂ ಇರಲಿಲ್ಲ ಎಂದು ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರನ್ನು ಜಪಿಸುವ ಕಾಂಗ್ರೆಸ್, ಅವರನ್ನು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಕೆಲಸ ಮಾಡಿತ್ತು. ಅಷ್ಟೇ ಅಲ್ಲದೆ, ಅವರ ಅಂತ್ಯಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ನೀಡಲಿಲ್ಲ. ಕಾಂಗ್ರೆಸ್ ಪಕ್ಷ ಶೋಷಿತ ಸಮುದಾಯಗಳನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆಯೇ ಹೊರತು ಅವರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ ಎಂದು ನೇರ ಆರೋಪ ಮಾಡಿದರು.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಎಚ್ಚರಿಕೆ:
ಶೋಷಿತ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ, ಡಾಕ್ಟರ್, ಇಂಜಿನಿಯರ್ ಆಗುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ ವಿಜಯೇಂದ್ರ, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮೀಸಲಾತಿ ತೀರ್ಮಾನಗಳನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುವಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದರು. ದಲಿತರ ಅಭಿವೃದ್ಧಿಗೆ ಮೀಸಲಾದ ಎಸ್‌ಸಿಪಿ/ಟಿಎಸ್‌ಪಿ (SCP/TSP) ನಿಧಿಯ ಪೈಕಿ ಸುಮಾರು 55,000 ಕೋಟಿ ಹಣವನ್ನು ಬೇರೆ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು.
ಉಚಿತ ಗ್ಯಾರಂಟಿಗಳನ್ನು ನೆಪವಾಗಿಟ್ಟುಕೊಂಡು ಗ್ರಾಮೀಣ ಭಾಗದ ಬಸ್ ಸೌಕರ್ಯ, ವಿಕಲಚೇತನರ ಪಿಂಚಣಿ, ಉಚಿತ ಮನೆ, ಗಂಗಾ ಕಲ್ಯಾಣ ಯೋಜನೆ ಹಾಗೂ ರೈತರ ವಿದ್ಯಾನಿಧಿ ಯೋಜನೆಗಳಿಗೆ ಕಲ್ಲಾಕಲಾಗಿದೆ. ಮಾದಿಗ ಸಮುದಾಯವು ಮೌನವಾಗಿದ್ದರೆ ಅದು ದೌರ್ಬಲ್ಯವಲ್ಲ. ಬಿಜೆಪಿ ಸರ್ಕಾರ ಕೊಟ್ಟಿದ್ದ ಹಕ್ಕನ್ನು ಉಳಿಸಿಕೊಳ್ಳಲು ಹಾಗೂ ಕಾಂಗ್ರೆಸ್ ಸರ್ಕಾರದ ನಡವಳಿಕೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಸಮುದಾಯದ ಜಾಗೃತಿಗಾಗಿ ಪರಮಪೂಜ್ಯ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದ ಅವರು, ಬಿಜೆಪಿ ಸದಾ ಸಮುದಾಯದ ಧ್ವನಿಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಒಳ ಮೀಸಲಾತಿ ಜಾರಿಯಾಗುವವರೆಗೆ ವಿಶ್ರಮಿಸದಿರಿ: ಬಸವರಾಜ ಬೊಮ್ಮಾಯಿ
ರಾಜ್ಯದ ಬಡಜನರು ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳನ್ನು ಪಡೆಯಲು ಮತ್ತು ಒಳ ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ನಿರಂತರ ಹೋರಾಟ ನಡೆಸುವುದು ಅಗತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಎಸ್. ಬೊಮ್ಮಾಯಿ ಕರೆ ನೀಡಿದರು.
ರಾಜ್ಯದ ಜನರು ಬಡತನ ಮತ್ತು ಅಭಿವೃದ್ಧಿಯ ಕೊರತೆಯಿಂದ ಬಳಲುತ್ತಿದ್ದರೆ, ಆಡಳಿತಗಾರರು ಶ್ರೀಮಂತರಾಗುತ್ತಿದ್ದಾರೆ. ರಾಜ್ಯದ ಜನರ ಬೆವರ ಹರಿವಿನ ಫಲ ಕೆಲವೇ ಜನರ ಪಾಲಾಗುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ. ಕಳೆದ 35 ವರ್ಷಗಳಿಂದ ಒಳ ಮೀಸಲಾತಿಗಾಗಿ ನಿರಂತರ ಮನವಿಗಳನ್ನು ಸಲ್ಲಿಸಲಾಗುತ್ತಿದ್ದರೂ ಸೂಕ್ತ ನ್ಯಾಯ ಸಿಕ್ಕಿರಲಿಲ್ಲ. ಶೋಷಿತ ಸಮುದಾಯಗಳು ತಮ್ಮ ಹಕ್ಕಿಗಾಗಿ ಬೇಡುವುದು ಬಿಟ್ಟು, ಜಾಗವನ್ನು ಖಾಲಿ ಮಾಡಲು ಧೈರ್ಯದಿಂದ ಒತ್ತಾಯಿಸಬೇಕು ಎಂದರು.
ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದೃಢ ನಿಲುವಿನಿಂದಾಗಿ ಉಚ್ಚ ನ್ಯಾಯಾಲಯದಲ್ಲಿ ರಾಜ್ಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಅಧಿಕಾರವಿದೆ ಎಂಬ ಐತಿಹಾಸಿಕ ತೀರ್ಪು ಬರಲು ಸಾಧ್ಯವಾಯಿತು. ಕಾಂಗ್ರೆಸ್ ಆಡಳಿತದಲ್ಲಿ ಮೀಸಲಾತಿ ವ್ಯಾಪ್ತಿಗೆ ಸತತವಾಗಿ ಜಾತಿಗಳನ್ನು ಸೇರಿಸುತ್ತಾ ಹೋಗಿದ್ದರಿಂದ ಪೈಪೋಟಿ ಹೆಚ್ಚಾಯಿತೇ ಹೊರತು ಮೀಸಲಾತಿ ಪ್ರಮಾಣ ಹೆಚ್ಚಾಗಲಿಲ್ಲ. ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಬದುಕಿನ ರಾಜಕಾರಣ” ಮಾಡುತ್ತೇವೆ ಎಂದು ಹೇಳುತ್ತಿದ್ದರೆ, ತಕ್ಷಣವೇ ಒಳ ಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಿ ಆದೇಶ ಹೊರಡಿಸುವ ಮೂಲಕ ಅದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು. ತಮ್ಮ ಹಕ್ಕುಗಳು ಮತ್ತು ಮಕ್ಕಳ ಭವಿಷ್ಯಕ್ಕಾಗಿ ಕ್ರಾಂತಿಕಾರಿ ಹೋರಾಟ ಮುಂದುವರಿಸಬೇಕು ಎಂದು ವಿನಂತಿಸಿದರು.
ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹಂಚಿಕೆಯಾಗಲಿ: ಎ.ನಾರಾಯಣಸ್ವಾಮಿ
ಜ್ಯೋತಿರಾವ್ ಫುಲೆ ಅವರು 144 ವರ್ಷಗಳ ಹಿಂದೆ, ಸಾಹು ಮಹಾರಾಜರು 122 ವರ್ಷಗಳ ಹಿಂದೆ ಮೀಸಲಾತಿ ಪರ ಧ್ವನಿ ಎತ್ತಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮೀಸಲಾತಿಗೆ ಸ್ಪಷ್ಟ ರೂಪ ನೀಡಿದರು. ಕರ್ನಾಟಕದಲ್ಲಿ ಮಾದಿಗ ಸಮುದಾಯವು ಒಳಮೀಸಲಾತಿಗಾಗಿ 35 ವರ್ಷಗಳಿಂದ ಹಾಗೂ ಆಂಧ್ರಪ್ರದೇಶದಲ್ಲಿ 48 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಕ್ಯಾಬಿನೆಟ್‌ನಲ್ಲಿ ‘ಒಳಮೀಸಲಾತಿ’ ಎಂಬ ಪದ ಬಳಸಿದರೂ, ಹುದ್ದೆಗಳ ನೇಮಕಾತಿ ಮಾಡದೆ ಸಮುದಾಯಕ್ಕೆ ವಂಚಿಸುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣ ಸ್ವಾಮಿ ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಹಾಗೂ ಮೀಸಲಾತಿ ವಿಚಾರದಲ್ಲಿ ಬಂಡೆಯಂತೆ ನಿಂತಿದ್ದರು. ಸಂವಿಧಾನಬದ್ಧವಾಗಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹಾಗೂ ಒಳಮೀಸಲಾತಿ ಹಂಚಿಕೆಯಾಗಬೇಕು. ಬೇಡಿಕೆ ಈಡೇರದಿದ್ದರೆ ಮಾದಿಗ ಸಮುದಾಯ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ಶೋಷಿತರು ಆರ್‌ಸಿಸಿ ಕಟ್ಟಡಗಳಂತೆ ದೃಢವಾಗಿರಬೇಕು: ಡಾ. ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮಾದಾರ ಗುರು ಪೀಠದ ಡಾ. ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿ, ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಕೊಡುಗೆ ಅಪಾರವಾಗಿದೆ ಎಂದರು.
ಮಾದಿಗ ಸಮುದಾಯ ಸೇರಿದಂತೆ 101 ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಒಳಮೀಸಲಾತಿಗೆ ಹೆಚ್ಚಿನ ಶ್ರಮ ಮತ್ತು ಅನುದಾನ ನೀಡಿದ ಮೊದಲ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 100 ಕೋಟಿ ರೂಪಾಯಿಗಳ ಅನುದಾನದ ಆದೇಶ ಹೊರಡಿಸುವ ಮೂಲಕ ಮಠ-ಮಾನ್ಯಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸ್ವಂತ ಜಮೀನು ಹಾಗೂ ಸ್ಮಶಾನಕ್ಕೂ ಜಾಗವಿಲ್ಲದೆ ಹೋರಾಟ ಮಾಡುತ್ತಿದ್ದ ಸಮುದಾಯಕ್ಕೆ ಬೃಹತ್ ಮಠ ನಿರ್ಮಾಣ ಮಾಡಲು 83 ಎಕರೆ ಜಮೀನನ್ನು ಮಂಜೂರು ಮಾಡಿ ಭೂಮಿಪೂಜೆ ನೆರವೇರಿಸಿದ ಬೊಮ್ಮಾಯಿ ಅವರ ಕೊಡುಗೆಯನ್ನು ಅತ್ಯಂತ ಗೌರವದಿಂದ ಸ್ಮರಿಸಿದರು. ಶೋಷಿತ ಸಮುದಾಯಗಳು ಹಳೆಯ ವ್ಯವಸ್ಥೆಯಿಂದ ಹೊರಬಂದು ಸಮಾಜದಲ್ಲಿ ಆರ್‌ಸಿಸಿ ಕಟ್ಟಡಗಳಂತೆ ದೃಢವಾಗಿ ಹೊರಹೊಮ್ಮಬೇಕು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು:
ಕಾರ್ಯಕ್ರಮದಲ್ಲಿ ಸಂಸದರಾದ ಗೋವಿಂದ ಎಂ. ಕಾರಜೋಳ, ಕೇಂದ್ರದ ಮಾಜಿ ಸಚಿವರಾದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜ್, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಸಾಮರಸ್ಯ ಸಂಚಾಲಕರಾದ ವಾದಿರಾಜ್ ಬಸವರಾಜ, ಕೆ.ಟಿ.ಕುಮಾರಸ್ವಾಮಿ, ಶ್ರೀ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಹೂಡಿ ಮಂಜುನಾಥ್, ಹನುಮಂತೇಗೌಡ, ಮಾಧುರಿ ಗೀರೀಶ್, ಎ.ಮುರಳಿ, ಸಂಪತ್ ಕುಮಾರ್, ಮೀಸೆ ಮಹಾಲಿಂಗಪ್ಪ, ಕೆಎಸ್‌ಒಯು ಮಾಜಿ ಕುಲಸಚಿವರಾದ ಡಾ. ಹೆಚ್.ವಿಶ್ವನಾಥ್, ಮುಖಂಡರಾದ ಮಂಜುನಾಥ್, ಭರತ್, ಅನಿಲ್‌ಕುಮಾರ್, ಅರುಣ್‌ಕುಮಾರ್, ವೆಂಕಟೇಶ್, ಸಿದ್ದೇಶ್ರಣ್ಣ, ಅನಿತ್‌ಕುಮಾರ್, ದೇವೇಂದ್ರನಾಥ್, ವಿಶ್ವನಾಥ್, ಕಿರಣ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಯೋಜಕರಾದ ಜಿ.ಎಚ್.ಮೋಹನ್ ಸ್ವಾಗತಿಸಿದರು, ಪರಶುರಾಮ್ ವಂದಿಸಿದರು.