Home ಭದ್ರಾವತರಣ’: ಫಲಿಸಿತು ಭಗೀರಥ ಪ್ರಯತ್ನ, ‘ಪೂಜಿಸಿ’ ಭದ್ರೆ ಹರಿವಿಗೆ ಚಾಲನೆ ನೀಡಿದ ಸಚಿವ ಟಿ.ರಘುಮೂರ್ತಿ
Home

ಭದ್ರಾವತರಣ’: ಫಲಿಸಿತು ಭಗೀರಥ ಪ್ರಯತ್ನ, ‘ಪೂಜಿಸಿ’ ಭದ್ರೆ ಹರಿವಿಗೆ ಚಾಲನೆ ನೀಡಿದ ಸಚಿವ ಟಿ.ರಘುಮೂರ್ತಿ

Share
Share
  • ಐತಿಹಾಸಿಕ ಕ್ಷಣಕ್ಕೆ ಜಿಲ್ಲೆಯ ಶಾಸಕರ ಸಾಥ್
  • ಎರಡು ತಿಂಗಳಲ್ಲಿ ಜಿಲ್ಲೆಯ ಕಡೆ ಮುಖಮಾಡುವಳು ತುಂಗೆ

ಚಿತ್ರದುರ್ಗ: ಐದಾರು ದಶಕಗಳ ಕಾಲದ ಭದ್ರಾ ಮೇಲ್ದಂಡೆ ಯೋಜನೆಯ ಸುದೀರ್ಘ ಕನಸು ಇಂದು ನನಸಾಗುವತ್ತ ಸಾಗಿದೆ. ಬಯಲು ಸೀಮೆಯ ಜನರ ಭಗೀರಥ ಪ್ರಯತ್ನಕ್ಕೆ ಭದ್ರೆ ಒಲಿದಿದ್ದು, ‘ಭದ್ರಾವತರಣಕ್ಕೆ’ ದಿನ ಗಣನೆ ಶುರುವಾಗಿದೆ. ಧಾವಂತದಿಂದ ಹರಿದು ಬರುತ್ತಿರುವ ಭಧ್ರೆ ಜಿಲ್ಲೆಗೆ ಪ್ರವೇಶಿಸಿದೊಡನೆ ಸದಾ ಬರಗಾಲದ ಜಿಲ್ಲೆ ಎಂಬ ಹಣೆಪಟ್ಟಿಗೆ ಪಾಪ ವಿಮೋಚನೆಯಾಗುವ ಕನಸು ಚಿಗುರೊಡೆದಿದೆ. ಭದ್ರೆಯೊಡನೆ ಇನ್ನೆರಡು ತಿಂಗಳಲ್ಲಿ‌ ತುಂಗೆಯು ಜಿಲ್ಲೆಯ ಕಡೆ ಮುಖಮಾಡಲಿದ್ದಾಳೆ.

ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ರಮಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಇನ್ ಟೇಕ್ ಪಾಯಿಂಟ್(ಲಕ್ಕವಳ್ಳಿ ಅಣೆಕಟ್ಟು) ನಲ್ಲಿ ಭಾನುವಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರು ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಸಾಕ್ಷಾತ್ಕಾರಗೊಳ್ಳುತ್ತಿದೆ ದಶಕಗಳ ಕನಸು

ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಟಿ. ರಘುಮೂರ್ತಿ, ಇಂದು ಇತಿಹಾಸದಲ್ಲಿ ನೆನಪಿಡಬೇಕಾದ ಮಹತ್ವದ ದಿನ. ಐದಾರು ದಶಕಗಳಿಂದ ಬಯಲುಸೀಮೆ ಜನರು ಕಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕನಸು ಇಂದು ನನಸಾಗುತ್ತಿದೆ. ಈ ಯೋಜನೆಗೆ ಮುನ್ನುಡಿ ಬರೆದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ. ಕೃಷ್ಣ ಹಾಗೂ ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಸೇರಿದಂತೆ, ಯೋಜನೆಯ ಸಾಕಾರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಹೋರಾಟಗಾರರು, ರೈತರು, ಸ್ವಾಮೀಜಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾದಿಂದ 17.4 ಟಿ.ಎಂ.ಸಿ ಹಾಗೂ ಭದ್ರಾದಿಂದ 12.5 ಟಿ.ಎಂ.ಸಿ ಸೇರಿ ಒಟ್ಟು 29.9 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಪ್ರಸ್ತುತ ಯೋಜನೆ ವೆಚ್ಚ ರೂ.21,500 ಕೋಟಿ ಆಗಿದೆ. ಯೋಜನೆಯಿಂದ ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ 4 ಜಿಲ್ಲೆಗಳ 12 ತಾಲೂಕುಗಳಿಗೆ ಅನುಕೂಲವಾಗಲಿದೆ. ಒಟ್ಟು 2,25,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಒಟ್ಟು 367 ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ ಇದಾಗಿದೆ. ತುಂಗಾದಿಂದ ಬರಬೇಕಾದ 17.4 ಟಿ.ಎಂ.ಸಿ ನೀರಿನ ಕಾಮಗಾರಿಗಳು ಎರಡು ಟವರ್ ಕೆಲಸ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಚಿವ ಟಿ.ರಘುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷಾತೀತವಾಗಿ ಯೋಜನೆಗೆ ನೆರವು

ಭದ್ರಾ ಮೇಲ್ದಂಡೆ ಯೋಜನೆಗೆ ಧರಂ ಸಿಂಗ್, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಿಂದ ಹಿಡಿದು ಸಿದ್ದರಾಮಯ್ಯನವರ ಸರ್ಕಾರದವರೆಗೆ ಹಲವು ಹಂತಗಳಲ್ಲಿ ಅನುದಾನ ಹಂಚಿಕೆಯಾಗಿದೆ. ಆರಂಭದಲ್ಲಿ ರೂ.2,814 ಕೋಟಿಗೆ ಚಾಲನೆ ಸಿಕ್ಕ ಈ ಯೋಜನೆಗೆ, ಆನಂತರದ ಸಮ್ಮಿಶ್ರ ಸರ್ಕಾರದಲ್ಲಿ ರೂ.5,500 ಕೋಟಿ, 2013-18ರ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರೂ.12,500 ಕೋಟಿ ಹಾಗೂ 2022ರ ಸರ್ಕಾರದ ಅವಧಿಯಲ್ಲಿ ರೂ.21,500 ಕೋಟಿಗೆ ಪರಿಷ್ಕೃತ ಮುಂಜೂರಾತಿ ದೊರೆತಿದೆ. ಯೋಜನೆ ಅನುಷ್ಠಾನಗೊಳ್ಳಲು ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ನೆರವು ನೀಡಿದನ್ನು ಸಚಿವ ಟಿ.ರಘುಮೂರ್ತಿ ಸ್ಮರಿಸಿದರು.

ರೂ.11,500 ಕೋಟಿ ವೆಚ್ಚ

ಯೋಜನೆಗೆ ಇದುವರೆಗೆ ಸುಮಾರು ರೂ.11,500 ಕೋಟಿ ವೆಚ್ಚವಾಗಿದ್ದು, ಪ್ರಸ್ತುತ ಕೆರೆಗಳಿಗೆ ನೀರು ತುಂಬಿಸುವ ಕೆಲಸಗಳು ನಡೆಯುತ್ತಿವೆ. ಕೇಂದ್ರ ಸರ್ಕಾರವು 2022-23ರ ಆಯವ್ಯಯದಲ್ಲಿ ಭರವಸೆ ನೀಡಿದ್ದ ರೂ.5,300 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದರೆ ಕಾಮಗಾರಿ ಇನ್ನು ಹೆಚ್ಚಿನ ವೇಗ ಪಡೆದುಕೊಳ್ಳುತ್ತಿತ್ತು. ಇಂದಿಗೂ ಕೇಂದ್ರದ ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದು ಸಚಿವ ಟಿ.ರಘುಮೂರ್ತಿ ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟ್ರಬಲ್ ಶೂಟರ್

ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಎದುರಾಗಿದ್ದ ಹಲವು ಅಡೆತಡೆಗಳನ್ನು ನಿವಾರಿಸುವಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೋರಿದ ಬದ್ಧತೆಯನ್ನು ಸಚಿವ ಟಿ.ರಘುಮೂರ್ತಿ ಶ್ಲಾಘಿಸಿದರು.

ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಪ್ರಸ್ತುತ ಮುಖ್ಯಮಂತ್ರಿಗಳು, ತರೀಕೆರೆ ಶಾಸಕರಾದ ಶ್ರೀನಿವಾಸ್ ಹಾಗೂ ಇತರ ಜನಪ್ರತಿನಿಧಿಗಳೊಂದಿಗೆ ಸ್ವತಃ ಸ್ಥಳಕ್ಕೆ ಭೇಟಿ ನೀಡಿ, ರೈತರೊಂದಿಗೆ ಮಾತುಕತೆ ನಡೆಸಿ ಯೋಜನೆಯಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಭದ್ರಾ ಜಲಾಶಯದ ವ್ಯಾಪ್ತಿಯ ದಾವಣಗೆರೆ ಮತ್ತು ಇತರ ಭಾಗದ ಜನಪ್ರತಿನಿಧಿಗಳು ಹಾಗೂ ರೈತ ಸಂಘದ ಮುಖಂಡರಿಗೆ ನೀರಿನ ಲಭ್ಯತೆ ಬಗ್ಗೆ ಆತಂಕವಿತ್ತು. ಆದರೆ, ಇಡೀ ರಾಜ್ಯದ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ ಅವರು ಬರಪೀಡಿತ ನಾಲ್ಕು ಜಿಲ್ಲೆಗಳಿಗೆ ನ್ಯಾಯ ಒದಗಿಸಲು ನೀರಿನ ಹಂಚಿಕೆ ಮಾಡಿದ್ದಾರೆ ಎಂದು ಸಚಿವ ಟಿ.ರಘುಮೂರ್ತಿ ಹೇಳಿದರು.

2028ರ ವೇಳೆ ಯೋಜನೆ ಪೂರ್ಣ

ಈ ಯೋಜನೆಯಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ. 2028ರ ವೇಳೆಗೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸುವಂತೆ ಸದನದಲ್ಲೂ ಒತ್ತಾಯಿಸಲಾಗಿದೆ. ನಾಲ್ಕು ಜಿಲ್ಲೆಗಳ ರೈತರ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಶ್ರಮಿಸಬೇಕಿದೆ ಎಂದು ಸಚಿವ ಟಿ.ರಘುಮೂರ್ತಿ ಹೇಳಿದರು

ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಿ ಶ್ರಮಿಸಿದ ದಿವಂಗತ ಡಿ.ಸುಧಾಕರ್, ಟಿ ಬಿ ಜಯಚಂದ್ರ ಸೇರಿದಂತೆ ಎಲ್ಲಾ ಹಿರಿಯ ನಾಯಕರ ಕೊಡುಗೆಯನ್ನು ಸಚಿವರು ಈ ಸಂದರ್ಭದಲ್ಲಿ ಸ್ಮರಿಸಿದರು. ಇಂದಿನಿಂದ ಹರಿದ ನೀರು ಇನ್ನು ಒಂದು ವಾರದಲ್ಲಿ ಗೋನೂರು ತಲುಪಲಿದ್ದು, ನೀರು ಬಂದ ನಂತರ ಈ ಯೋಜನೆಯ ಸಾಕಾರಕ್ಕೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ನಾಯಕರನ್ನು ಆಹ್ವಾನಿಸಿ, ಪಕ್ಷಾತೀತವಾಗಿ ಚಿತ್ರದುರ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಟಿ.ರಘುಮೂರ್ತಿ ತಿಳಿಸಿದರು.

ಕೇಂದ್ರದ ಅನುದಾನಕ್ಕೆ ಒತ್ತಾಯ

ಮೂರು ವರ್ಷಗಳ ಹಿಂದೆ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ಘೋಷಿಸಲಾಗಿತ್ತು. ಈಗ ಅದು ಪರಿಷ್ಕೃತಗೊಂಡು ಸುಮಾರು ರೂ.6,000 ಕೋಟಿಗೆ ತಲುಪಿದೆ. ಮಧ್ಯ ಕರ್ನಾಟಕದ ಬರದ ಪೀಡಿತ ಪ್ರದೇಶಗಳಿಗೆ ನೀರುಣಿಸುವ ಈ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ್ದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರದ ಹಿರಿಯ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ ಒತ್ತಾಯಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿದರೆ 2028ರ ವೇಳೆಗೆ ಯೋಜನೆಯನ್ನು ಸಂಪೂರ್ಣವಾಗಿ ಮುಗಿಸಲು ಸಾಧ್ಯವಾಗುತ್ತದೆ. ಈ ವಿಚಾರದಲ್ಲಿ ಪಕ್ಷಾತೀತವಾಗಿ ಎಲ್ಲ ನಾಯಕರೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದರು.

​ಹಲವು ವರ್ಷಗಳ ಹೋರಾಟ ಮತ್ತು ಶ್ರಮದ ಫಲವಾಗಿ ಇಂದು ಚಿತ್ರದುರ್ಗ ಭಾಗಕ್ಕೆ ನೀರು ತಲುಪುವ ವಾತಾವರಣ ನಿರ್ಮಾಣವಾಗಿದೆ. ಸುಮಾರು 110 ಕಿಲೋಮೀಟರ್‌ವರೆಗೂ ನೀರು ಹರಿಯಲಿದ್ದು, ಬಹುದಿನಗಳ ಕನಸು ಇಂದಿಗೆ ನನಸಾಗುತ್ತಿದೆ. ತುಮಕೂರು ಕಾಲುವೆ ಕಾಮಗಾರಿಗೂ ವೇಗ ನೀಡಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ರೈತರಿಗೆ ಸೂಕ್ತ ಪರಿಹಾರ: ಶಾಸಕ ಶ್ರೀನಿವಾಸ್

ಈ ಸಂದರ್ಭದಲ್ಲಿ ಮಾತನಾಡಿದ ತರೀಕೆರೆ ಶಾಸಕ ಶ್ರೀನಿವಾಸ್, ಆರಂಭದಲ್ಲಿ ಅಬ್ಬಿನಹೊಳೆ ಭಾಗದಲ್ಲಿ ಜಮೀನು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆಯಾಗಿತ್ತು. ಎಕರೆಗೆ ಕೇವಲ ರೂ.3 ಲಕ್ಷ ಪರಿಹಾರ ನಿಗದಿಪಡಿಸಲಾಗಿತ್ತು.ಆದರೆ, ಅಂದಿನ ಉಪಮುಖ್ಯಮಂತ್ರಿ, ಇಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರ ಹೋರಾಟ ಹಾಗೂ ಶಾಸಕರು, ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಪರಿಹಾರ ಮೊತ್ತವನ್ನು ರೂ.32 ಲಕ್ಷಕ್ಕೆ ಹೆಚ್ಚಿಸಿ ಅನುಮೋದನೆ ನೀಡಲಾಯಿತು. ಶಾಸಕರ ಹಾಗೂ ಸರ್ಕಾರದ ಮಾತಿಗೆ ಗೌರವ ನೀಡಿ ಅಬ್ಬಿನಹೊಳೆಯ ರೈತರು ಜಮೀನು ಬಿಟ್ಟುಕೊಟ್ಟಿದ್ದರಿಂದ ಇಂದು ಕಾಮಗಾರಿ ಪೂರ್ಣಗೊಂಡು ನೀರು ಹರಿಯುವಂತಾಗಿದೆ ಎಂದು ಅವರು ನೆನಪಿಸಿಕೊಂಡರು.

ಈ ವೇಳೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಗಂಜಿಗಟ್ಟೆ ಶಿವಣ್ಣ, ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ರವಿಶಂಕರ್, ಅಧೀಕ್ಷಕ ಇಂಜಿನಿಯರ್ ಹರೀಶ್,ಕವಿತಾ, ಕಾರ್ಯಪಾಲಕ ಇಂಜಿನಿಯರ್ ಕಿರಣ್ ಕುಮಾರ್, ನಿವೃತ್ತ ಮುಖ್ಯ ಇಂಜಿನಿಯರ್ ಚಲುವರಾಜ್ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.

Author

  • Prashanth Kumar N

    ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

    ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ.

    ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Share
Written by
Prashanth Kumar N - Editor

ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ. ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Loading News...

More News

Related Articles

ಪುತ್ರಿಯೊಂದಿಗೆ ಕಾಮಾಕ್ಯ ದೇವಿ ದರ್ಶನ ಪಡೆದ ಶಾಸಕ ಪಪ್ಪಿ

ಗುವಾಹಟಿ: ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಭಾನುವಾರ ಪುತ್ರಿಯೊಂದಿಗೆ ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಶಕ್ತಿ...

ಭದ್ರಾ ಯೋಜನೆಗೆ ಹೆಚ್. ಹನುಮಂತಪ್ಪ ಕೊಡುಗೆ ಅಪಾರ: ಚಿತ್ರದುರ್ಗದಲ್ಲಿ ನುಡಿನಮನ

ಚಿತ್ರದುರ್ಗ: ಹಿರಿಯ ರಾಜಕಾರಣಿ, ದಲಿತ ಹಾಗೂ ಹಿಂದುಳಿದ ವರ್ಗಗಳ ಗಟ್ಟಿ ಧ್ವನಿಯಾಗಿದ್ದ ಹೆಚ್. ಹನುಮಂತಪ್ಪನವರ ಅಗಲಿಕೆ...

ಚಿತ್ರದುರ್ಗದ 20ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವ: ಬೈಕ್ ರ್ಯಾಲಿ, ಶೋಭಾಯಾತ್ರೆಯ ಸಂಪೂರ್ಣ ವಿವರ

ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ (VHP) ಹಾಗೂ ಬಜರಂಗದಳದ ವತಿಯಿಂದ ಆಯೋಜಿಸಲಾಗುವ ದೇಶದ 2ನೇ ಅತಿದೊಡ್ಡ...

ಪಿಎಗಳ ಮಾತು ಕೇಳಿ ರಾಜಕೀಯ ಮುಗಿಸ್ಕೊಬೇಡ: ಬಿ. ಶ್ರೀರಾಮುಲುಗೆ ತಿಪ್ಪೇಸ್ವಾಮಿ ಖಡಕ್ ಎಚ್ಚರಿಕೆ

ಮೊಣಕಾಲ್ಮೂರು (ಚಿತ್ರದುರ್ಗ ಲೈವ್): ಮೊಣಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಪಾಳೆಯದ ಆಂತರಿಕ ಬೇಗುದಿ ಮತ್ತೊಮ್ಮೆ ಭುಗಿಲೆದ್ದಿದೆ....