ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಜಿಲ್ಲೆಯಲ್ಲಿನ ರೈತ, ಕಾರ್ಮಿಕ ಸೇರಿ ನೂರಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೋರಾಟ ನಡೆಸಿದ್ದು, ಅವರನ್ನು ಸ್ಮರಿಸೋಣಾ ಹಾಗೂ ಭದ್ರಾ ನೀರು ಹರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸನ್ಮಾನಿಸೋಣಾ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಮಾದಾರ ಚನ್ನಯ್ಯ ಮಠದ ಪಕ್ಕದ ಮೈದಾನದಲ್ಲಿ ಸೆ.25ರ ಮಧ್ಯಾಹ್ನ 12 ಗಂಟೆಗೆ ರೈತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಮ್ಮಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಭದ್ರೆ ನೀರು ತಂದ ಭಗೀರಥನಿಗೆ ಸನ್ಮಾನಿಸೋಣಾ ಎಂದಿದ್ದಾರೆ.
ಭದ್ರಾ ಹೋರಾಟಕ್ಕಾಗಿ ಪಿ.ಕೋದಂಡರಾಮಯ್ಯ, ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್,
ಸೋಮುಗದ್ದು ರಂಗಸ್ವಾಮಿ ಸೇರಿ ಸಾವಿರಾರು ಮಂದಿ ಹೋರಾಟ ನಡೆಸಿದ್ದಾರೆ. ಇದರೊಂದಿಗೆ ಜಿಲ್ಲೆಯ ಎಲ್ಲ ರಾಜಕಾರಣಿಗಳು, ಜನಪ್ರತಿನಿಧಿಗಳು ಶ್ರಮಿಸಿದ್ದಾರೆ.
ಮುಖ್ಯವಾಗಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯ ಬಜೆಟ್‌ನಲ್ಲಿ ಯೋಜನೆ ಸಾಧಕ-ಬಾಧಕ ಕುರಿತು ಅಧ್ಯಯನ ಸಮಿತಿ ರಚಿಸುವ ಮೂಲಕ ಯೋಜನೆಗೆ ಸರ್ಕಾರಿ ಮನ್ನಣೆ ನೀಡಲಾಗಿತ್ತು. ಬಳಿಕ ಎಲ್ಲ ಮುಖ್ಯಮಂತ್ರಿಗಳು ತಮ್ಮ ಕಾಲಘಟ್ಟದಲ್ಲಿ ಯೋಜನೆಗೆ ಪೂರಕವಾಗಿ ಶ್ರಮಿಸಿದ್ದಾರೆ. ಹೆಚ್ಚು ಅನುದಾನವನ್ನು ಸಿದ್ದರಾಮಯ್ಯ ನೀಡಿದ್ದು, ಈಗ ಕಾಂಗ್ರೆಸ್ ಸರ್ಕಾರದಲ್ಲಿಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭದ್ರೆ ನೀರು ಜಿಲ್ಲೆಗೆ ಹರಿಸಿದ್ದಾರೆ.
ಅದರಲ್ಲೂ ಸದಾ ಬರಪೀಡಿತ ಪ್ರದೇಶವಾಗಿರುವ ಹೊಳಲ್ಕೆರೆ ತಾಲ್ಲೂಕು ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕು, ಕುಡಿಯುವ ನೀರಿಗೂ ತತ್ವಾರವಾಗಿರುವ ಈ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳೂ ಅತ್ಯಂತ ಕಷ್ಟದಾಯಕವಾಗಿತ್ತು. ಇಲ್ಲಿನ ಜನರು ಗುಳೇ ಹೋಗುವುದು ಸಾಮಾನ್ಯವಾಗಿತ್ತು. ಬಡತನ ಇಲ್ಲಿ ಹಾಸುಹೊಕ್ಕಾಗಿತ್ತು. ದೇಶಕ್ಕೆ ಸ್ವಾತಂತ್ರ‍್ಯ ಬಂದು 80 ವರ್ಷವಾಗಿದ್ದರೂ ಈ ತಾಲ್ಲೂಕಿನ ರೈತರು ಸೇರಿ ಎಲ್ಲ ಜನರೂ ಸಂಕಷ್ಟದಲ್ಲಿಯೇ ಕಾಲ ಕಳೆಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಯೋಜನೆ ವ್ಯಾಪ್ತಿಗೆ ಹೊಳಲ್ಕೆರೆಯನ್ನು ಸಿದ್ದರಾಮಯ್ಯ ಸೇರ್ಪಡೆ ಮಾಡಿದ್ದರು. ಈಗ ಹೊಳಲ್ಕೆರೆ ತಾಲ್ಲೂಕಿನ ಕೆರೆಗಳನ್ನು ಭರ್ತಿ ಮಾಡಿ ಜನ ಸಾಮಾನ್ಯರ ಹೃದಯದಲ್ಲಿ ಕನಸುಗಳನ್ನು ಬಿತ್ತಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುವ ಕೆಲಸ ಮಾಡಬೇಕಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸುವ ಜೊತೆಗೆ 5,300 ಕೋಟಿ ರೂ. ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ತರುವುದು, ರಾಜ್ಯ ಸರ್ಕಾರದಿಂದ ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ, ಜಿಲ್ಲೆಯನ್ನು ಹಸಿರುಗೊಳಿಸುವಂತೆ ಕೋರಬೇಕಾಗಿದೆ. ಆದ್ದರಿಂದ ರೈತರು, ನಾಗರಿಕರು, ಮಹಿಳೆಯರು ವಿದ್ಯಾರ್ಥಿಗಳು, ಯುವ ಜನರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲ ಪಕ್ಷಗಳ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಂಜನೇಯ ಕೋರಿದ್ದಾರೆ.