ಚಿತ್ರದುರ್ಗ: ಜಪಾನ್ನಲ್ಲಿ ಅಕ್ಟೋಬರ್ 17 ರಿಂದ 26 ರವರೆಗೆ ನಡೆಯಲಿರುವ ಪ್ಯಾರಾ ಅಥ್ಲೆಟಿಕ್ಸ್ ಗೇಮ್ಸ್ಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಗ್ರಾಮದ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ವಿ. ರಾಧಾ (27) ಅವರು ಆಯ್ಕೆಯಾಗಿದ್ದಾರೆ. ಈ ಕ್ರೀಡಾಕೂಟದ 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಭಾಗಶಃ ದೃಷ್ಟಿ ವಿಕಲಚೇತನರಾಗಿರುವ ರಾಧಾ ಅವರು, ಏಷ್ಯಾದಲ್ಲಿ 2ನೇ ಹಾಗೂ ವಿಶ್ವದಲ್ಲಿ 9ನೇ ಶ್ರೇಯಾಂಕ ಹೊಂದಿದ್ದಾರೆ. 400 ಮೀಟರ್ ಹಾಗೂ 1,500 ಮೀಟರ್ ಓಟದ ಸ್ಪರ್ಧೆಗಳಲ್ಲಿ ಪರಿಣತಿ ಹೊಂದಿರುವ ಇವರು, ರಾಷ್ಟ್ರೀಯ ಪ್ಯಾರಾ-ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ 16 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳೆ
ರೈತರಾದ ವೆಂಕಟೇಶ್ ಮತ್ತು ಸುಜಾತಾ ಅವರ ಪುತ್ರಿಯಾಗಿರುವ ರಾಧಾ, ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2018ರ ಕ್ರೀಡಾಕೂಟದಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದ ಅವರು, 2023ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಈ ಐತಿಹಾಸಿಕ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಧಾ ಅವರನ್ನು ಖುದ್ದಾಗಿ ಸನ್ಮಾನಿಸಿ, ಎಕ್ಸ್ (X) ಖಾತೆಯಲ್ಲಿ ಶ್ಲಾಘಿಸಿದ್ದರು. ಇತ್ತೀಚೆಗೆ ಚೆನ್ನೈನಲ್ಲಿ ನಡೆದ 2024ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ, ನವದೆಹಲಿಯಲ್ಲಿ ನಡೆದ 2025ರ ವಿಶ್ವ ಪ್ಯಾರಾ ಗೇಮ್ಸ್ನಲ್ಲಿ ಬೆಳ್ಳಿ ಹಾಗೂ ಬೆಂಗಳೂರಿನಲ್ಲಿ ನಡೆದ 2026ರ ಇಂಡಿಯನ್ ಓಪನ್ ಇಂಟರ್ನ್ಯಾಷನಲ್ ಗೇಮ್ಸ್ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಇವರು ಗೆದ್ದಿದ್ದಾರೆ.

“ಪದಕ ಗೆಲ್ಲುವ ವಿಶ್ವಾಸವಿದೆ”
“ಜಪಾನ್ನಲ್ಲಿ ನಡೆಯುವ ಪ್ಯಾರಾ ಗೇಮ್ಸ್ಗೆ ಆಯ್ಕೆಯಾಗಿರುವುದು ನನಗೆ ಅತೀವ ಸಂತಸ ತಂದಿದೆ. ಅಲ್ಲಿ ಪದಕ ಗೆಲ್ಲುವ ವಿಶ್ವಾಸ ನನಗಿದ್ದು, ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ. 2028ರ ಪ್ಯಾರಾಲಿಂಪಿಕ್ಸ್ಗೂ ನಾನು ಸಿದ್ಧತೆ ನಡೆಸುತ್ತಿದ್ದೇನೆ,” ಎಂದು ವಿ. ರಾಧಾ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಹಾಗೂ ತರಬೇತಿ

ಕಾಮಸಮುದ್ರದಲ್ಲಿ ತಮ್ಮ ಅಜ್ಜಿಯ ಮನೆಯಲ್ಲಿದ್ದು ಪ್ರಾಥಮಿಕ ಶಿಕ್ಷಣ ಪೂರೈಸಿದ ರಾಧಾ, 8ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಚಿಕ್ಕಮಗಳೂರಿನ ಆಶಾಕಿರಣ ಅಂಧರ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಬಳಿಕ ಬೆಂಗಳೂರಿನ ಕೆ.ಆರ್. ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. 2017ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಧಾ ಅವರ ಅಸಾಧಾರಣ ಪ್ರತಿಭೆಯನ್ನು ಗುರುತಿಸಿದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ತರಬೇತುದಾರ ರಾಹುಲ್ ಬಾಲಕೃಷ್ಣ ಅವರು, ವೃತ್ತಿಪರ ತರಬೇತಿಗಾಗಿ ಅವರನ್ನು ಬೆಂಗಳೂರಿಗೆ ಕರೆತಂದರು. ರಾಹುಲ್ ಅವರ ಮಾರ್ಗದರ್ಶನದಲ್ಲಿ ಕಠಿಣ ತರಬೇತಿ ಪಡೆಯುತ್ತಿರುವ ರಾಧಾ, ಇದೀಗ ಜಪಾನ್ ಕ್ರೀಡಾಕೂಟ ಹಾಗೂ 2028ರ ಪ್ಯಾರಾಲಿಂಪಿಕ್ಸ್ಗಾಗಿ ಸಜ್ಜಾಗುತ್ತಿದ್ದಾರೆ.
ಸರ್ಕಾರಿ ಉದ್ಯೋಗ ಮತ್ತು ಪ್ರಶಸ್ತಿಗಳು

ಕ್ರೀಡಾ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಮೂರು ವರ್ಷಗಳ ಹಿಂದೆ ಇವರಿಗೆ ಸರ್ಕಾರಿ ಉದ್ಯೋಗ ನೀಡಿದ್ದು, ಪ್ರಸ್ತುತ ಅವರು ಬೆಂಗಳೂರಿನ ಕಾರ್ಮಿಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಧಾ ಅವರು ಕರ್ನಾಟಕ ಸರ್ಕಾರದ ‘ಏಕಲವ್ಯ ಪ್ರಶಸ್ತಿ’, ‘ಕರ್ನಾಟಕ ವುಮೆನ್ಸ್ ಅವಾರ್ಡ್’, ಕಾಲೇಜು ಶಿಕ್ಷಣ ಇಲಾಖೆಯಿಂದ ‘ಸ್ವಾಮಿ ವಿವೇಕಾನಂದ ಪ್ರಶಸ್ತಿ’, ‘ಎನ್ಎಫ್ಬಿ ಎಕ್ಸಲೆನ್ಸ್ ಅವಾರ್ಡ್’ ಹಾಗೂ ‘ಯಂಗ್ ಅಚೀವರ್ ಅವಾರ್ಡ್’ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.