Home ಚಿತ್ರದುರ್ಗ ಡಿಕೆಶಿನ ಹಾಡಿ ಹೊಗಳಿದ ಸಿರಿಗೆರೆ ಶ್ರೀಗಳು: ಬರಪೀಡಿತ ಪ್ರದೇಶ ಘೋಷಣೆಗೆ ‘ಗ್ರಾಪಂ’ ಮಾನದಂಡವಾಗಲಿ ಎಂದು ಸರ್ಕಾರಕ್ಕೆ ಆಗ್ರಹ
ಚಿತ್ರದುರ್ಗ

ಡಿಕೆಶಿನ ಹಾಡಿ ಹೊಗಳಿದ ಸಿರಿಗೆರೆ ಶ್ರೀಗಳು: ಬರಪೀಡಿತ ಪ್ರದೇಶ ಘೋಷಣೆಗೆ ‘ಗ್ರಾಪಂ’ ಮಾನದಂಡವಾಗಲಿ ಎಂದು ಸರ್ಕಾರಕ್ಕೆ ಆಗ್ರಹ

Share
sirigere-swamiji-praises-cm-dk-shivakumar-drought-relief-demand
Share

ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಾಕ್ಚಾತುರ್ಯ ಹಾಗೂ ತೂಕಬದ್ಧ ನಡವಳಿಕೆಯನ್ನು ಸಿರಿಗೆರೆ ತರಳಬಾಳು ಮಠದ ಶ್ರೀಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿರಿಗೆರೆಯ ತರಳಬಾಳು ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಸದನದ ಕಲಾಪಗಳು ಹಾಗೂ ಬರಪೀಡಿತ ಪ್ರದೇಶಗಳ ಘೋಷಣೆ ಕುರಿತಂತೆ ಸರ್ಕಾರಕ್ಕೆ ಮಹತ್ವದ ಸಲಹೆಗಳನ್ನು ನೀಡಿದರು.

ವೇದಿಕೆ ಮೇಲಿದ್ದ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನಡುವಿನ ಆರೋಗ್ಯಕರ ಮಾತುಕತೆಯನ್ನು ಉದಾಹರಿಸಿ ರಾಜಕೀಯ ನಾಯಕರಿಗೆ ಕಿವಿಮಾತು ಹೇಳಿದರು.

ಸಿಎಂ ಡಿ.ಕೆ. ಶಿವಕುಮಾರ್‌ಗೆ ತೂಕಬದ್ಧ ಮಾತುಗಾರಿಕೆ:

“ನಿಮ್ಮ ತಂದೆ-ತಾಯಿಗಳು ನಮ್ಮ ಮಠದ ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಹೆಸರನ್ನು ನಿಮಗೆ ಇಟ್ಟಿರುವುದು ಬಹಳ ಸಂತೋಷದ ವಿಚಾರ. ಕೌಟುಂಬಿಕವಾಗಿ ಏನೇ ವಿರಸಗಳಿದ್ದರೂ ನೀವು ಯಾವತ್ತೂ ತೂಕತಪ್ಪಿ ಮಾತನಾಡಿಲ್ಲ. ಅಪ್ಪಿ-ತಪ್ಪಿಯೂ ಹಗುರವಾದ ಮಾತುಗಳನ್ನಾಡಿಲ್ಲ. ಉಪಮುಖ್ಯಮಂತ್ರಿಗಳಾಗಿದ್ದಾಗಲೂ ನೀವು ಬಹಳ ಎಚ್ಚರಿಕೆಯಿಂದ, ತೂಕಬದ್ಧವಾಗಿ ಮಾತನಾಡಿದ್ದೀರಿ. ಇದು ಎಲ್ಲರಿಗೂ ಮಾದರಿಯಾಗಬೇಕು,” ಎಂದು ಡಿ.ಕೆ. ಶಿವಕುಮಾರ್ ಅವರನ್ನು ಶ್ರೀಗಳು ಕೊಂಡಾಡಿದರು.

ಬೊಮ್ಮಾಯಿಗೆ ಸಲಹೆ – ಹೊಗಳಿ ಕೆಲಸ ಮಾಡಿಸಿಕೊಳ್ಳಿ:

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ‘ಬಹಳ ಬುದ್ಧಿವಂತರು’ ಎಂದು ಹೊಗಳಿದ್ದನ್ನು ಪ್ರಸ್ತಾಪಿಸಿದ ಶ್ರೀಗಳು, “ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷದ ನಾಯಕರನ್ನು ಇಷ್ಟು ಚೆನ್ನಾಗಿ ವರ್ಣನೆ ಮಾಡಿದ್ದು ನಿಜಕ್ಕೂ ಮಾದರಿ. ಮುಂದಿನ ದಿನಗಳಲ್ಲಿ ವಿಧಾನಸಭೆ ಹಾಗೂ ಸಂಸತ್ತಿನ ಕಲಾಪಗಳು ಹೀಗೆಯೇ ನಡೆಯಬೇಕು. ಸದನದಲ್ಲಿ ವಿನಾಕಾರಣ ಗದ್ದಲ ಮಾಡುವ ಬದಲು, ಇದೇ ರೀತಿ ಆಡಳಿತ ಪಕ್ಷದ ದುರೀಣರನ್ನು ಹೊಗಳಿ, ಅವರಲ್ಲಿ ಹುಮ್ಮಸ್ಸು ತುಂಬಿ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಿ. ಅದರಿಂದ ಜನರಿಗೂ ಖುಷಿಯಾಗುತ್ತದೆ,” ಎಂದು ಬೊಮ್ಮಾಯಿಯವರಿಗೆ ಸಲಹೆ ನೀಡಿದರು.

ನೀತಿ ಸಂಹಿತೆ ರಾಜಕಾರಣಿಗಳಿಗೆ ನೆಪವಾಗದಿರಲಿ:

ಚುನಾವಣಾ ನೀತಿ ಸಂಹಿತೆಯ ಕಟ್ಟುಪಾಡುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, “ನೀತಿ ಸಂಹಿತೆ ಕೇವಲ ಚುನಾವಣೆಗಳಿಗಷ್ಟೇ ಸೀಮಿತವಾಗಿರಬೇಕು. ಆದರೆ ಈಗ ಅದೊಂದು ನೆಪವಾಗಿ ಅಭಿವೃದ್ಧಿ ಕಾರ್ಯಗಳು ನಿಷ್ಕ್ರಿಯವಾಗುತ್ತಿವೆ. ಮದುವೆಗೆ ಹೆಣ್ಣು ಕೊಡಲು ಇಷ್ಟವಿಲ್ಲದವರು ‘ನಮ್ಮೂರ ಹನುಮಪ್ಪ ಅಪ್ಪಣೆ ಕೊಟ್ಟಿಲ್ಲ’ ಎಂದು ನೆಪ ಹೇಳುವಂತೆ, ಭರವಸೆ ಈಡೇರಿಸಲಾಗದ ರಾಜಕಾರಣಿಗಳು ‘ನೀತಿ ಸಂಹಿತೆ ಅಡ್ಡ ಬರುತ್ತದೆ’ ಎಂದು ಜಾರಿಕೊಳ್ಳಲು ಇದೊಂದು ಅಸ್ತ್ರವಾಗಿದೆ. ಜನರೇನು ದಡ್ಡರಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಭಿವೃದ್ಧಿಗೆ ಅಡ್ಡಿಯಾಗುವಂತಹ ನೀತಿ ಸಂಹಿತೆಯ ಕಟ್ಟುಪಾಡುಗಳನ್ನು ಸಡಿಲಿಸಬೇಕು,” ಎಂದು ಒತ್ತಾಯಿಸಿದರು.

ಮೋಡಗಳು ರೆವಿನ್ಯೂ ದಾಖಲೆ ನೋಡಿ ಮಳೆ ಸುರಿಸಲ್ಲ!

ಇದೇ ವೇಳೆ ಬರಪೀಡಿತ ಪ್ರದೇಶಗಳ ಘೋಷಣೆಯ ಕುರಿತು ಸರ್ಕಾರಕ್ಕೆ ಚಾಟಿ ಬೀಸಿದ ಶ್ರೀಗಳು, “ಬರಗಾಲದ ಸಂದರ್ಭದಲ್ಲಿ ಇಡೀ ತಾಲೂಕನ್ನು ಘಟಕವನ್ನಾಗಿ ಮಾಡಿಕೊಂಡು ಬರಪೀಡಿತ ಎಂದು ಘೋಷಣೆ ಮಾಡುವುದು ಸರಿಯಾದ ಕ್ರಮವಲ್ಲ. ಮೋಡಗಳು ರೆವಿನ್ಯೂ ದಾಖಲೆಗಳನ್ನು ನೋಡಿ ಮಳೆ ಸುರಿಸುವುದಿಲ್ಲ. ಒಂದೇ ತಾಲೂಕಿನಲ್ಲಿ ಅಕ್ಕಪಕ್ಕದ ಜಮೀನುಗಳಲ್ಲಿ ಮಳೆ ಪ್ರಮಾಣ ವ್ಯತ್ಯಾಸವಿರುತ್ತದೆ. ಹೀಗಿರುವಾಗ ತಾಲೂಕನ್ನು ಮಾನದಂಡವನ್ನಾಗಿ ಮಾಡಿದರೆ ನೈಜ ಸಂತ್ರಸ್ತ ರೈತರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಇನ್ನು ಮುಂದೆ ತಾಲೂಕಿನ ಬದಲು ‘ಗ್ರಾಮ ಪಂಚಾಯಿತಿ’ಯನ್ನೇ ಘಟಕವಾಗಿ ಪರಿಗಣಿಸಬೇಕು. ಪ್ರತಿಯೊಂದು ಪಂಚಾಯಿತಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಮಳೆ-ಬೆಳೆ ನೋಡಿ ತೀರ್ಮಾನ ಕೈಗೊಂಡರೆ ರೈತರಿಗೆ ನಿಜವಾದ ನ್ಯಾಯ ಸಿಗುತ್ತದೆ,” ಎಂದು ಆಗ್ರಹಿಸಿದರು.

ಕೊನೆಯಲ್ಲಿ, ತರಳಬಾಳು ಮಠದ ಹಿರಿಯ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮ ಆಡಳಿತಾವಧಿಯಲ್ಲಿ ಜನಪರ ಕೆಲಸಗಳನ್ನು ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಭಗವಂತ ಶಕ್ತಿ ನೀಡಲಿ ಎಂದು ಶ್ರೀಗಳು ಆಶೀರ್ವದಿಸಿದರು.

Author

Share

Loading News...

More News

Related Articles

ಮದಕರಿ ಜಯಂತಿಗೆ ಬಂದ ಕಿಚ್ಚ: ಹೆಲಿಪ್ಯಾಡ್‌ನಿಂದ ವೇದಿಕೆವರೆಗೆ ಬರಿಗಾಲ ನಡಿಗೆ

ಚಿತ್ರದುರ್ಗ: ಮದಕರಿ ನಾಯಕ ಜಯಂತೋತ್ಸವದಲ್ಲಿ ಭಾಗವಹಿಸಲು ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಕಿಚ್ಚ ಸುದೀಪ್ ಅವರ ಭಕ್ತಿ...

ಚಿತ್ರದುರ್ಗದ ಜನರಿಗೆ ಕಿಚ್ಚನ ಭರವಸೆ: ಆಗಾಗ ಬಂದು ಭೇಟಿ ಮಾಡ್ತೇನೆ

ಚಿತ್ರದುರ್ಗ: ಒಂದು ವರ್ಷದ ನಂತರ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿರುವ ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳೊಂದಿಗೆ...

ಮೀಸಲಾತಿ ರದ್ದು, ಸ್ಟಿಂಗ್ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು...

ಚಿತ್ರದುರ್ಗದಲ್ಲಿ ಸಂಸದ ಕಾರಜೋಳ ಗುಡುಗು: ಮೀಸಲಾತಿ ರದ್ದಿಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ

ಚಿತ್ರದುರ್ಗ: ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ರದ್ದಾಗಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ...