ಚಿತ್ರದುರ್ಗ: ರಾಜ್ಯದಲ್ಲಿ ಜೂಜಾಟವಾಡುವ ಮುಂಗಾರು ಮಳೆ ಹಾಗೂ ಜಾಗತಿಕ ಎಲ್ ನಿನೋ ಹೊಡೆತಕ್ಕೆ ಸಿಲುಕಿ ಜನತೆ ತತ್ತರಿಸಿದ್ದು, ಜಿಲ್ಲೆಯಾದ್ಯಂತ ಭೀಕರ ಬರಗಾಲ ಆವರಿಸಿದೆ. ಮೊದಲ ಹಂತದಲ್ಲಿ ಬರಪೀಡಿತ ತಾಲ್ಲೂಕುಗಳೆಂದು ಘೋಷಣೆಯಾದ ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭಾನುವಾರ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿತು.
ಕಟಾವಿಗೆ ಬಾರದೆ ಒಣಗಿದ ಬೆಳೆಗಳು, ಬರಿದಾದ ಬೋರ್ವೆಲ್ಗಳು ಹಾಗೂ ರೈತರ ಅಸಹಾಯಕತೆಯನ್ನು ಕಣ್ಣಾರೆ ಕಂಡ ಕೇಂದ್ರ ತಂಡ ತೀವ್ರ ಮಮ್ಮಲ ಮರುಗಿತು.
ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು ಅವರ ನೇತೃತ್ವದಲ್ಲಿ, ಉಪನಿರ್ದೇಶಕ ಚೇತ್ ರಾಮ್ ಮೀನಾ, ನೀತಿ ಆಯೋಗದ ಓಎಸ್ಡಿ ಕರ್ನಲ್ ಅಮರೇಂದ್ರ ಸಿಂಗ್ ಹಾಗೂ ಜಲಸಂಪನ್ಮೂಲ ಮತ್ತು ನದಿ ಪುನಶ್ಚೇತನ ನಿರ್ದೇಶಕ ಡಾ. ಜೆ. ಹರ್ಷ ಅವರನ್ನೊಳಗೊಂಡ ಉನ್ನತ ಮಟ್ಟದ ತಂಡ ಜಿಲ್ಲೆಯಲ್ಲಿ ವ್ಯಾಪಕ ಪರಿಶೀಲನೆ ನಡೆಸಿತು.
ಧರ್ಮಪುರ ಹೋಬಳಿಯಲ್ಲಿ ಬೆಳೆ ನಷ್ಟ ಪರಿಶೀಲನೆ: ಕಣ್ಣೀರಿಟ್ಟ ಅನ್ನದಾತರು
ಕೇಂದ್ರ ಅಧ್ಯಯನ ತಂಡವು ಮೊದಲಿಗೆ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಸಕ್ಕರ ಗ್ರಾಮದ ರೈತ ತಿರುಮಲಪ್ಪ ಅವರ ಜಮೀನಿಗೆ ಭೇಟಿ ನೀಡಿತು. ಸುಮಾರು 2.5 ಎಕರೆ ಜಮೀನಿನಲ್ಲಿ 1 ಕ್ವಿಂಟಾಲ್ ಶೇಂಗಾ ಬೀಜ ಬಿತ್ತನೆ ಮಾಡಿದ್ದ ತಿರುಮಲಪ್ಪ, ಬಿತ್ತನೆ ಹಾಗೂ ರಸಗೊಬ್ಬರಕ್ಕಾಗಿ ಸುಮಾರು 86,893 ರೂ. ವೆಚ್ಚ ಮಾಡಿದ್ದರು. ಆದರೆ ಮಳೆಯಿಲ್ಲದೆ ಶೇಂಗಾ ಸಂಪೂರ್ಣ ಒಣಗಿ ಹೋಗಿದ್ದು, ಈಗಾಗಲೇ 1 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಅನುಭವಿಸಿದ್ದಾರೆ. ಕೇಂದ್ರ ತಂಡದ ಎದುರು ಅಸಹಾಯಕತೆ ತೋಡಿಕೊಂಡ ರೈತ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ನೆರವಿಗೆ ಧಾವಿಸಬೇಕೆಂದು ಕಣ್ಣೀರಿಟ್ಟು ಮನವಿ ಮಾಡಿದರು.
ಪಕ್ಕದ ಮುಕುಂದಪ್ಪ ಅವರ ಜಮೀನಿನಲ್ಲಿ ಅಂತರ್ಜಲ ಮಟ್ಟ ಕುಸಿದು ನೀರಾವರಿ ಆಶ್ರಿತ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳ ಬೆಳವಣಿಗೆ ಕುಂಠಿತವಾಗಿರುವುದನ್ನು ತಂಡ ವೀಕ್ಷಿಸಿತು. ಮತ್ತೊಂದೆಡೆ ಒಣಗಿದ ಶೇಂಗಾ ಬೆಳೆಯನ್ನು ಕತ್ತರಿಸಿ ಮನೆಯ ಮುಂದೆ ಒಟ್ಟು ಮಾಡಿದ್ದ ರೈತ ನಾಗರಾಜ ಅವರನ್ನು ಭೇಟಿ ಮಾಡಲಾಯಿತು. “ಬೆಳೆ ಸಂಪೂರ್ಣ ನಾಶವಾಗಿದ್ದು, ಕಾಳು ಕೈಗೆ ಸಿಗುವ ಯಾವುದೇ ನಿರೀಕ್ಷೆಯಿಲ್ಲ. ಹೀಗಾಗಿ ಮನೆಯ ಜಾನುವಾರುಗಳಿಗೆ ಮೇವಿನ ಸಲುವಾಗಿ ಬೆಳೆಯನ್ನು ಕಟಾವು ಮಾಡಿದ್ದೇನೆ” ಎಂದು ನಾಗರಾಜ ದುಃಖ ಹಂಚಿಕೊಂಡರು.
ಬೋರ್ವೆಲ್ ವಿಫಲ, 10 ಎಕರೆ ತೊಗರಿ ನಾಶ: 3 ಲಕ್ಷಕ್ಕೂ ಅಧಿಕ ನಷ್ಟ
ಧರ್ಮಪುರ ಹೋಬಳಿಯ ನಿವೃತ್ತ ಪ್ರಾಂಶುಪಾಲರೂ ಆಗಿರುವ ಕೃಷಿಕ ತಿಪ್ಪಯ್ಯ ಅವರ 10 ಎಕರೆ ತೊಗರಿ ಹೊಲಕ್ಕೆ ತಂಡ ಭೇಟಿ ನೀಡಿತು. ಈ ವೇಳೆ ಮಾತನಾಡಿದ ತಿಪ್ಪಯ್ಯ, “ಹೊಲದಲ್ಲಿ ಕೊರೆಸಿರುವ ಬೋರ್ವೆಲ್ಗಳಲ್ಲಿ ನೀರು ಸಿಗದೆ ವಿಫಲವಾಗಿವೆ. ಮಳೆ ನಂಬಿಕೊಂಡು 62,025 ರೂ. ಖರ್ಚು ಮಾಡಿ ತೊಗರಿ ಬಿತ್ತನೆ ಮಾಡಲಾಗಿತ್ತು. ಮಳೆಯ ಕೊರತೆಯಿಂದ ಗಿಡಗಳು ಟಿಸಿಲೊಡೆಯದೆ ಬೆಳವಣಿಗೆ ನಿಂತುಹೋಗಿದೆ. ಒಂದು ಕಾಳು ತೊಗರಿಯೂ ಸಿಗುವ ಭರವಸೆಯಿಲ್ಲದೆ 3 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಇಡೀ ಹೋಬಳಿಯ ರೈತರ ಪರಿಸ್ಥಿತಿ ಇದೇ ಆಗಿದೆ” ಎಂದು ಬರಗಾಲದ ತೀವ್ರತೆಯನ್ನು ವಿವರಿಸಿದರು.
ಗ್ರಾಮದ ಇತರೆ ರೈತರ ಹೊಲಗಳಿಗೆ ತೆರಳಿದ ನಿಯೋಗ ಮೆಕ್ಕೆಜೋಳ, ಪರಂಗಿ (ಪಾಪಾಯ), ತೆಂಗು ಬೆಳೆಗಳನ್ನು ವೀಕ್ಷಿಸಿತು. ಕಿಸಾನ್ ಕ್ರೆಡಿಟ್ ಕಾರ್ಡ್ ಬಳಕೆ, ಬ್ಯಾಂಕುಗಳ ಸಹಕಾರ ಹಾಗೂ ಹೈನುಗಾರಿಕೆ ಕುರಿತು ರೈತರಿಂದ ಮಾಹಿತಿ ಸಂಗ್ರಹಿಸಿತು. ಈ ವೇಳೆ ಮಾತನಾಡಿದ ಸ್ಥಳೀಯ ರೈತ ಮುಖಂಡ ಎಸ್.ಎನ್. ಗಿರಿ, “ಗ್ರಾಮದ ಜನತೆ ಕೃಷಿಯನ್ನೇ ಅವಲಂಬಿಸಿದ್ದಾರೆ. ಮಳೆಯಿಲ್ಲದೆ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಭಾಗದ ಕೆರೆಗಳಿಗೆ ನೀರು ತುಂಬಿಸಿದರೆ ಮಾತ್ರ ರೈತರ ಬದುಕು ಉಳಿಯಲು ಸಾಧ್ಯ” ಎಂದು ಒತ್ತಾಯಿಸಿದರು.
ಜಲಮೂಲಗಳ ಪರಿಶೀಲನೆ ಹಾಗೂ ಹೊಸಕೆರೆ ಗ್ರಾಮ ಭೇಟಿ
ನಂತರ ಹೊಸಕೆರೆ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ತಂಡವು ಜಲಮೂಲಗಳ ಸಂರಕ್ಷಣೆ ಯೋಜನೆಯಡಿ (ವಿಬಿ-ಜಿ ರಾಮ್ ಜಿ ಯೋಜನೆ) ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿತು. ಜೊತೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಒದಗಿಸಲಾದ ಗೃಹ ನಳ ಸಂಪರ್ಕಗಳ ಕಾರ್ಯಕ್ಷಮತೆಯನ್ನು ಖುದ್ದು ಪರೀಕ್ಷಿಸಿತು. ಗ್ರಾಮದ ಹೊಲಗಳಿಗೆ ತೆರಳಿ ಮಳೆಯ ಕೊರತೆಯಿಂದ ನಷ್ಟಕ್ಕೀಡಾದ ತೊಗರಿ, ಹುರುಳಿ ಹಾಗೂ ಮಿಡಿ ಸೌತೆ ಬೆಳೆಗಳನ್ನು ಪರಿಶೀಲಿಸಿತು.
ರೈತರೊಂದಿಗೆ ನೇರ ಸಂವಾದ: ಎಕರೆಗೆ ₹20,000 ಪರಿಹಾರಕ್ಕೆ ಆಗ್ರಹ
ಪರುಶುರಾಮಪುರ ಹೋಬಳಿಯ ರೈತ ಸಂಪರ್ಕ ಕೇಂದ್ರದ ರೈತ ಭವನದಲ್ಲಿ ಕೇಂದ್ರ ಬರ ಅಧ್ಯಯನ ತಂಡ ಸ್ಥಳೀಯ ರೈತರೊಂದಿಗೆ ಮಹತ್ವದ ಸಂವಾದ ನಡೆಸಿ ಅಹವಾಲು ಸ್ವೀಕರಿಸಿತು.
ರೈತ ಮುಖಂಡ ಚಿಕ್ಕಣ್ಣ ಮಾತನಾಡಿ, “ತಾಲ್ಲೂಕಿನಲ್ಲಿ ತೀವ್ರ ಬರಗಾಲ ಆವರಿಸಿದ್ದು, ಬಿತ್ತನೆಗೆ ಪ್ರತಿ ಎಕರೆಗೆ 30,000 ರೂ.ನಿಂದ 50,000 ರೂ.ವರೆಗೆ ವೆಚ್ಚ ಮಾಡಿ ರೈತರು ತೀವ್ರ ನಷ್ಟದಲ್ಲಿದ್ದಾರೆ. ಸರ್ಕಾರ ಪ್ರತಿ ಹೆಕ್ಟೇರ್ಗೆ 40,000 ರೂ. ಅಥವಾ ಪ್ರತಿ ಎಕರೆಗೆ ಕನಿಷ್ಠ 20,000 ರೂ. ಪರಿಹಾರ ಧನ ವಿತರಿಸಬೇಕು” ಎಂದು ಒತ್ತಾಯಿಸಿದರು.
ಇದೇ ವೇಳೆ ರೈತರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು:
-
2019 ರಿಂದಲೂ ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯಡಿ ಭಾಗವಾದ ರೈತ ಕುಟುಂಬಗಳಿಗೆ ತಾಂತ್ರಿಕ ಕಾರಣಗಳಿಂದ ಆರ್ಥಿಕ ನೆರವು ಸಿಗುತ್ತಿಲ್ಲ. ಈ ಅಡಚಣೆಯನ್ನು ತಕ್ಷಣ ಬಗೆಹರಿಸಿ ಎಲ್ಲ ಅರ್ಹ ಕುಟುಂಬಗಳಿಗೂ ಹಣ ದೊರೆಯುವಂತೆ ಮಾಡಬೇಕು.
-
ಖಾಸಗಿ ಬ್ಯಾಂಕ್ಗಳ ಹಾವಳಿಯಿಂದ ಸಾಮಾನ್ಯ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೋಬಳಿ ಕೇಂದ್ರದಲ್ಲಿ ಕೆನರಾ ಬ್ಯಾಂಕ್ ಅಥವಾ ಎಸ್ಬಿಐ (SBI) ನಂತಹ ರಾಷ್ಟ್ರೀಕೃತ ಬ್ಯಾಂಕ್ಗಳ ಶಾಖೆ ತೆರೆಯಬೇಕು. ರೈತರ ಸಮಸ್ಯೆಗಳನ್ನು ಆಲಿಸಿದ ಕೇಂದ್ರ ತಂಡವು ಸಕಾರಾತ್ಮಕವಾಗಿ ಸ್ಪಂದಿಸಿ, ಕೇಂದ್ರ ಮಟ್ಟದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿತು.
ಚಿತ್ರದುರ್ಗವನ್ನು ಶಾಶ್ವತ ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಒತ್ತಾಯ
ದೊಡ್ಡೇರಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತ ಮುಖಂಡ ಭೂತಯ್ಯ ಅವರ ನೇತೃತ್ವದ ನಿಯೋಗ ಕೇಂದ್ರ ತಂಡಕ್ಕೆ ಮನವಿ ಸಲ್ಲಿಸಿ, “ಚಿತ್ರದುರ್ಗ ಜಿಲ್ಲೆಯನ್ನು ಶಾಶ್ವತ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ವಿಳಂಬ ಮಾಡದೆ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಜಾನುವಾರುಗಳ ರಕ್ಷಣೆಗಾಗಿ ತಕ್ಷಣವೇ ಗೋಶಾಲೆ ಮತ್ತು ಮೇವು ಬ್ಯಾಂಕ್ಗಳನ್ನು ಸ್ಥಾಪಿಸಬೇಕು” ಎಂದು ಮನವಿ ಮಾಡಿತು. ನಂತರ ಕೇಂದ್ರ ತಂಡವು ಕುರುಡಿಹಳ್ಳಿಯ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿತು.
ಪರಿಶೀಲನಾ ಪ್ರವಾಸದಲ್ಲಿ ಜಿಲ್ಲಾಧಿಕಾರಿ ಎಸ್. ರಮ್ಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.